
ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಗೆ ಸಂಕಷ್ಟಗಳು ಕಡಿಮೆಯೇ ಆಗುತ್ತಿಲ್ಲ. ಕಾಲ ಕಾಲಕ್ಕೆ ಅವರ ಮೇಲೆ ಹಣಕಾಸು ಮತ್ತು ಬ್ಯುಸಿನೆಸ್ಗೆ ಸಂಬಂಧಿಸಿದಂತೆ ಆರೋಪಗಳು ಬರುತ್ತಲೇ ಇವೆ. ರಾಜ್ ಕುಂದ್ರಾ ಅಂತೂ ಜೈಲಿಗೆ ಸಹ ಹೋಗಿ ಬಂದಿದ್ದಾಗಿದೆ. ಇದೀಗ ಎಲ್ಲವೂ ಸರಿ ಹೋಯಿತು ಎಂದುಕೊಳ್ಳುತ್ತಿರುವಾಗಲೇ ಇತ್ತೀಚೆಗಷ್ಟೆ ಈ ದಂಪತಿಯ ಮೇಲೆ 60 ಕೋಟಿ ರೂಪಾಯಿ ಹಣಕಾಸು ವಂಚನೆ ಆರೋಪ ಕೇಳಿ ಬಂದಿತ್ತು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಲುಕೌಟ್ ನೊಟೀಸ್ ಜಾರಿ ಆಗಿದೆ.
ದೀಪಕ್ ಕೊಠಾರಿ ಹೆಸರಿನ ಉದ್ಯಮಿಯೊಬ್ಬರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದಂಪತಿ 2015 ಮತ್ತು 2023ರ ನಡುವೆ 60 ಕೋಟಿ ರೂಪಾಯಿ ಹಣವನ್ನು ತಮ್ಮಿಂದ ಉದ್ಯಮ ವಿಸ್ತರಣೆಗೆ ಸಾಲವಾಗಿ ಪಡೆದಿದ್ದಾರೆ. ಆದರೆ ಆ ಹಣವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸಿಕೊಳ್ಳದೆ ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿದ್ದಾರೆ ಎಂದು ದೀಪಕ್ ಆರೋಪ ಮಾಡಿದ್ದಾರೆ. ಅಲ್ಲದೆ ತಾವು ಕೊಟ್ಟ ಹಣವನ್ನು ಹೂಡಿಕೆ ಎಂದು ತೋರಿಸುವ ಮೂಲಕ ತೆರಿಗೆ ವಂಚನೆಯನ್ನೂ ಸಹ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಶಿಲ್ಪಾ ಶೆಟ್ಟಿ ಹೂಡಿಕೆ ಮಾಡಿರುವ ಉದ್ಯಮಗಳು ಯಾವುವು ಗೊತ್ತೆ?
ತಾವು ಸಾಲವಾಗಿ ಪಡೆದಿರುವ ಹಣಕ್ಕೆ ವಾರ್ಷಿಕ 12% ಬಡ್ಡಿ ಕೊಡುವುದಾಗಿ ದಂಪತಿಗಳು ಒಪ್ಪಂದ ಮಾಡಿಕೊಂಡಿದ್ದರಂತೆ ಅಲ್ಲದೆ 2016 ರಲ್ಲಿ ಶಿಲ್ಪಾ ಶೆಟ್ಟಿ ಸಾಲಕ್ಕೆ ಗ್ಯಾರೆಂಟಿಯನ್ನು ಸಹ ಒದಗಿಸಿದ್ದರಂತೆ. ಆದರೆ ಅದಾದ ಬಳಿಕ ಅವರೇ ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ತಾವು ಕೊಟ್ಟ ಹಣವನ್ನು ಹೂಡಿಕೆಗಳಿಗಾಗಿ ಬಳಸಿಕೊಂಡಿದ್ದಲ್ಲದೆ, ಬಡ್ಡಿ ಪಾವತಿಸದೆ ಮೋಸ ಮಾಡಿದ್ದಾರೆ ಎಂದು ದೀಪಕ್ ಆರೋಪ ಮಾಡಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ತಡೆ ವಿಭಾಗ ಮಾಡುತ್ತಿದ್ದು, ಇದೀಗ ನ್ಯಾಯಾಲಯವು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕೌಟ್ ನೊಟೀಸ್ ನೀಡಿದೆ. ನೊಟೀಸ್ ಜಾರಿ ಆಗಿರುವ ಕಾರಣದಿಂದಾಗಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರುಗಳು ಹೊರದೇಶಗಳಿಗೆ ಸಂಚಾರ ಮಾಡದಂತಾಗಿದೆ. ಆದರೆ ಈ ಆರೋಪಗಳೆಲ್ಲ ಸುಳ್ಳು, ತಾವು ನ್ಯಾಯಾಲಯದ ಮೂಲಕವೇ ಇದಕ್ಕೆ ಉತ್ತರ ನೀಡುವುದಾಗಿ ರಾಜ್ ಕುಂದ್ರಾ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರುಗಳು ಹಲವಾರು ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಕುಂದ್ರಾ ಜೊತೆಯಾಗಿಯೂ ಸಹ ಹಲವು ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಶಿಲ್ಪಾ ಶೆಟ್ಟಿ ತಮ್ಮ ಸಹ ಒಡೆತನದ ಬಾಸ್ಟಿಯನ್ ಹೋಟೆಲ್ನ ಬಾಂದ್ರಾ ಬ್ರ್ಯಾಂಚ್ ಅನ್ನು ಬಂದ್ ಮಾಡಿದರು. ಆಗಲೂ ಸಹ ಈ 60 ಕೋಟಿ ವಂಚನೆ ಪ್ರಕರಣ ಸುದ್ದಿಗೆ ಬಂದಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ