ಭಾರತದ ಪ್ರತಿಭಾವಂತ ನಟರ ಸಾಲಿನಲ್ಲಿ ಆಮಿರ್ ಖಾನ್ ಹೆಸರು ಟಾಪ್ 10 ಅಲ್ಲಿ ಇದ್ದೇ ಇರುತ್ತದೆ. ಬಾಲಿವುಡ್ ಪ್ರಭಾವಿ ಮೂರು ಖಾನ್ಗಳಲ್ಲಿ ಒಬ್ಬರಾಗಿರುವ ಆಮಿರ್ ಖಾನ್ಗೆ ಸಲ್ಮಾನ್, ಶಾರುಖ್ ರೀತಿಯಲ್ಲಿಯೇ ದೊಡ್ಡ ಅಭಿಮಾನಿ ಬಳಗವಿದೆ. ಸಲ್ಮಾನ್ ಹಾಗೂ ಶಾರುಖ್ ಖಾನ್ಗೆ ಹೋಲಿಸಿದರೆ ಭಿನ್ನ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ಆಮಿರ್ ಖಾನ್, ಕಮರ್ಶಿಯಲ್, ಜನಪ್ರಿಯ ಮಾದರಿಯ ಹಿಂದೆ ಹೋಗದೆ ಜನಕ್ಕೆ, ಸಮಾಜಕ್ಕೆ ಬೇಕಾದ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಆಮಿರ್ ಖಾನ್, ಸಿನಿಮಾದಿಂದಲೇ ನಿವೃತ್ತಿ ತೆಗೆದುಕೊಂಡು ಬಿಟ್ಟಿದ್ದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡ’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿತ್ತು. ‘ಫಾರೆಸ್ಟ್ ಗಂಫ್’ ಸಿನಿಮಾದ ರೀಮೇಕ್ ಆದ ಈ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಆದರೆ ಈ ಸಿನಿಮಾದ ಬಿಡುಗಡೆಗೆ ಮುಂಚೆಯೇ ಆಮಿರ್ ಖಾನ್, ಸಿನಿಮಾ ರಂಗದಿಂದ ವಿದಾಯ ಹೇಳುವ ನಿರ್ಣಯ ಮಾಡಿಬಿಟ್ಟಿದ್ದರಂತೆ. ಆದರೆ ಅದನ್ನು ಘೋಷಣೆ ಮಾಡುವುದು ಬೇಡ ಎಂದುಕೊಂಡಿದ್ದರಂತೆ. ಘೋಷಣೆ ಮಾಡಿದರೆ ಸಿನಿಮಾದ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದುಕೊಳ್ಳುತ್ತಾರೆ, ಹೇಗೋ ನನ್ನ ಸಿನಿಮಾಗಳು ಮೂರು ವರ್ಷ, ನಾಲ್ಕು ವರ್ಷಕ್ಕೆ ಒಮ್ಮೆ ಬರುತ್ತವೆ ಹಾಗಾಗಿ ಜನರಿಗೆ ಗೊತ್ತು ಸಹ ಆಗುವುದಿಲ್ಲ ಮೌನವಾಗಿಯೇ ನಿವೃತ್ತಿ ಪಡೆದುಕೊಳ್ಳೋಣ ಎಂದುಕೊಂಡಿದ್ದರಂತೆ.
ಇದನ್ನೂ ಓದಿ:22 ವರ್ಷದ ಹಿಂದೆ ಡಿವೋರ್ಸ್ ನೀಡಿದ ಮೊದಲ ಪತ್ನಿ ಜತೆ ಈಗ ಆಮಿರ್ ಖಾನ್ ಪಾರ್ಟಿ
ಸಿನಿಮಾದಲ್ಲಿ ನಟಿಸುವುದು ಹಾಗೂ ನಿರ್ಮಿಸುವುದು ಎರಡರಿಂದಲೂ ನಿವೃತ್ತರಾಗುವ ಬಗ್ಗೆ ಆಮಿರ್ ಖಾನ್ ನಿಶ್ಚಯ ಮಾಡಿದ್ದರಂತೆ. ಆಮಿರ್ ಖಾನ್ ತನ್ನ ಪುತ್ರನಿಗೆ ಆಮಿರ್ ಖಾನ್ ಪ್ರೊಡಕ್ಷನ್ ನೋಡಿಕೋ ಎಂದು ಜವಾಬ್ದಾರಿಯನ್ನೂ ವಹಿಸಿಬಿಟ್ಟಿದ್ದರಂತೆ. ಈ ವಿಷಯವನ್ನು ಕುಟುಂಬದವರ ಬಳಿ ಮಾತ್ರವೇ ಹೇಳಿಕೊಂಡಿದ್ದರಂತೆ. ಆದರೆ ಮಕ್ಕಳಿಬ್ಬರೂ ‘ನೀವು ಮಾಡುತ್ತಿರುವುದು ತಪ್ಪು, ನೀವು ಅತಿಯಾಗಿ ಯೋಚನೆ ಮಾಡುತ್ತಿದ್ದೀರ ಎಂದು ಬೈದರಂತೆ. ಇನ್ನು ಮಾಜಿ ಪತ್ನಿ, ಆತ್ಮೀಯ ಗೆಳತಿ ಕಿರಣ್ ರಾವ್, ‘ನಿಮ್ಮನ್ನು ನೋಡಿದಾಗಲೆಲ್ಲ ನಿಮ್ಮ ಸಿನಿಮಾಗಳು ಕಣ್ಣ ಮುಂದೆ ಬರುತ್ತವೆ, ಅಲ್ಲದೆ ನಿಮ್ಮೊಳಗೆ ಇನ್ನೂ ಸಾಕಷ್ಟು ಸಿನಿಮಾ ಉಳಿದುಕೊಂಡಿದೆ ದಯವಿಟ್ಟು ನಿವೃತ್ತಿ ಬೇಡ’ ಎಂದು ಹೇಳಿ ಕಣ್ಣೀರು ಹಾಕಿದರಂತೆ.
ಕೊನೆಗೆ ಆಮಿರ್ ಖಾನ್ ಕುಟುಂಬದವರ ಆಪ್ತ ಮಾತುಗಳನ್ನು ಗಮನಕ್ಕೆ ತೆಗೆದುಕೊಂಡು ನಿರ್ಣಯವನ್ನು ಬದಲು ಮಾಡಿದರಂತೆ. ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಹೀನಾಯ ಸೋಲಿನ ಬಳಿಕ ಆಮಿರ್ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ‘ಲಾಪತಾ ಲೇಡೀಸ್’ ಸಿನಿಮಾ ನಿರ್ಮಾಣ ಮಾಡಿದರು. ಸಿನಿಮಾವನ್ನು ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದರು. ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ಜನರಿಂದ ದೊರಕಿತು. ಸದ್ಯಕ್ಕೆ ‘ಸಿತಾರೆ ಜಮೀನ್ ಪರ್’ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಟನೆ ಸಹ ಮಾಡುತ್ತಿದ್ದಾರೆ. ಈ ಸಿನಿಮಾದ ನಿರ್ಮಾಣವೂ ಅವರದ್ದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ