
ಆಮಿರ್ ಖಾನ್ ಅವರು ಹಲವು ವರ್ಷಗಳಿಂದ ದೇಶದಲ್ಲಿ ಇದ್ದಾರೆ. ಅವರು ಈ ಮೊದಲು ತಮ್ಮ ಹೇಳಿಕೆಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದೂ ಇದೆ. ಈಗ ಅವರ ರಾಷ್ಟ್ರ ಪ್ರೇಮ ತೋರಿಸುವಂತಹ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಮಿರ್ ಖಾನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಅಷ್ಟಕ್ಕೂ ಏನದು ವಿಚಾರ? ಆ ಘಟನೆ ಬಗ್ಗೆ ಇಲ್ಲಿದೆ ಮಾಹಿತಿ.
ಆಮಿರ್ ಖಾನ್ ಅವರು ‘ದಂಗಲ್’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ಅವರೇ ನಿರ್ಮಾಣ ಕೂಡ ಮಾಡಿದ್ದರು. ಈ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತು. ಈ ಸಿನಿಮಾದ ಬಿಸ್ನೆಸ್ 2 ಸಾವಿರ ಕೋಟಿ ರೂಪಾಯಿಗೂ ಅಧಿಕ. ಚಿತ್ರದ ಬಜೆಟ್ ಕೇವಲ 70 ಕೋಟಿ ರೂಪಾಯಿ ಅಂದರೆ ನೀವು ನಂಬಲೇಬೇಕು. ಆಮಿರ್ ಖಾನ್ ಅವರು ‘ದಂಗಲ್’ ಸಿನಿಮಾ ವಿಚಾರದಲ್ಲಿ ಆದ ಒಂದು ಘಟನೆ ವಿವರಿಸಿದ್ದರು.
‘ದಂಗಲ್’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಗೀತಾ ಫೋಗಟ್ (ಫಾತಿಮಾ ಸನಾ ಶೇಖ್) ಕುಸ್ತಿ ಗೆಲ್ಲುತ್ತಾಳೆ. ಈ ವೇಳೆ ಭಾರತದ ರಾಷ್ಟ್ರಗೀತೆ ಪ್ರಸಾರ ಆಗುತ್ತದೆ. ಭಾರತದ ಧ್ವಜ ಮೇಲಕ್ಕೆ ಹಾರುತ್ತದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಾಣುವಾಗ ಪಾಕಿಸ್ತಾನದ ಸೆನ್ಸಾರ್ ಬೋರ್ಡ್ನವರು ಕಿರಿಕ್ ಮಾಡಿದರಂತೆ.
‘ನನಗೆ ಡಿಸ್ನಿ ಅವರು ಕರೆ ಮಾಡಿ ನಿಮ್ಮ ಸಿನಿಮಾ ಪಾಕಿಸ್ತಾನದಲ್ಲಿ ಪ್ರಸಾರ ಕಾಣಲು ಸೆನ್ಸಾರ್ನವರು ಸಮಸ್ಯೆ ಮಾಡುತ್ತಿದ್ದಾರೆ ಎಂದರು. ಅವರು ಕ್ಲೈಮ್ಯಾಕ್ಸ್ನಲ್ಲಿ ಬರೋ ಭಾರತದ ರಾಷ್ಟ್ರಗೀತೆ ತೆಗೆಯಬೇಕು ಮತ್ತು ಭಾರತದ ಬಾವುಟ ತೋರಿಸಬಾರದು ಎನ್ನುತ್ತಿದ್ದಾರೆ ಎಂದರು. ನಾನು ಮರುಕ್ಷಣವೇ ಬೇಡ ಎಂದೆ. ಇದರಲ್ಲಿ ಯೋಚಿಸುವ ವಿಚಾರವೇ ಇಲ್ಲ’ ಎಂದಿದ್ದರು ಆಮಿರ್ ಖಾನ್.
ಇದನ್ನೂ ಓದಿ: ‘ಆ ರೀತಿ ಮಾಡೋದು ತಪ್ಪು’; ದೀಪಿಕಾಗೆ ಟಾಂಗ್ ಕೊಟ್ಟರಾ ಆಮಿರ್ ಖಾನ್?
‘ನಮ್ಮ ಸಿನಿಮಾ ಪಾಕಿಸ್ತಾನದಲ್ಲಿ ಪ್ರಸಾರ ಕಾಣೋದು ಬೇಡ ಎಂದೆ. ಇದರಲ್ಲಿ ಯೋಚಿಸುವ ವಿಚಾರವೇ ಇಲ್ಲ. ಬಿಸ್ನೆಸ್ ಮೇಲೆ ಪ್ರಭಾವ ಬೀರುತ್ತದೆ, ಲಾಸ್ ಆಗುತ್ತದೆ ಎಂದರು. ನಮ್ಮ ರಾಷ್ಟ್ರಗೀತೆ ತೆಗೆಯಬೇಕು, ಧ್ವಜವನ್ನು ತೆಗೆಯಬೇಕು ಎಂಬತಹ ಬಿಸ್ನೆಸ್ ನನಗೆ ಬೇಡವೇ ಬೇಡ’ ಎಂದಿದ್ದರು ಆಮಿರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.