
ನಟ ಆಮಿರ್ ಖಾನ್ (Aamir Khan) ಅವರು ವೈಯಕ್ತಿಕ ಜೀವನದ ಕಾರಣಕ್ಕೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಅವರ ಎರಡು ಮದುವೆಗಳು ವಿಚ್ಛೇದನದಲ್ಲಿ ಕೊನೆಯಾದವು. ಈಗ ಮೂರನೇ ಮದುವೆ ಬಗ್ಗೆ ಅವರು ಆಲೋಚನೆ ಮಾಡುತ್ತಿದ್ದಾರೆ. ಈ ಮೊದಲು ರಿನಾ ದತ್ತ (Reena Dutta) ಮತ್ತು ಕಿರಣ್ ರಾವ್ ಅವರಿಗೆ ಆಮಿರ್ ಖಾನ್ ವಿಚ್ಛೇದನ ನೀಡಿದ್ದರು. ಬೆಂಗಳೂರು ಮೂಲದ ಮಹಿಳೆ ಗೌರಿ ಜೊತೆ ಈಗ ಆಮಿರ್ ಖಾನ್ ರಿಲೀಷನ್ಶಿಪ್ನಲ್ಲಿ ಇದ್ದಾರೆ. ಅಷ್ಟಕ್ಕೂ ಅವರ ಮೊದಲ ಮದುವೆ ಮುರಿದು ಬಿದ್ದಿದ್ದಕ್ಕೆ ಕಾರಣ ಏನು ಎಂಬುದನ್ನು ಈಗ ಆಮಿರ್ ಖಾನ್ ವಿವರಿಸಿದ್ದಾರೆ.
ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 20ರಂದು ಈ ಸಿನಿಮಾ ತೆರೆಕಾಣಲಿದ್ದು, ಅದರ ಪ್ರಯುಕ್ತ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಅವರು ತಮ್ಮ ಖಾಸಗಿ ಜೀವನದ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ.
1986ರಲ್ಲಿ ಆಮಿರ್ ಖಾನ್ ಮತ್ತು ರೀನಾ ದತ್ತ ಮದುವೆ ನೆರವೇರಿತ್ತು. 2002ರಲ್ಲಿ ಅವರು ವಿಚ್ಛೇದನ ಪಡೆದುಕೊಂಡರು. ಮದುವೆ ನಡೆದಾಗ ಇಬ್ಬರಿಗೂ ಚಿಕ್ಕ ವಯಸ್ಸು. ತಮ್ಮ ಸಂಸಾರದಲ್ಲಿ ಬಿರುಕು ಮೂಡಲು ಅದೇ ಕಾರಣ ಎಂದು ಆಮಿರ್ ಖಾನ್ ಹೇಳಿದ್ದಾರೆ.
‘ನಾನು ಮತ್ತು ರೀನಾ ತುಂಬಾ ಬೇಗ ಮದುವೆ ಆದೆವು. ನನಗೆ ಆಗ 21 ವರ್ಷ ವಯಸ್ಸು. ಆಕೆಗೆ 19 ವರ್ಷ. ನಮ್ಮಿಬ್ಬರಿಗೆ ಕೇವಲ 4 ತಿಂಗಳ ಪರಿಚಯ ಇತ್ತು. ಹೆಚ್ಚು ಸಮಯ ಒಟ್ಟಿಗೆ ಕಳೆದಿರಲಿಲ್ಲ. ಒಬ್ಬರನ್ನೊಬ್ಬರು ಹೆಚ್ಚು ಪ್ರೀತಿಸುತ್ತಿದ್ದೆವು. ಹಾಗಾಗಿ ಮದುವೆ ಆಗಲು ನಿರ್ಧರಿಸಿದೆವು. ಈಗ ಅದನ್ನು ನೆನಪಿಸಿಕೊಂಡರೆ, ಮದುವೆ ಬಗ್ಗೆ ನಿರ್ಧಾರ ಮಾಡುವಾಗ ನಾವು ತುಂಬ ಎಚ್ಚರಿಕೆಯಿಂದ ಇರಬೇಕು ಅನಿಸುತ್ತದೆ. ಆ ಸಂದರ್ಭದಲ್ಲಿ ಯೌವನದ ಹುಮ್ಮಸ್ಸಿನಲ್ಲಿ ಎಷ್ಟೋ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ’ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಥೆ ಕದ್ದ ಆಮಿರ್ ಖಾನ್? ‘ಸಿತಾರೆ ಜಮೀನ್ ಪರ್’ ಸಿನಿಮಾ ಮೇಲೆ ಬಂತು ಆರೋಪ
ಹಾಗಂತ ಮಾಜಿ ಪತ್ನಿ ರೀನಾ ದತ್ತ ಬಗ್ಗೆ ಆಮಿರ್ ಖಾನ್ ಅವರಿಗೆ ಯಾವುದೇ ದೂರುಗಳಿಲ್ಲ. ‘ರೀನಾ ಜೊತೆ ನನ್ನ ಜೀವನ ತುಂಬ ಚೆನ್ನಾಗಿ ಕಳೆಯಿತು. ರೀನಾದು ಏನೂ ತಪ್ಪು ಇಲ್ಲ. ಅವಳು ತುಂಬ ಒಳ್ಳೆಯ ವ್ಯಕ್ತಿ. ನಾವು ಒಟ್ಟಿಗೆ ಬೆಳೆದೆವು. ಪರಸ್ಪರ ಗೌರವ ಇದೆ. ಆದರೆ ಯಾರೂ ಸಹ ಗಡಿಬಿಡಿಯಲ್ಲಿ ಮದುವೆ ಆಗಬಾರದು’ ಎಂದಿದ್ದಾರೆ ಆಮಿರ್ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.