ಕಥೆ ಕದ್ದ ಆಮಿರ್ ಖಾನ್? ‘ಸಿತಾರೆ ಜಮೀನ್ ಪರ್’ ಸಿನಿಮಾ ಮೇಲೆ ಬಂತು ಆರೋಪ
‘ಸಿತಾರೆ ಜಮೀನ್ ಪರ್’ ಸಿನಿಮಾದ ಪ್ರತಿ ಫ್ರೇಮ್ ಕೂಡ ಕಾಪಿ ಎಂದು ಆರೋಪ ಮಾಡಲಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಇದು ಕಾಪಿ ಅಲ್ಲ, ರಿಮೇಕ್ ಎಂದು ಆಮಿರ್ ಖಾನ್ ಫ್ಯಾನ್ಸ್ ವಾದ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಬಾಲಿವುಡ್ ನಟ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾ ಜೂನ್ 20ರಂದು ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಆಯಿತು. ಆಮಿರ್ ಖಾನ್ (Aamir Khan) ಅವರ ಅಭಿಮಾನಿಗಳಿಗೆ ಟ್ರೇಲರ್ ಇಷ್ಟ ಆಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಈಗೊಂದು ಆರೋಪ ಕೇಳಿಬಂದಿದೆ. ಇದು ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ (Champions) ಸಿನಿಮಾದ ಕಾಪಿ ಎಂಬುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ. ಆ ಕಾರಣದಿಂದ ಆಮಿರ್ ಖಾನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ವಿಶೇಷವಾದ ಕಥೆ ಇದೆ. ಅಂಗವಿಕಲರಿಗೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕೋಚ್ ಪಾತ್ರದಲ್ಲಿ ಆಮಿರ್ ಖಾನ್ ಅವರು ನಟಿಸಿದ್ದಾರೆ. ಆದರೆ ಇದು ಒರಿಜಿನಲ್ ಕಥೆ ಅಲ್ಲ ಎಂಬುದು ಈಗ ಗೊತ್ತಾಗಿದೆ. ಈ ಸಿನಿಮಾದ ವಿಕಿಪೀಡಿಯಾ ಪುಟದಲ್ಲಿ ಕೂಡ ಈ ಬಗ್ಗೆ ಮಾಹಿತಿ ಇದೆ. ಇದು ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್ ಎಂಬುದನ್ನು ಬರೆಯಲಾಗಿದೆ.
ಇದು ರಿಮೇಕ್ ಸಿನಿಮಾ ಎಂಬುದನ್ನು ಚಿತ್ರತಂಡದವರು ಮೊದಲೇ ಹೇಳಿಕೊಂಡಿಲ್ಲ. ಆ ಕಾರಣದಿಂದಲೇ ಟ್ರೋಲ್ ಮಾಡಲಾಗುತ್ತಿದೆ. ಟ್ರೇಲರ್ ನೋಡಿದ ಬಳಿಕ ಪ್ರತಿ ಫ್ರೇಮ್ ಕೂಡ ಕಾಪಿ ಮಾಡಲಾಗಿದೆ ಎಂಬುದು ತಿಳಿಯುತ್ತಿದೆ. ಆಮಿರ್ ಖಾನ್ ಅವರು ಈ ಮೊದಲು ‘ಫಾರೆಸ್ಟ್ ಗಂಪ್’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಿ ಸೋಲು ಕಂಡಿದ್ದರು. ಈಗ ‘ಚಾಂಪಿಯನ್ಸ್’ ರಿಮೇಕ್ ಮಾಡಿ ಟ್ರೋಲ್ ಆಗುತ್ತಿದ್ದಾರೆ.
View this post on Instagram
ಆಮಿರ್ ಖಾನ್ ಅವರ ಅಪ್ಪಟ ಅಭಿಮಾನಿಗಳು ಇದನ್ನೆಲ್ಲ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರಿಮೇಕ್ ಆಗಿರುವುದರಿಂದ ಪ್ರತಿ ಫ್ರೇಮ್ ಕೂಡ ಅದೇ ರೀತಿ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ. ಅಷ್ಟಕ್ಕೂ ‘ಚಾಂಪಿಯನ್ಸ್’ ಸಿನಿಮಾವನ್ನು ಭಾರತದಲ್ಲಿ ಹೆಚ್ಚು ಜನ ನೋಡಿಲ್ಲ. ಅಂಥವರಿಗಾಗಿ ರಿಮೇಕ್ ಮಾಡಲಾಗಿದೆ ಎಂದು ಆಮಿರ್ ಖಾನ್ ಫ್ಯಾನ್ಸ್ ವಕಾಲತ್ತು ವಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಟ್ರೇಲರ್: ಈ ಬಾರಿಯಾದ್ರೂ ಗೆಲ್ತಾರಾ ಆಮಿರ್ ಖಾನ್?
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ಜೆನಿಲಿಯಾ ದೇಶಮುಖ್ ಅವರು ಅಭಿನಯಿಸಿದ್ದಾರೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಟ್ರೇಲರ್ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.