‘ಸಿತಾರೆ ಜಮೀನ್ ಪರ್’ ಟ್ರೇಲರ್: ಈ ಬಾರಿಯಾದ್ರೂ ಗೆಲ್ತಾರಾ ಆಮಿರ್ ಖಾನ್?
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ್ ನಟಿಸಿದ್ದಾರೆ. ಜೊತೆಗೆ ಅನೇಕ ಹೊಸ ಕಲಾವಿದರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇಂದು (ಮೇ 13) ‘ಸಿತಾರೆ ಜಮೀನ್ ಪರ್’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಟ್ರೇಲರ್ ಮೂಲಕ ಸಿನಿಮಾದ ಕಥೆ ಏನು ಎಂಬ ಸುಳಿವು ಸಿಕ್ಕಿದೆ.

ಬಹುನಿರೀಕ್ಷಿತ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಅಂಗವಿಕಲರ ತಂಡಕ್ಕೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕಹಾನಿ ಈ ಸಿನಿಮಾದಲ್ಲಿ ಇದೆ. ಟ್ರೇಲರ್ ಮೂಲಕ ಕಥೆಯ ಎಳೆ ಏನೆಂಬುದು ಗೊತ್ತಾಗಿದೆ. ‘ಸಿತಾರೆ ಜಮೀನ್ ಪರ್’ ಟ್ರೇಲರ್ (Sitaare Zameen Par Trailer) ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸಿನಿಮಾದ ಮೂಲಕವಾದರೂ ಆಮಿರ್ ಖಾನ್ (Aamir Khan) ಅವರು ಗೆಲುವಿನ ಟ್ರ್ಯಾಕ್ಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಒಂದು ಕಾಲದಲ್ಲಿ ಆಮಿರ್ ಖಾನ್ ಅವರು ‘ಘಜಿನಿ’, ‘3 ಈಡಿಯಟ್ಸ್’, ‘ಪಿಕೆ’, ‘ದಂಗಲ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಆದರೆ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ‘ಥಗ್ಸ್ ಆಫ್ ಹಿಂದುಸ್ತಾನ್’, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳು ಹೀನಾಯವಾಗಿ ಸೋತವು. ಆ ಬಳಿಕ ಅವರು ದೀರ್ಘ ಬ್ರೇಕ್ ಪಡೆದುಕೊಂಡಿದ್ದರು.
ಆಮಿರ್ ಖಾನ್ ಅವರು ಬಹಳ ಕಾಳಜಿಯಿಂದ ಆಯ್ಕೆ ಮಾಡಿಕೊಂಡ ಸಿನಿಮಾ ‘ಸಿತಾರೆ ಜಮೀನ್ ಪರ್’. ಈ ಸಿನಿಮಾದ ಮೇಲೆ ಅವರಿಗೆ ತುಂಬಾ ಭರವಸೆ ಇದೆ. 2007ರಲ್ಲಿ ಬಂದ ‘ತಾರೆ ಜಮೀನ್ ಪರ್’ ಚಿತ್ರದಲ್ಲಿ ವಿಶೇಷ ಮಕ್ಕಳ ಬಗ್ಗೆ ಹೇಳಲಾಗಿತ್ತು. ಈಗ ಅದೇ ಥೀಮ್ನಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡಲಾಗಿದೆ. ಟ್ರೇಲರ್ಗೆ ರಿತೇಶ್ ದೇಶಮುಖ್ ಮುಂತಾದ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮಿರ್ ಖಾನ್ ಅವರಿಗೆ ಜೆನಿಲಿಯಾ ದೇಶಮುಖ್ ಜೋಡಿ ಆಗಿದ್ದಾರೆ. ಅಲ್ಲದೇ 10ಕ್ಕೂ ಅಧಿಕ ಹೊಸ ಕಲಾವಿದರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ನೀಡಲಾಗಿದೆ. ಕಾಮಿಡಿ ಮತ್ತು ಎಮೋಷನಲ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ ಎಂಬುದು ಟ್ರೇಲರ್ ನೋಡಿದರೆ ತಿಳಿಯುತ್ತದೆ. ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?
ಇತ್ತೀಚೆಗೆ ಬಾಲಿವುಡ್ನ ಹಲವು ಸಿನಿಮಾಗಳು ಸೋತಿವೆ. ಅದಕ್ಕೆ ಕಾರಣ ಏನಿರಬಹುದು ಎಂಬುದನ್ನು ಆಮಿರ್ ಖಾನ್ ಆಲೋಚಿಸಿದ್ದಾರೆ. ಎಲ್ಲ ರೀತಿಯ ಲೆಕ್ಕಾಚಾರ ಹಾಕಿಕೊಂಡು ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.