17ನೇ ವಯಸ್ಸಿಗೆ ಮಹತ್ವದ ಸಾಧನೆ; ಕಾನ್ ಚಿತ್ರೋತ್ಸವದಲ್ಲಿ ನಿತಾಂಶಿ ಗೋಯಲ್
‘ಲಾಪತಾ ಲೇಡೀಸ್’ ಸಿನಿಮಾದ ಮೂಲಕ ನಟಿ ನಿತಾಂಶಿ ಗೋಯಲ್ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಈಗ ಅವರು ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೇವಲ 17ನೇ ವಯಸ್ಸಿಗೆ ಅವರಿಗೆ ಈ ಅವಕಾಶ ಸಿಕ್ಕಿದೆ. ಭಾರತದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.

ನಟಿ ನಿತಾಂಶಿ ಗೋಯಲ್ (Nitanshi Goel) ಅವರಿಗೆ ಈಗಿನ್ನೂ 17 ವರ್ಷ ವಯಸ್ಸು. ಈ ಚಿಕ್ಕ ಪ್ರಾಯದಲ್ಲೇ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಅದಕ್ಕೆಲ್ಲ ಕಾರಣ ಆಗಿದ್ದು ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾ. ಕಿರಣ್ ರಾವ್ ನಿರ್ದೇಶನ ಮಾಡಿದ ಆ ಸಿನಿಮಾದಲ್ಲಿ ನಿತಾಂಶಿ ಅವರು ಪ್ರಮುಖ ಪಾತ್ರ ಮಾಡಿದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಈಗ ಅವರಿಗೆ ಇನ್ನೊಂದು ಬಂಪರ್ ಚಾನ್ಸ್ ಸಿಕ್ಕಿದೆ. ಕಾನ್ ಚಿತ್ರೋತ್ಸವದ (Cannes Film Festival) ರೆಡ್ ಕಾರ್ಪೆಟ್ನಲ್ಲಿ ನಿತಾಂಶಿ ಗೋಯಲ್ ಅವರು ಹೆಜ್ಜೆ ಹಾಕಲಿದ್ದಾರೆ. ಈ ಇವೆಂಟ್ನಲ್ಲಿ ಭಾಗಿಯಾಗುತ್ತಿರುವ ಭಾರತದ ಅತಿ ಕಿರಿಯ ನಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ.
ಮೇ 13ರಿಂದ ಮೇ 24ರ ತನಕ 78ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಈ ಚಿತ್ರೋತ್ಸವಕ್ಕೆ ವಿಶ್ವಾದ್ಯಂತ ಮನ್ನಣೆ ಇದೆ. ಕಾನ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಲು ಕೆಲವೇ ಮಂದಿಗೆ ಅವಕಾಶ ಸಿಗುತ್ತದೆ. ಈ ವರ್ಷ ಭಾರತದಿಂದ ಒಂದಷ್ಟು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಅಂಥವರ ಪೈಕಿ 17ರ ಪ್ರಾಯದ ನಿತಾಂಶಿ ಗೋಯಲ್ ಅವರು ಗಮನ ಸೆಳೆಯುತ್ತಿದ್ದಾರೆ.
‘ಬಹಳ ಮಹತ್ವಾಕಾಂಕ್ಷೆ ಇಟ್ಟುಕೊಂಡು ನಾನು ಚಿತ್ರರಂಗಕ್ಕೆ ಬಂದೆ. ಲಾಪತಾ ಲೇಡೀಸ್ ಸಿನಿಮಾದಿಂದ ಈಗ ಕಾನ್ ಫಿಲ್ಮ್ ಫೆಸ್ಟಿವಲ್ ತನಕ ಬಂದಿದ್ದೇನೆ. ದೊಡ್ಡ ಕನಸು ಇಟ್ಟುಕೊಂಡು ಅದನ್ನು ನನಸಾಗಿಸಲು ಪ್ರಯತ್ನಿಸುವ ಎಲ್ಲ ಭಾರತೀಯ ಹುಡುಗಿಯರನ್ನು ನಾನು ಪ್ರತಿನಿಧಿಸುತ್ತೇನೆ. ಜಾಗತಿಕ ವೇದಿಕೆಯಲ್ಲಿ ಅಂತಹ ಹುಡುಗಿಯರನ್ನು ಪ್ರತಿನಿಧಿಸುವುದು ನನಗೆ ಖುಷಿಯ ವಿಷಯ’ ಎಂದು ನಿತಾಂಶಿ ಗೋಯಲ್ ಅವರು ಹೇಳಿದ್ದಾರೆ.
ಈಗಾಗಲೇ ನಿತಾಂಶಿ ಗೋಯಲ್ ಅವರು ಕಾನ್ ನಗರವನ್ನು ತಲುಪಿದ್ದಾರೆ. ಅಲ್ಲಿಂದ ಅವರ ವಿಡಿಯೋಗಳು ಲಭ್ಯವಾಗಿವೆ. ರೆಡ್ ಕಾರ್ಪೆಟ್ನಲ್ಲಿ ಅವರು ಯಾವ ಕಾಸ್ಟ್ಯೂಮ್ ಧರಿಸಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಕೇವಲ 17ನೇ ವಯಸ್ಸಿಗೆ ನಿತಾಂಶಿ ಅವರಿಗೆ ಈ ಅವಕಾಶ ಸಿಕ್ಕಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ: ‘ಮೆಟ್ ಗಾಲಾ’ದಲ್ಲಿ ‘ಲಾಪತಾ ಲೇಡಿಸ್’ ಚಿತ್ರದ ಫೂಲ್ ಕುಮಾರಿ; ಫೋಟೋ ವೈರಲ್
ನಟಿ ಆಲಿಯಾ ಭಟ್ ಕೂಡ ಇದೇ ಮೊದಲ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾನ್ವಿ ಕಪೂರ್, ಊರ್ವಶಿ ರೌಟೇಲಾ, ಐಶ್ವರ್ಯಾ ರೈ, ಇಶಾನ್ ಖಟ್ಟರ್, ಕರಣ್ ಜೋಹರ್ ಮುಂತಾದವರು ಸಹ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.