ನಟ ಆಮಿರ್ ಖಾನ್ ಅವರ ವೈಯಕ್ತಿಕ ಜೀವನದ ವಿಚಾರಗಳು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿವೆ. ಮೊದಲ ಪತ್ನಿ ರೀನಾ ದತ್ತ ಹಾಗೂ ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಆಮಿರ್ ಖಾನ್ ಡಿವೋರ್ಸ್ ನೀಡಿದ್ದರೂ ಕೂಡ ಮುನಿಸಿ ಮುಂದುವರಿಸಿಲ್ಲ. ಅನೇಕ ಸಂದರ್ಭಗಳಲ್ಲಿ ಅವರು ಮಾಜಿ ಪತ್ನಿಯರ ಜೊತೆ ಆಪ್ತವಾಗಿ ನಡೆದುಕೊಂಡಿದ್ದಾರೆ. ವಿಚ್ಛೇದನ ನೀಡಿದ್ದರೂ ಕೂಡ ಇಷ್ಟು ಕ್ಲೋಸ್ ಆಗಿ ಕಾಣಿಸಿಕೊಳ್ಳುವ ಮಾಜಿ ದಂಪತಿಗಳು ನಿಜಕ್ಕೂ ಅಪರೂಪ. ಈಗ ಆಮಿರ್ ಖಾನ್ ಅವರು ಮೊದಲ ಮಾಜಿ ಪತ್ನಿ ಜೊತೆ ಪಾರ್ಟಿ ಆಯೋಜನೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಆಮಿರ್ ಖಾನ್ ಮತ್ತು ರೀನಾ ದತ್ತ ಅವರು 1986ರಲ್ಲಿ ಮದುವೆ ಆಗಿದ್ದರು. 2002ರಲ್ಲಿ ವಿಚ್ಛೇದನ ಪಡೆದರು. ಈ ಜೋಡಿಗೆ ಜುನೈದ್ ಖಾನ್ ಹಾಗೂ ಇರಾ ಖಾನ್ ಎಂಬಿಬ್ಬರು ಮಕ್ಕಳು ಇದ್ದಾರೆ. ಮಗಳು ಇರಾ ಖಾನ್ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಆದರೆ ಮಗ ಜುನೈದ್ ಖಾನ್ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರ ನಟಿಸಿದ ಮೊದಲ ಸಿನಿಮಾ ‘ಮಹಾರಾಜ್’ ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದೆ.
ವಿಚ್ಛೇದನ ಪಡೆದಿದ್ದರೂ ಕೂಡ ಮಕ್ಕಳ ಭವಿಷ್ಯಕ್ಕಾಗಿ ಮಾಜಿ ಪತ್ನಿಯರ ಜೊತೆ ಆಮಿರ್ ಖಾನ್ ಅವರು ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಈಗ ಜುನೈದ್ ಖಾನ್ ಅವರನ್ನು ಹುರಿದುಂಬಿಸಲು ಆಮಿರ್ ಖಾನ್ ನಿರ್ಧರಿಸಿದ್ದಾರೆ. ‘ಮಹಾರಾಜ್’ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಆ ಖುಷಿಯನ್ನು ಸಂಭ್ರಮಿಸಿಲು ಆಮಿರ್ ಖಾನ್ ಮತ್ತು ರೀನಾ ದತ್ತ ಅವರು ಆಪ್ತರಿಗಾಗಿ ಪಾರ್ಟಿ ಆಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು
ಜುನೈದ್ ಖಾನ್ ನಟನೆ ‘ಮಹಾರಾಜ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಆರಂಭದಲ್ಲಿ ಈ ಚಿತ್ರಕ್ಕೆ ವಿಘ್ನ ಎದುರಾಗಿತ್ತು. ಹಿಂದೂಪರ ಸಂಘಟನೆಗಳು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಕೆಲವರು ಸಿನಿಮಾ ತಡೆಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಪರಿಣಾಮವಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಬಳಿಕ ನ್ಯಾಯಾಲಯದಿಂದ ಸಿನಿಮಾದ ಬಿಡುಗಡೆ ಅನುಮತಿ ಸಿಕ್ಕಿತು. ಒಟಿಟಿಯಲ್ಲಿ ‘ಮಹಾರಾಜ್’ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಪಾಸಿಟಿವ್ ವಿಮರ್ಶೆ ನೀಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಹಲವು ಅವಕಾಶಗಳು ಜುನೈದ್ ಖಾನ್ ಅವರನ್ನು ಅರಸಿ ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.