ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು
ಆಮಿರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆ ಪ್ರಾಜೆಕ್ಟ್ಗೆ ಮೂವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಮಾತುಕಥೆ ಆರಂಭ ಆಗಿದೆ. ಈ ಎಗ್ಸೈಟಿಂಗ್ ವಿಚಾರವನ್ನು ಆಮಿರ್ ಖಾನ್ ಅವರು ಬಹಿರಂಗಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಕಪಿಲ್ ಶರ್ಮಾ ನಡೆಸಿಕೊಡುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದ ಇತ್ತೀಚಿನ ಎಪಿಸೋಡ್ನಲ್ಲಿ ಆಮಿರ್ ಖಾನ್ (Aamir Khan) ಅವರು ಭಾಗವಹಿಸಿದ್ದರು. ಇದರಲ್ಲಿ ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಆಮಿರ್ ಖಾನ್ ಹಂಚಿಕೊಂಡಿದ್ದಾರೆ. ಕೆಲವು ವಿಶೇಷವಾದ ಮಾತುಕಥೆಯ ವಿಡಿಯೋವನ್ನು ಕಪಿಲ್ ಶರ್ಮಾ (Kapil Sharma) ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಪೈಕಿ ಹೆಚ್ಚು ಗಮನ ಸೆಳೆದಿರುವುದು ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಶಾರುಖ್ ಖಾನ್ (Shah Rukh Khan) ಜೊತೆಯಾಗಿ ನಟಿಸುವ ಸಿನಿಮಾದ ವಿಚಾರ.
ಈ ಮೂವರು ಸ್ಟಾರ್ ಕಲಾವಿದರು ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಅದರ ಬಗ್ಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಪ್ರಸ್ತಾಪ ಆಗಿದೆ. ಆಗ ಆಮಿರ್ ಖಾನ್ ಅವರು ಅಚ್ಚರಿಯ ವಿಚಾರ ಹಂಚಿಕೊಂಡಿದ್ದಾರೆ. ಈ ಹೈವೋಲ್ಟೇಜ್ ಸಿನಿಮಾ ಪ್ಲ್ಯಾನ್ ಬಗ್ಗೆ ಆಮಿರ್ ಖಾನ್ ಅವರು ಈಗಾಗಲೇ ಮಾತುಕಥೆ ಶುರು ಮಾಡಿದ್ದಾರೆ ಎಂಬುದು ವಿಶೇಷ.
‘ಇತ್ತೀಚಿಗೆ ನಾನು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಭೇಟಿ ಆದೆ. ನಾವು ಮೂವರೂ ಜೊತೆಯಲ್ಲಿ ಇದ್ದೆವು. ಚಿತ್ರರಂಗದಲ್ಲಿ ನಾವು ಎಷ್ಟೋ ವರ್ಷಗಳಿಂದ ಇದ್ದೇವೆ. ಈ ನಮ್ಮ ವೃತ್ತಿಜೀವನದಲ್ಲಿ ಮೂವರೂ ಸೇರಿ ಒಂದು ಸಿನಿಮಾದಲ್ಲಿ ನಟಿಸಲಿಲ್ಲ ಎಂದರೆ ಅಭಿಮಾನಿಗಳ ಪಾಲಿಗೆ ತಪ್ಪಾಗಿ ಬಿಡುತ್ತದೆ. ಒಂದು ಸಿನಿಮಾ ಆದರೂ ಮಾಡಲೇಬೇಕು ಅಂತ ನಾನು ಅವರಿಗೆ ಹೇಳಿದ್ದೇನೆ’ ಎಂದಿದ್ದಾರೆ ಆಮಿರ್ ಖಾನ್.
Aamir Khan talking about working with Salman Khan and Shahrukh Khan together in a film. Hope it turns out to be true someday 🤞 pic.twitter.com/ViJhQaKhAN
— FilmoHolic FarHan (@filmy_farhan) April 30, 2024
‘ಜೊತೆಯಾಗಿ ಸಿನಿಮಾ ಮಾಡಲು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಪ್ಪಿಕೊಂಡಿದ್ದಾರೆ. ಕಥೆ ಹುಡುಕೋಣ ಎಂದು ಕೂಡ ಹೇಳಿದ್ದಾರೆ. ಎರಡು ದಿನ ಮುಂಚೆ ಸಲ್ಮಾನ್ ಖಾನ್ ನನ್ನ ಮನೆಗೆ ಬಂದಿದ್ದರು. ಆಗಲೂ ಇದೇ ಮಾತುಕಥೆ ನಡೆಯಿತು. ಮೂವರೂ ಒಂದೇ ಸಿನಿಮಾದಲ್ಲಿ ನಟಿಸಲು ನಾವು ಖಂಡಿತಾ ಪ್ರಯತ್ನ ಮಾಡುತ್ತೇವೆ. ಒಳ್ಳೆಯ ನಿರ್ದೇಶಕರು ಬಂದು ನಮಗೆ ಕಥೆ ಹೇಳಲಿ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ, ಪೊಲೀಸ್ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಈ ವಿಷಯ ಕೇಳಿ ಅಭಿಮಾನಿಗಳಿಗೆ ತುಂಬ ಖುಷಿ ಆಗಿದೆ. ಹೇಗೆಲ್ಲ ಕಥೆ ಮಾಡಬಹುದು ಎಂದು ಈಗಾಗಲೇ ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ‘ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎಂದರೆ ಆ ಚಿತ್ರವನ್ನು ಹ್ಯಾಂಡಲ್ ಮಾಡಲು ರಾಜಮೌಳಿ ಅವರಿಗೆ ಮಾತ್ರ ಸಾಧ್ಯ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.