ಗುಂಡಿನ ದಾಳಿ ಬಳಿಕ ಮನೆ ಖಾಲಿ ಮಾಡುವ ನಿರ್ಧಾರದಲ್ಲಿ ಸಲ್ಮಾನ್​ ಖಾನ್​?

ಬಾಲಿವುಡ್​ನ ಜನಪ್ರಿಯ ನಟ ಸಲ್ಮಾನ್​ ಖಾನ್​ ಅವರ ಹತ್ಯೆಗೆ ಪ್ರಯತ್ನ ನಡೆದ ಬಳಿಕ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ. ಘಟನೆಯ ನಂತರ ಸಲ್ಮಾನ್​ ಖಾನ್​ ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಅವರು ಮನೆ ಖಾಲಿ ಮಾಡಿ ಬೇರೆ ಕಡೆಗೆ ಹೋಗುತ್ತಾರಾ ಎಂಬ ಅನುಮಾನ ಕೂಡ ಕೆಲವರಲ್ಲಿ ಮೂಡಿದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​ ಖಾನ್​ ಅವರು ಮಾತನಾಡಿದ್ದಾರೆ.

ಗುಂಡಿನ ದಾಳಿ ಬಳಿಕ ಮನೆ ಖಾಲಿ ಮಾಡುವ ನಿರ್ಧಾರದಲ್ಲಿ ಸಲ್ಮಾನ್​ ಖಾನ್​?
ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
|

Updated on: Apr 26, 2024 | 10:18 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಜೀವ ಬೆದರಿಕೆ ಇದೆ. ಕೆಲವೇ ದಿನಗಳ ಹಿಂದೆ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಮುಂಬೈನ ಬಾಂದ್ರಾದಲ್ಲಿ ಇರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ (Galaxy Apartment) ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ್ದರು. ಈ ಘಟನೆ ಬಳಿಕ ಸಲ್ಮಾನ್​ ಖಾನ್​ ಅವರ ಕುಟುಂಬದವರಿಗೆ ಭಯ ಆಗಿರುವುದು ನಿಜ. ಇದೇ ಹಿನ್ನೆಲೆಯಲ್ಲಿ ಕೆಲವು ಸುದ್ದಿಗಳು ಕೇಳಿಬಂದಿವೆ. ಗುಂಡಿನ ದಾಳಿ ನಂತರ ಸಲ್ಮಾನ್​ ಖಾನ್​ ಅವರು ಆ ಮನೆ ಖಾಲಿ ಮಾಡುತ್ತಾರಾ ಎಂಬ ಅನುಮಾನ ಕೂಡ ಕೆಲವರಿಗೆ ಇದೆ. ಆ ಕುರಿತು ಸಲ್ಲು ಸಹೋದರ ಅರ್ಬಾಜ್​ ಖಾನ್ (Arbaaz Khan)​ ಪ್ರತಿಕ್ರಿಯೆ ನೀಡಿದ್ದಾರೆ. ‘ಜೂಮ್​’ ವಾಹಿನಿ ನಡೆಸಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸದ್ಯಕ್ಕಂತೂ ಆ ಮನೆ ಖಾಲಿ ಮಾಡುವ ಆಲೋಚನೆ ಸಲ್ಮಾನ್​ ಖಾನ್​ ಅವರಿಗೆ ಇಲ್ಲ ಎಂಬುದನ್ನು ಅರ್ಬಾಜ್​ ಖಾನ್​ ಅವರು ಸ್ಪಷ್ಟಪಡಿಸಿದ್ದಾರೆ. ‘ಮನೆ ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋದರೆ ಕೊಲೆ ಬೆದರಿಕೆ ನಿಲ್ಲುತ್ತದೆ ಅಂತ ನಿಮಗೆ ಅನಿಸುತ್ತದೆಯೇ? ಹೌದು ಎಂಬುದಾದರೆ ಹಾಗೆಯೇ ಮಾಡಬಹುದಿತ್ತು. ಆದರೆ ವಾಸ್ತವ ಹಾಗಿಲ್ಲ. ನಮ್ಮ ತಂದೆ ಆ ಮನೆಯಲ್ಲಿ ಹಲವು ವರ್ಷ ವಾಸಿಸಿದ್ದಾರೆ. ಸಲ್ಮಾನ್​ ಖಾನ್​ ಕೂಡ ಅನೇಕ ವರ್ಷಗಳ ಕಾಲ ವಾಸ ಮಾಡಿದ್ದಾರೆ. ಅದು ಅವರ ಮನೆ. ಮನೆ ಖಾಲಿ ಮಾಡಿಕೊಂಡು ಹೋದರೆ ನಿಮ್ಮನ್ನು ಬಿಟ್ಟು ಬಿಡುತ್ತೇವೆ ಅಂತ ಯಾರೂ ಹೇಳಿಲ್ಲ. ಒಂದು ವೇಳೆ ಆ ರೀತಿ ಇದ್ದಿದ್ದರೆ ಅವರು ಮನೆ ಖಾಲಿ ಮಾಡುವ ಆಲೋಚನೆ ಮಾಡುತ್ತಿದ್ದರೇನೋ’ ಎಂದು ಅರ್ಬಾಜ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ದುಬೈಗೆ ತೆರಳಿದ ಸಲ್ಮಾನ್​ ಖಾನ್​

ಗುಂಡಿನ ದಾಳಿ ಬಳಿಕ ಸಲ್ಮಾನ್​ ಖಾನ್​ ಮನೆಯವರು ಹೇಳಿಕೆ ಬಿಡುಗಡೆ ಮಾಡಿದ್ದರು. ‘ಇಬ್ಬರು ಅಪರಿಚಿತರು ಗುಂಡಿನ ದಾಳಿ ಮಾಡಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕವಾಗಿದೆ. ದುರದೃಷ್ಟಕರ ಸಂಗತಿ ಏನೆಂದರೆ, ಕೆಲವರು ನಮ್ಮ ಫ್ಯಾಮಿಲಿಯ ಆಪ್ತರು ಅಂತ ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆ ನೀಡುತ್ತಿದ್ದಾರೆ. ಈ ಘಟನೆಯು ಒಂದು ಪ್ರಚಾರದ ಗಿಮಿಕ್​ ಹಾಗೂ ಇದರಿಂದ ಸಲ್ಮಾನ್​ ಖಾನ್​ ಕುಟುಂಬದವರ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಆದರೆ ಅದೆಲ್ಲ ನಿಜವಲ್ಲ. ಅಂಥವರ ಮಾತಗಳನ್ನು ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಸಲ್ಲು ಕುಟುಂಬದವರು ಹೇಳಿಕೆಯಲ್ಲಿ ತಿಳಿಸಿದ್ದರು.

‘ಸಲೀಂ ಖಾನ್​ (ಸಲ್ಮಾನ್​ ಖಾನ್​ ತಂದೆ) ಕುಟುಂಬದಲ್ಲಿನ ಯಾರೂ ಸಹ ಮಾಧ್ಯಮಗಳಿಗೆ ಈ ಘಟನೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಮಯದಲ್ಲಿ ಕುಟುಂಬದವರು ಪೊಲೀಸರ ತನಿಖೆಗೆ ಪೂರ್ತಿ ಸಹಕಾರ ನೀಡುತ್ತಿದ್ದಾರೆ. ನಮಗೆ ಮುಂಬೈ ಪೊಲೀಸರ ಮೇಲೆ ನಂಬಿಕೆಯಿದೆ. ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಬೆಂಬಲ ಹಾಗೂ ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದ’ ಎಂದು ಅರ್ಬಾಜ್​ ಖಾನ್​ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.