ಸಾಲದ ಸುಳಿಗೆ ಸಿಲುಕಿ ನಟ ರಾಜ್‌ಪಾಲ್ ಯಾದವ್ ಆಸ್ತಿ ಹರಾಜು; ಹೆಚ್ಚಿತು ಸಂಕಷ್ಟ

ಬಹುಬೇಡಿಕೆಯ ನಟ ರಾಜ್​ಪಾಲ್ ಯಾದವ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ರೂಪಾಯಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಅವರ ಆಸ್ತಿ ಹರಾಜಿಗೆ ಬಂದಿದೆ. ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿಯನ್ನು ಅವರು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಸಾಲದ ಸುಳಿಗೆ ಸಿಲುಕಿ ನಟ ರಾಜ್‌ಪಾಲ್ ಯಾದವ್ ಆಸ್ತಿ ಹರಾಜು; ಹೆಚ್ಚಿತು ಸಂಕಷ್ಟ
Rajpal Yadav

Updated on: Aug 06, 2026 | 8:01 PM

ಬಾಲಿವುಡ್‌ನ ಜನಪ್ರಿಯ ಹಾಸ್ಯ ನಟ ರಾಜ್‌ಪಾಲ್ ಯಾದವ್ (Rajpal Yadav) ಅವರು ಸಾಲದ ಸುಳಿಗೆ ಸಿಲುಕಿದ್ದು, ಅವರ ಆಸ್ತಿಗಳು ಹರಾಜಾಗುವ ಭೀತಿಗೆ ಎದುರಾಗಿವೆ. 16.61 ಕೋಟಿ ರೂಪಾಯಿಗೂ ಹೆಚ್ಚಿನ ಸಾಲದ ಬಾಕಿಯನ್ನು ವಸೂಲಿ ಮಾಡಲು ನಟನ ಎರಡು ಆಸ್ತಿಗಳನ್ನು ಸೆಪ್ಟೆಂಬರ್ 9ರಂದು ಆನ್‌ಲೈನ್ ಮೂಲಕ ಹರಾಜು (Auction) ಮಾಡಲು ಮುಂಬೈನ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ ನಿರ್ಧರಿಸಿದೆ ಎಂದು ವರದಿಯಾಗಿದೆ.

ಬ್ಯಾಂಕ್ ನೀಡಿರುವ ಅಧಿಕೃತ ಸೂಚನೆಯಂತೆ, ಉತ್ತರ ಪ್ರದೇಶದ ಶಹಜಹಾನ್‌ಪುರ ನಗರದಲ್ಲಿರುವ ಒಂದು ಆಸ್ತಿ ಹಾಗೂ ಸಮೀಪದ ಗ್ರಾಮದಲ್ಲಿರುವ ಅವರ ಮತ್ತೊಂದು ಆಸ್ತಿಯನ್ನು ಹರಾಜಿಗೆ ಇಡಲಾಗಿದೆ. ನಟ ರಾಜ್‌ಪಾಲ್ ಯಾದವ್ ಬ್ಯಾಂಕ್‌ಗೆ ಒಟ್ಟು 16 ಕೋಟಿ 61 ಲಕ್ಷದ 64 ಸಾವಿರ ರೂಪಾಯಿ ನೀಡಬೇಕಿದ್ದು, ಹರಾಜಿಗೆ ಇಡಲಾಗಿರುವ ಈ ಎರಡು ಆಸ್ತಿಗಳ ಒಟ್ಟು ಮೌಲ್ಯ ಸುಮಾರು 3.19 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸಿನಿಮಾ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲ:

ರಾಜ್‌ಪಾಲ್ ಯಾದವ್ 2012ರಲ್ಲಿ ನಿರ್ಮಿಸಿದ್ದ ತಮ್ಮ ‘ಆತಾ ಪತಾ ಲಾಪತಾ’ ಸಿನಿಮಾದ ನಷ್ಟ ಪರಿಹಾರ ಮತ್ತು ನಿರ್ಮಾಣ ವೆಚ್ಚಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು. ಆದರೆ, ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಲು ವಿಫಲವಾದ ಕಾರಣ, ಜಪ್ತಿ ಮಾಡಿದ ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಬ್ಯಾಂಕ್ ಮುಂದಾಗಿದೆ. ಹರಾಜಾಗಲಿರುವ ಆಸ್ತಿಗಳಲ್ಲಿ ಶಹಜಹಾನ್‌ಪುರದಲ್ಲಿರುವ ಕೃಷಿ ಭೂಮಿ ಮತ್ತು ಗ್ರಾಮೀಣ ಭಾಗದ ಮನೆಯೂ ಸೇರಿದೆ.

ಹೆಂಡತಿ, ತಾಯಿಯ ಆಸ್ತಿಗೂ ಸಂಕಷ್ಟ:

ಸಾಲ ಪಡೆಯುವಾಗ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಹಾಗೂ ತಾಯಿ ಗೋದಾವರಿ ಯಾದವ್ ಅವರ ಹೆಸರಿನಲ್ಲಿದ್ದ ಆಸ್ತಿಗಳನ್ನು ಶ್ಯೂರಿಟಿಯಾಗಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಕಾನೂನು ಪ್ರಕಾರ ಅವರ ಆಸ್ತಿಗಳ ಮೇಲೆಯೂ ಕ್ರಮ ಕೈಗೊಂಡಿದೆ. ಆದ್ದರಿಂದ ರಾಜ್ ಪಾಲ್ ಯಾದವ್ ಅವರ ಕುಟುಂಬದ ಸದಸ್ಯರ ಆಸ್ತಿ ಕೂಡ ಈಗ ಅಪಾಯದಲ್ಲಿದೆ.

ಇದನ್ನೂ ಓದಿ: ಸಹಾಯ ಮಾಡಿದವರ ಹೆಸರು ಹೇಳಲ್ಲ: ಖಡಕ್ ಆಗಿ ತಿಳಿಸಿದ ರಾಜ್​ಪಾಲ್ ಯಾದವ್

ನಟನ ಮುಂಬೈ ಆಸ್ತಿ ಹರಾಜು?

ಶಹಜಹಾನ್‌ಪುರ ಆಸ್ತಿಗಳಷ್ಟೇ ಅಲ್ಲದೆ, ಮುಂಬೈನಲ್ಲಿರುವ ರಾಜ್​ಪಾಲ್ ಯಾದವ್ ಅವರ ಕೆಲವು ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಹರಾಜು ನೋಟಿಸ್ ಹಾಗೂ ಸಾಲದ ಕುರಿತು ರಾಜ್‌ಪಾಲ್ ಯಾದವ್ ಅವರು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರಿಗೆ ಯಾರಾದರೂ ಸಹಾಯ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us