ಬಾಲಿವುಡ್ನಲ್ಲಿ ಇತ್ತೀಚೆಗೆ ನಟ-ನಟಿಯರು ಹಾಗೂ ನಿರ್ಮಾಣ ಸಂಸ್ಥೆಗಳ ನಡುವೆ ತಿಕ್ಕಾಟ ಶುರುವಾಗಿದೆ. ಕೆಲವು ನಟ-ನಟಿಯರಿಂದ ಸಿನಿಮಾದ ನಿರ್ಮಾಣ ವೆಚ್ಚ ಹೆಚ್ಚಾಗಿದೆ ಎಂದು ನಿರ್ಮಾಪಕರು ಆರೋಪಿಸಿದ್ದು, ನಿರ್ಮಾಣ ವೆಚ್ಚ ಕಡಿಮೆ ಮಾಡಲೆಂದು ನಿರ್ಮಾಪಕರ ಗಿಲ್ಡ್ ಸಭೆ ನಡೆಸಿದ್ದು, ಕೆಲವು ನಟ-ನಟಿಯರಿಗೆ ಹಾಗೂ ಟ್ಯಾಲೆಂಟ್ ಏಜೆನ್ಸಿಗಳಿಗೆ ಪತ್ರ ಬರೆದು ಕೆಲವು ಷರತ್ತುಗಳನ್ನು ಸಹ ವಿಧಿಸಿದೆ. ಬಾಲಿವುಡ್ನ ಕೆಲವು ದೊಡ್ಡ ನಟರ ಸಿನಿಮಾಗಳೇ ಮಕಾಡೆ ಮಲಗುತ್ತಿವೆ. ಆದರೆ ನಟರು ಮಾತ್ರ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತಿಲ್ಲ ಇದು ಸಹ ಕೆಲ ನಿರ್ಮಾಪಕರ ಸಿಟ್ಟಿಗೆ ಕಾರಣವಾಗಿದೆ.
ನಿರ್ಮಾಪಕ, ನಿರ್ದೇಶಕ ಮತ್ತು ನಟರೂ ಆಗಿರುವ ಕರಣ್ ಜೋಹರ್ ಸಹ ಕಳೆದ ಒಂದು ವರ್ಷದಿಂದಲೂ ಈ ಬಗ್ಗೆ ದನಿ ಎತ್ತುತ್ತಲೇ ಇದ್ದಾರೆ. ಒಂದೆರಡು ಸಿನಿಮಾ ಮಾಡಿದವರು ಸಹ ಕೋಟ್ಯಂತರ ರೂಪಾಯಿ ಸಂಭಾವನೆ ಕೇಳುತ್ತಿರುವ ಬಗ್ಗೆ ಕರಣ್ ಜೋಹರ್ ಮೊದಲಿನಿಂದಲೂ ಆಕ್ಷೇಪ ಎತ್ತುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಕೆಲವು ನಟರನ್ನು ತಮ್ಮ ಸಿನಿಮಾದಿಂದ ಹೊರಹಾಕಿದ್ದು ಸಹ ಇದೆ.
ಇದೀಗ ಮತ್ತೊಮ್ಮೆ ಇದೇ ವಿಷಯವಾಗಿ ಮಾತನಾಡಿರುವ ಕರಣ್ ಜೋಹರ್, ‘ಸಿನಿಮಾಗಳ ಕತೆ ವಿಷಯದಲ್ಲಿ ಪ್ರೇಕ್ಷಕರ ಅಭಿರುಚಿಗಳು ಬಹಳ ಬದಾಗಿದೆ. ಅವರಿಗೆ ಬೇರೆ ವಿಧವಾದ ಸಿನಿಮಾ ಬೇಕು. ಆದರೆ ನೀವು ಸಿನಿಮಾ ನಿರ್ಮಾಣ ಮಾಡುವವರಾಗಿ ರೀತಿಯ ಮಾಡಲು ಬಯಸಿದರೆ, ನಿಮ್ಮ ಚಲನಚಿತ್ರವು ಎ, ಬಿ ಮತ್ತು ಸಿ ಕೇಂದ್ರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುವುದಿಲ್ಲ. ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವೇ ಸಿನಿಮಾ ಓಡಿದರೆ ಸಾಕಾಗುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ದಕ್ಷಿಣದ ಮತ್ತೊಂದು ಸಿನಿಮಾ ರೀಮೇಕ್ ಮಾಡುತ್ತಿದ್ದಾರೆಯೇ ಕರಣ್ ಜೋಹರ್
‘ಇದರೊಂದಿಗೆ ಸಿನಿಮಾ ನಿರ್ಮಾಣದ ವೆಚ್ಚವೂ ಹೆಚ್ಚಿದೆ. ಬಾಲಿವುಡ್ನಲ್ಲಿ ಹಣದುಬ್ಬರ ಉಂಟಾಗಿದೆ. ಹಿಂದಿ ಚಿತ್ರರಂಗದಲ್ಲಿ ಸುಮಾರು 10 ಸಮರ್ಥ ನಟರಿದ್ದಾರೆ ಮತ್ತು ಅವರೆಲ್ಲರೂ ಭಾರಿ ಮೊತ್ತದ ಸಂಭಾವನೆಯನ್ನು ಕೇಳುತ್ತಾರೆ. ನೀವು ಅವರಿಗೆ ಸಂಭಾವನೆ ಪಾವತಿಸಿ, ನಂತರ ನೀವು ಸಿನಿಮಾ ನಿರ್ಮಾಣಕ್ಕೆ ಹಣ ಕೊಡುತ್ತೀರಿ ಮತ್ತು ನಂತರ ಸಿನಿಮಾ ಪ್ರಚಾರಕ್ಕೆ ವೆಚ್ಚ ಮಾಡಬೇಕಾಗುತ್ತದೆ. ತದನಂತರ ನಿಮ್ಮ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡಷ್ಟು ಗಳಿಕೆ ಮಾಡುವುದಿಲ್ಲ. 35 ಕೋಟಿ ಕೇಳುತ್ತಿರುವ ಆ ಸಿನಿಮಾ ನಟರ ಸಿನಿಮಾಗಳು ಮೊದಲ ದಿನ 3.5 ಕೋಟಿ ಕಲೆಕ್ಷನ್ ಸಹ ಆಗುತ್ತಿಲ್ಲ’ ಎಂದಿದ್ದಾರೆ.
ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ‘ಸಿನಿಮಾ ನಿರ್ಮಾಣದ ಗಣಿತವೇ ಅರ್ಥವಾಗದಂತಾಗಿದೆ. ಇಷ್ಟೋಂದು ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು? ಆದರೂ, ನಾವು ಚಲನಚಿತ್ರಗಳನ್ನು ನಿರ್ಮಿಸುವುದನ್ನು ಮತ್ತು ನಿರ್ಮಾಣದ ಬಗ್ಗೆ ವಿಷಯವನ್ನು ಚರ್ಚಿಸುವುದು ನಡೆಯುತ್ತಲೇ ಇರಬೇಕು, ಏಕೆಂದರೆ ಮಾಧ್ಯಮಗಳಿಗೂ ಆಹಾರ ಬೇಕಲ್ಲವೆ? ಈ ಸಿನಿಮಾ ನಿರ್ಮಾಣದ ಹಿಂದೆ ಸಾಕಷ್ಟು ಡ್ರಾಮಾ ಇದೆ ಮತ್ತು ನಮ್ಮ ಸಿನಿಮಾದ ವಾಕ್ಯ ರಚನೆಯು ಅದನ್ನು ಮೀರಿದೆ’ ಎಂದಿದ್ದಾರೆ ಕರಣ್ ಜೋಹರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ