
‘ಪವಿತ್ರ ರಿಷ್ತ’, ‘ಸಾತ್ ನಿಭಾನ ಸಾಥಿಯಾನ್’ನಂತಹ ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಪ್ರಿಯಾ ಮರಾಠೆ ನಿಧನರಾಗಿದ್ದಾರೆ. ಅವರು ತಮ್ಮ 38 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು (ಭಾನುವಾರ) ಬೆಳಗಿನ ಜಾವ 4 ಗಂಟೆಗೆ, ಪ್ರಿಯಾ ಕ್ಯಾನ್ಸರ್ ನಿಂದ ನಿಧನರಾದರು ಎಂಬ ಮಾಹಿತಿ ಹೊರಬಂದಿದೆ. ಕಳೆದ ಒಂದು ವರ್ಷದಿಂದ ಪ್ರಿಯಾ ಬಣ್ಣದ ಲೋಕದಿಂದ ದೂರವಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿರಲಿಲ್ಲ. ಅವರ ಸಾವಿನ ಸುದ್ದಿ ಹೊರಬಂದ ನಂತರ ಕಿರುತೆರೆ ಲೋಕದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.
ಪ್ರಿಯಾ ಅವರು ಜನಿಸಿದ್ದು 1987ರಲ್ಲಿ. ಅವರು ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಈ ಧಾರಾವಾಹಿಯಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ ಕಾಣಿಸಿಕೊಂಡಿದ್ದರು. ಪ್ರಿಯಾ ಕೊನೆಯ ಬಾರಿಗೆ ‘ತುಝೇಚ್ ಮೀ ಗೀತ್ ಗಾತ್ ಆಹೆ’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಆದರೆ ಅವರು ಈ ಧಾರಾವಾಹಿಯನ್ನು ಅರ್ಧದಲ್ಲೇ ತೊರೆದಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅದರಲ್ಲಿ, ಅವರು ತಮ್ಮ ಆರೋಗ್ಯದ ಕಾರಣವನ್ನು ನೀಡಿದ್ದರು.
ಇದನ್ನೂ ಓದಿ:ಸುಶಾಂತ್ ಸಿಂಗ್ ಮಾಜಿ ಗೆಳತಿಯ ಹೊಸ ಉದ್ಯಮ, ‘ಕೊಲೆ‘ ಆರೋಪವೇ ಸ್ಪೂರ್ತಿ
‘ಆರೋಗ್ಯದ ಕಾರಣಗಳಿಂದ ನಾನು ಧಾರಾವಾಹಿಗೆ ವಿದಾಯ ಹೇಳುತ್ತಿದ್ದೇನೆ. ಈ ಧಾರಾವಾಹಿಯಲ್ಲಿ ಮೋನಿಕಾ ಪಾತ್ರವನ್ನು ನಿರ್ವಹಿಸಲು ನನಗೆ ತುಂಬಾ ಸಂತೋಷ ಇತ್ತು. ಆದರೆ ಶೂಟಿಂಗ್ ವೇಳಾಪಟ್ಟಿ ಮತ್ತು ಆರೋಗ್ಯ ಎರಡನ್ನೂ ಸಮತೋಲನಗೊಳಿಸುವುದು ತುಂಬಾ ಕಷ್ಟ ಆಗುತ್ತಿದೆ. ನನಗೆ ಆರೋಗ್ಯ ಸಮಸ್ಯೆ ಕಾಡಿದೆ. ಮೋನಿಕಾ ಪಾತ್ರಕ್ಕಾಗಿ ಪ್ರೇಕ್ಷಕರಿಂದ ನನಗೆ ಸಾಕಷ್ಟು ಪ್ರೀತಿ ಸಿಕ್ಕಿತು. ಆದರೆ ಧಾರಾವಾಹಿ ತಂಡದ ಅಗತ್ಯಗಳಿಗೆ ಅನುಗುಣವಾಗಿ, ನಾನು ಅವರಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಈ ಪ್ರಯಾಣವನ್ನು ಇಲ್ಲಿಗೆ ನಿಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಅವರು ಈ ವೀಡಿಯೊದಲ್ಲಿ ಹೇಳಿದ್ದರು.
ಪ್ರಿಯಾ ‘ಯಾ ಸುಖ್ನೋ ಯಾ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅದಾದ ನಂತರ, ಅವರು ಅನೇಕ ಹಿಂದಿ-ಮರಾಠಿ ಧಾರಾವಾಹಿಗಳಲ್ಲಿ ನಟಿಸಿದರು. ‘ಪವಿತ್ರ ರಿಷ್ತ’ದಲ್ಲಿ ವರ್ಷಾ ಹೆಸರಿನ ಪಾತ್ರವನ್ನು ನಿರ್ವಹಿಸಿದರು. ಜನಪ್ರಿಯ ಧಾರಾವಾಹಿ ‘ಬಡೇ ಅಚ್ಚೇ ಲಗ್ತೇ ಹೈ’ಯಲ್ಲಿ ಅವರು ಜ್ಯೋತಿ ಮಲ್ಹೋತ್ರಾ ಪಾತ್ರವನ್ನು ನಿರ್ವಹಿಸಿದರು. ಪ್ರಿಯಾ ಮರಾಠೆ 24 ಏಪ್ರಿಲ್ 2012 ರಂದು ನಟ ಶಾಂತನು ಮೋಘೆ ಅವರನ್ನು ವಿವಾಹವಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ