ತೆಲುಗು, ತಮಿಳು ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಜರೀನ್ ಖಾನ್ (Zareen Khan) ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್ ಇತ್ತೀಚೆಗೆ ಹೊರಡಿಸಲಾಗಿತ್ತು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಗೆ ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಲಾಗಿದೆ. ಡಿಸೆಂಬರ್ 26ರ ವರೆಗೆ ನಟಿಯನ್ನು ಬಂಧಿಸದಂತೆ ನ್ಯಾಯಾಲಯ ಹೇಳಿದೆ. ಅಂದಹಾಗೆ ಏನಿದು ವಂಚನೆ ಪ್ರಕರಣ?
2018ರಲ್ಲಿ ಕೊಲ್ಕತ್ತದ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ನಟಿ ಜರೀನ್ ಖಾನ್ ಅತಿಥಿಯಾಗಿ ಭಾಗವಹಿಸಿ ನೃತ್ಯ ಪ್ರದರ್ಶನವನ್ನು ಸಹ ನೀಡಬೇಕಿತ್ತು. ಆದರೆ ಜರೀನ್ ಖಾನ್, ಆ ಕಾರ್ಯಕ್ರಮಕ್ಕೆ ವಿನಾಕಾರಣ ಗೈರಾಗಿದ್ದರು. ಇದರಿಂದಾಗಿ ಕಾರ್ಯಕ್ರಮದ ಆಯೋಜಕರಿಗೆ ಭಾರಿ ನಷ್ಟವಾಗಿತ್ತು. ಹೀಗಾಗಿ ಆಯೋಜಕರು ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ನಟಿಯ ವಿರುದ್ಧ ಎಫ್ಐಆರ್ ನಮೂದಾಗಿತ್ತು.
ತಮ್ಮ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ನಟಿ ಜರೀನ್ ಖಾನ್, ಆಯೋಜಕರು ತಮಗೆ ತಪ್ಪು ಮಾಹಿತಿ ನೀಡಿದ್ದರು. ಕಾರ್ಯಕ್ರಮಕ್ಕೆ ವಿಐಪಿ ಅತಿಥಿಗಳು ಬರುತ್ತಾರೆ, ಸಿಎಂ ಮಮತಾ ಬ್ಯಾನರ್ಜಿ ಬರುತ್ತಾರೆ ಎಂದು ಸುಳ್ಳು ಹೇಳಿದ್ದರು. ಅಲ್ಲದೆ ನನ್ನ ವಿಮಾನ ಪ್ರಯಾಣ ಹಾಗೂ ನನ್ನ ವಾಸ್ತವ್ಯದ ವ್ಯವಸ್ಥೆಯನ್ನು ಸಹ ಅವರು ಸರಿಯಾಗಿ ಮಾಡಿರಲಿಲ್ಲ ಹಾಗಾಗಿ ತಾವು ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಕಾರಣ ನೀಡಿದ್ದರು.
ಇದನ್ನೂ ಓದಿ:‘ಸಲ್ಮಾನ್ ಖಾನ್ ನನ್ನ ದ್ವೇಷಕ್ಕೂ ಅರ್ಹನಲ್ಲ’; ಸಿಟ್ಟಾದ ಖ್ಯಾತ ಗಾಯಕ
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲವು 2023ರ ಸೆಪ್ಟೆಂಬರ್ ತಿಂಗಳಲ್ಲಿ ನಟಿಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು. ಇದೀಗ ನಟಿಗೆ ಜಾಮೀನು ದೊರೆತಿದೆ. ಆದರೆ ನಟಿಯು ವಿದೇಶ ಪ್ರವಾಸ ಮಾಡದಂತೆ ನಿರ್ಬಂಧ ಹೇರಲಾಗಿದೆ. ಜೊತೆಗೆ 30 ಸಾವಿರ ರೂಪಾಯಿಗಳ ಭದ್ರತಾ ಬಾಂಡ್ ಸಹ ನೀಡುವಂತೆ ಆದೇಶಿಸಲಾಗಿದೆ.
ಸಲ್ಮಾನ್ ಖಾನ್, ನೋಡಿ, ಗುರುತಿಸಿದ ಪ್ರತಿಭೆ ಜರೀನ್ ಖಾನ್. ಸಲ್ಮಾನ್ ನಟಿಸಿದ್ದ ‘ಯುವರಾಜ್’ ಸಿನಿಮಾ ಸೆಟ್ಗೆ ಹೋಗಿದ್ದ ಜರೀನ್ ಖಾನ್ರನ್ನು ಕಂಡು ಮೆಚ್ಚಿಕೊಂಡ ಸಲ್ಮಾನ್, ತಮ್ಮ ‘ವೀರ್’ ಸಿನಿಮಾದಲ್ಲಿ ನಾಯಕಿ ಪಾತ್ರ ನೀಡಿದ್ದರು. ಆರಂಭದ ಕೆಲ ವರ್ಷ ಮಿಂಚಿದ ಜರೀನ್ ಖಾನ್ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾದಲ್ಲಿಯೂ ಜರೀನ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ