ಭಾರತದ ಕರಾಳ ಘಟನೆಗಳಲ್ಲಿ ಒಂದಾದ ಗೋದ್ರಾ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಹೆಸರಿನ ಸಿನಿಮಾ ನಿರ್ಮಾಣವಾಗಿದ್ದು ಕೆಲ ದಿನಗಳ ಹಿಂದಷ್ಟೆ ಸಿನಿಮಾ ಬಿಡುಗಡೆ ಆಗಿದೆ. ಗೋದ್ರಾ ಘಟನೆ ನಡೆದ ಬಳಿಕ ಅದನ್ನು ಮಾಧ್ಯಮಗಳು ಹೇಗೆ ನೋಡಿದವು? ನಿಜವಾಗಿ ಏನು ನಡೆದಿತ್ತು? ಅದನ್ನು ಮುಚ್ಚಿ ಹಾಕುವ ಪ್ರಯತ್ನ ಹೇಗಾಯ್ತು? ಇತ್ಯಾದಿ ವಿಷಯಗಳನ್ನು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಒಳಗೊಂಡಿದೆ.
ವಿಕ್ರಾಂತ್ ಮೆಸ್ಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಸತ್ಯ ಹೊರಗೆ ಬರಬೇಕು’ ಎಂದಿದ್ದರು. ನರೇಂದ್ರ ಮೋದಿಯವರ ಮೆಚ್ಚುಗೆ ಲಭ್ಯವಾದ ಬೆನ್ನಲ್ಲೆ, ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿತ್ತು. ಮಧ್ಯ ಪ್ರದೇಶದ ಬಳಿಕ ಈಗ ಬಿಜೆಪಿ ಆಡಳಿತವಿರುವ ಮತ್ತೊಂದು ರಾಜ್ಯವಾದ ಹರಿಯಾಣಾನಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ.
ಹರಿಯಾಣದ ಸಿಎಂ ನಯಾಬ್ ಸಿಂಗ್ ಸೈನಿ ಅವರು ಇತ್ತೀಚೆಗಷ್ಟೆ ತಮ್ಮ ಸಂಪುಟದ ಕೆಲವು ಸಚಿವರೊಟ್ಟಿಗೆ ಸೇರಿ ‘ದಿ ಸಾಬರಮತಿ ರಿಪೊರ್ಟ್’ ಸಿನಿಮಾ ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ಕೆಲ ಕೇಂದ್ರ ಮಂತ್ರಿಗಳು ಸಹ ಹಾಜರಿದ್ದರು. ಸಿನಿಮಾದ ನಿರ್ಮಾಪಕಿ ಏಕ್ತಾ ಕಪೂರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಸಿನಿಮಾ ನೋಡಿದ ಸಿಎಂ, ಎಲ್ಲರೂ ನೋಡಬೇಕಾದ ಸಿನಿಮಾ ಇದೆಂದು ಕೊಂಡಾಡಿದರು. ಬಳಿಕ ಹರಿಯಾಣಾದಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದ ‘ದಿ ಸಾಬರಮತಿ ರಿಪೋರ್ಟ್’ ಗಳಿಸಿದ್ದೆಷ್ಟು?
‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಹೋಲಿಸಿದ ಸಿಎಂ ಸೈನಿ, ‘ಆಗ ನಡೆದ ಘಟನೆಗಳನ್ನು ಯಥಾವತ್ತಾಗಿ ಸತ್ಯಕ್ಕೆ ಹತ್ತಿರ ಇರುವಂತೆ ಚಿತ್ರೀಕರಿಸಲಾಗಿದೆ. ಎಲ್ಲರೂ ನೋಡಬೇಕಾದ ಸಿನಿಮಾ ಇದು’ ಎಂದಿದ್ದಾರೆ. ಪ್ರಧಾನಿ ಮೋದಿಯವರು ಸಹ ಈ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ‘ಸತ್ಯ ಹೊರಗೆ ಬರುತ್ತಿರುವುದು ಬಹಳ ಒಳ್ಳೆಯದು. ಅದರಲ್ಲಿಯೂ ಸಾಮಾನ್ಯ ಜನ ನೋಡಿ ಅರ್ಥ ಮಾಡಿಕೊಳ್ಳುವ ಮಾಧ್ಯಮದ ಮೂಲಕ ಸತ್ಯ ಹೊರಗೆ ಬರುತ್ತಿದೆ. ಸುಳ್ಳು ಹೇಳಿಕೆಗಳು, ಕತೆಗಳು ಕೆಲ ಸಮಯದ ವರೆಗೆ ಮಾತ್ರವೇ ಜೀವಂತ ಇರಲು ಸಾಧ್ಯ, ಸತ್ಯ ಎಂದಾದರೂ ಹೊರಗೆ ಬರಲೇ ಬೇಕಾಗುತ್ತದೆ’ ಎಂದಿದ್ದಾರೆ.
ಈ ಹಿಂದೆ, ‘ದಿ ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’, ‘ವಾಕ್ಸಿನ್ ವಾರ್’ ಇನ್ನೂ ಕೆಲವು ಸಿನಿಮಾಗಳಿಗೆ ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈಗ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾಕ್ಕೆ ಸಹ ಅದೇ ರೀತಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಸಿನಿಮಾವನ್ನು ಧೀರಜ್ ಸರ್ನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ, ರಾಶಿ ಖನ್ನಾ, ರಿಧಿ ದಿಗ್ರ, ಬರ್ಖಾ ಸಿಂಗ್ ಇನ್ನಿತರರು ನಟಿಸಿದ್ದಾರೆ. ನವೆಂಬರ್ 15 ಕ್ಕೆ ಈ ಸಿನಿಮಾ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ