‘ರಸ್ತೆ ಯಾರಪ್ಪನದ್ದಲ್ಲ’; ಮತ್ತೆ ಮುನ್ನೆಲೆಗೆ ಬಂತು ಅಕ್ಷಯ್ ಕುಮಾರ್ ಹಳೆಯ ಜಾಹೀರಾತು

|

Updated on: Aug 25, 2023 | 2:21 PM

ಸರ್ಕಾರ ಎಷ್ಟೇ ಕಠಿಣ ನಿಯಮ ತಂದರೂ ಅದನ್ನು ಕೆಲವರು ಪಾಲಿಸುವುದಿಲ್ಲ. ಆದರೂ ಸರ್ಕಾರ ಸುಮ್ಮನಾಗಿಲ್ಲ. ಹೊಸ ಹೊಸ ಜಾಹೀರಾತುಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಆ ಪೈಕಿ ಅಕ್ಷಯ್ ಕುಮಾರ್ ಜಾಹೀರಾತು ಸಾಕಷ್ಟು ಗಮನ ಸೆಳೆದಿದೆ.

‘ರಸ್ತೆ ಯಾರಪ್ಪನದ್ದಲ್ಲ’; ಮತ್ತೆ ಮುನ್ನೆಲೆಗೆ ಬಂತು ಅಕ್ಷಯ್ ಕುಮಾರ್ ಹಳೆಯ ಜಾಹೀರಾತು
ಅಕ್ಷಯ್ ಕುಮಾರ್
Follow us on

ಅಕ್ಷಯ್ ಕುಮಾರ್ (Akshay Kumar) ಅವರು ಸಿನಿಮಾ ಜೊತೆಗೆ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೇಶಭಕ್ತಿ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಸಿನಿಮಾಗಳಿದ್ದರೆ ಅದನ್ನು ಮಾಡೋಕೆ ಅಕ್ಷಯ್ ಕುಮಾರ್ ಅವರು ಹೆಚ್ಚು ಆದ್ಯತೆ ನೀಡುತ್ತಾರೆ. ರಸ್ತೆ ಸುರಕ್ಷೆ ಕುರಿತು ಅವರು ಮಾಡಿರೋ ಹಳೆಯ ಜಾಹೀರಾತು ಮತ್ತೆ ಮುನ್ನೆಲೆಗೆ ಬಂದಿದೆ. ಅನೇಕರು ಇದನ್ನು ಎವರ್​ಗ್ರೀನ್ ಜಾಹೀರಾತು ಎಂದು ಕರೆದಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ರೀತಿಯಲ್ಲಿ ಜಾಹೀರಾತು ಮೂಡಿ ಬಂದಿದೆ. ಈ ಜಾಹೀರಾತಿನಲ್ಲಿ ರಸ್ತೆ ಸುರಕ್ಷೆಯ ಕುರಿತು ಹೇಳಲಾಗಿದೆ.

ಸರ್ಕಾರ ಎಷ್ಟೇ ಕಠಿಣ ನಿಯಮ ತಂದರೂ ಅದನ್ನು ಕೆಲವರು ಪಾಲಿಸುವುದಿಲ್ಲ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸೋದು, ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕದೆ ಇರುವುದು, ಒನ್​ವೇದಲ್ಲಿ ವಾಹನ ಓಡಿಸುವುದು.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೂ ಸರ್ಕಾರ ಸುಮ್ಮನಾಗಿಲ್ಲ. ಹೊಸ ಹೊಸ ಜಾಹೀರಾತುಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಆ ಪೈಕಿ ಅಕ್ಷಯ್ ಕುಮಾರ್ ಜಾಹೀರಾತು ಸಾಕಷ್ಟು ಗಮನ ಸೆಳೆದಿದೆ.

ವ್ಯಕ್ತಿಯೋರ್ವ ಒನ್​ವೇನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾನೆ. ಆತನನ್ನು ಟ್ರಾಫಿಕ್ ಪೊಲೀಸ್ (ಅಕ್ಷಯ್ ಕುಮಾರ್) ತಡೆಯುತ್ತಾರೆ. ‘ನಿಮ್ಮ ತಂದೆ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಅವರನ್ನು ಸಾಕಷ್ಟು ಗೌರವಿಸುತ್ತೇನೆ. ಬೆಳಿಗ್ಗೆ ಅವರ ಫೋಟೋಗೆ ಹಾರ ಹಾಕಿ ನಮಸ್ಕರಿಸಿದೆ’ ಎನ್ನುತ್ತಾರೆ ಅಕ್ಷಯ್ ಕುಮಾರ್. ಇದನ್ನು ಕೇಳಿ ಕಾರು ಚಲಾಯಿಸುವ ವ್ಯಕ್ತಿ ಕನ್​ಫ್ಯೂಸ್ ಆಗುತ್ತಾನೆ. ‘ನಮ್ಮ ತಂದೆ ಇನ್ನೂ ಬದುಕಿದ್ದಾರೆ’ ಎನ್ನುತ್ತಾನೆ.

ಆಗ ಅಕ್ಷಯ್ ಕುಮಾರ್ ಪಕ್ಕದಲ್ಲಿರುವ ಬೋರ್ಡ್ ನೋಡುತ್ತಾರೆ. ಅಲ್ಲಿ ‘ಲೋಕಮಾನ್ಯ ತಿಲಕ್ ರಸ್ತೆ’ ಎಂದು ಬರೆದಿರುತ್ತದೆ. ‘ನಿಮ್ಮ ತಂದೆಯ ರಸ್ತೆ ಅಲ್ಲವೇ ಇದು? ಮತ್ಯಾಕೆ ಒನ್​ವೇದಲ್ಲಿ ಬಂದಿರಿ’ ಎಂದು ಕಾರು ಚಾಲಕನನ್ನು ಅಕ್ಷಯ್ ಕುಮಾರ್ ಕೇಳುತ್ತಾರೆ. ಜೊತೆಗೆ ಫೈನ್ ಕಟ್ಟುವಂತೆ ಹೇಳುತ್ತಾರೆ. ‘ರಸ್ತೆ ಯಾರಪ್ಪನದ್ದೂ ಅಲ್ಲ’ ಎನ್ನುವ ಸಾಲು ಕೂಡ ಬರುತ್ತದೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಈಗ ಭಾರತೀಯ ಪ್ರಜೆ; ಕೆನಡಾ ಪೌರತ್ವ ಬಿಟ್ಟು ಭಾರತದ ನಾಗರೀಕನಾದ ನಟ

ಅಕ್ಷಯ್ ಕುಮಾರ್ ಅವರ ಚಾರ್ಮ್​ ಈಗ ಮೊದಲಿನಂತಿಲ್ಲ. ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಭಾಗಿ ಆಗಿದ್ದಕ್ಕೆ ಅನೇಕರು ಅವರನ್ನು ಟೀಕಿಸಿದರು. ಬಳಿಕ ಅವರು ಈ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಒಪ್ಪಂದ ಮುಗಿಯುವವರೆಗೆ ಈ ಜಾಹೀರಾತು ಪ್ರಸಾರ ಕಾಣುತ್ತದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಸಿನಿಮಾ ರಿಲೀಸ್  ಆಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇಷ್ಟು ದಿನ ಕೆನಡಾದ ಪೌರತ್ವ ಹೊಂದಿದ್ದ ಅವರು, ಅದನ್ನು ತ್ಯಜಿಸಿ ಭಾರತದ ಪೌರತ್ವ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ