ಅಕ್ಷಯ್ ಕುಮಾರ್ (Akshay Kumar), ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಪ್ರತಿ ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆ ಪಡೆವ ಈ ನಟ, ತನ್ನ ವಾರಗೆಯ ನಟರು ವರ್ಷಕ್ಕೆ ಒಂದು ಅಥವಾ ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ, ವರ್ಷಕ್ಕೆ ಆರೇಳು ಸಿನಿಮಾಗಳಲ್ಲಿ ಅಕ್ಷಯ್ ನಟಿಸಿಬಿಡುತ್ತಾರೆ. ಕಳೆದ ವರ್ಷ ವಿಶ್ವದ ಶ್ರೀಮಂತ 100 ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರಿತ್ತು. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಬಂದ ಅಕ್ಷಯ್, ಆರಂಭದ ದಿನಗಳಲ್ಲಿ ಬಹಳ ಕಷ್ಟ ಕಂಡವರು. ಸದಾ ನಗುತ್ತಾ ಜಾಲಿಯಾಗಿರುವ ಅಕ್ಷಯ್, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಎಎನ್ಐಗೆ ಸಂದರ್ಶನ ನೀಡಿರುವ ಅಕ್ಷಯ್ ಕುಮಾರ್, ಸಿನಿಮಾ, ಕೆನಡಾ ನಾಗರೀಕತೆ ಪಡೆದ ವಿಷಯ, ರಾಜಕೀಯ, ಸಾಮಾಜಿಕ ಜಾಲತಾಣ, ಸಾಲು-ಸಾಲು ಫ್ಲಾಪ್ ಸಿನಿಮಾ, ತಮ್ಮ ಸಿನಿಮಾ ಪಯಣ, ಸಹ ನಟ-ನಟಿಯರು ಹೀಗೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಅದರಲ್ಲಿಯೂ ಬಹಳ ಅಪರೂಪಕ್ಕೆ ತಮ್ಮ ಆರಂಭದ ಸಂಕಷ್ಟದ ದಿನಗಳನ್ನು ಅಕ್ಷಯ್ ಕುಮಾರ್ ನೆನಪು ಮಾಡಿಕೊಂಡಿದ್ದಾರೆ.
”ದೆಹಲಿಯ ಚಾಂದಿನಿ ಚೌಕ್ನಲ್ಲಿ ಒಂದು ಸಣ್ಣ ಮನೆಯಲ್ಲಿ 24 ಜನ ವಾಸ ಮಾಡುತ್ತಿದ್ದೆವು. ಒಂದೇ ಕೋಣೆಯಲ್ಲಿ ಎಲ್ಲರೂ ಮಲಗುತ್ತಿದ್ದೆವು. ವ್ಯಾಯಾಮ ಮಾಡಲು ಎದ್ದಾಗ ಒಬ್ಬರನ್ನು ಇನ್ನೊಬ್ಬರು ತುಳಿದುಕೊಂಡೆ ಹೊರಗೆ ಬೇಕಾಗಿತ್ತು” ಎಂದು ನೆನಪು ಮಾಡಿಕೊಂಡಿದ್ದಾರೆ. ಆ ಬಳಿಕ ನಮ್ಮ ಕುಟುಂಬ ದೆಹಲಿಯಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿತು. ಸಿಯೋನ್ ಕೋಳಿವಾಡ ಪ್ರದೇಶದಲ್ಲಿ ನಾವು 100 ರೂಪಾಯಿಗೆ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದೆವು ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್
ಆಗ ಬಹಳ ಕಷ್ಟದ ದಿನಗಳಿದ್ದವು, ಕಡಿಮೆ ಸಂಪನ್ಮೂಲಗಳಲ್ಲಿಯೆ ಬದುಕುತ್ತಿದ್ದೆವು. ಆದರೆ ನಗುವುದನ್ನು ಮಾತ್ರ ನಾವು ಎಂದಿಗೂ ಮರೆತಿರಲಿಲ್ಲ. ಕಷ್ಟದ ದಿನಗಳಲ್ಲಿಯೂ ಬಹಳ ಎಂಜಾಯ್ ಮಾಡುತ್ತಿದ್ದೆವು. ಆ ದಿನಗಳಲ್ಲಿ ನಮಗೆ ಯಾವುದಕ್ಕೂ ಬೇಸರ ಎಂಬುದೇ ಆಗುತ್ತಿರಲಿಲ್ಲ. ಅನ್ನ-ಬೇಳೆ ಸಾರು ತಿನ್ನುತ್ತಿದ್ದೆವು, ಆಗಾಗ್ಗೆ ಆಲೂ ಗೋಬಿ, ಜೀರಾ ಆಲೂ, ಬಿಂಡಿ ತಿನ್ನುತ್ತಿದ್ದೆವು ಬಹಳ ಖುಷಿಯಾಗಿದ್ದೆವು. ಈಗ ಸಾಕಷ್ಟು ಹಣ ಇದೆ. ಆದರೆ ಈಗ ಆ ಖುಷಿ ಇಲ್ಲ” ಎಂದು ಬಡತನದಲ್ಲಿ ಖುಷಿಯನ್ನು ನೆನಪು ಮಾಡಿಕೊಂಡರು.
”ನಮ್ಮ ಕುಟುಂಬದವರಿಗೆ ಸಿನಿಮಾ ಪ್ರೀತಿ ಇತ್ತು. ನಾವು ಪ್ರತಿ ಶನಿವಾರ ಸಿನಿಮಾ ನೋಡಲು ಹೋಗುತ್ತಿದ್ದೆವು. ಸಿನಿಮಾ ನೋಡಲೆಂದೇ ಒಂದು ಹೊತ್ತಿನ ಊಟ ಬಿಟ್ಟು ಹಣ ಉಳಿಸುತ್ತಿದ್ದೆವು. ಹಾಗೆ ಉಳಿಸಿದ ಹಣದಲ್ಲಿ ಸಿನಿಮಾ ನೋಡುತ್ತಿದ್ದೆವು” ಎಂದ ಅಕ್ಷಯ್ ಕುಮಾರ್, ”ನಾನು ಏಳನೇ ತರಗತಿಯಲ್ಲಿ ಫೇಲ್ ಆಗಿಬಿಟ್ಟೆ. ಇದು ಅಪ್ಪನಿಗೆ ಸಿಟ್ಟು ತರಿಸಿತು. ನನ್ನನ್ನು ಚೆನ್ನಾಗಿ ಹೊಡೆದು ನೀನು ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀಯ ಎಂದು ಕೇಳಿದರು. ನನ್ನ ಬಾಯಿಯಿಂದ ನಟನಾಗಬೇಕು ಎಂದುಕೊಂಡಿದ್ದೀನಿ ಎಂದು ತನ್ನಂತಾನೆ ಬಂದಿತ್ತು” ಎಂದಿದ್ದಾರೆ.
ಓದಿನಲ್ಲಿ ಅಷ್ಟೋಂದು ಚುರುಕಿರದ ಅಕ್ಷಯ್, ಕರಾಟೆ ಕಲಿತು ಅದರ ಬಗ್ಗೆ ಪ್ರೀತಿ ಬೆಳೆಸಿಕೊಂಡರು. ಅಕ್ಷಯ್ ತಂದೆ ತಾವು ದುಡಿದ ಹಣವನ್ನೆಲ್ಲ ಒಟ್ಟು ಮಾಡಿ ಅಕ್ಷಯ್ ಅನ್ನು ಥಾಯ್ಲೆಂಡ್ಗೆ ಕಳಿಸಿ ಮಾರ್ಷಲ್ ಆರ್ಟ್ಸ್ ತರಬೇತಿ ಕೊಡಿಸಿದರು. ಸುಮಾರು ಐದು ವರ್ಷಗಳನ್ನು ಅಕ್ಷಯ್ ಬ್ಯಾಂಕಾಕ್, ಥಾಯ್ಲೆಂಡ್ಗಳಲ್ಲಿ ಕಳೆದರು. ಅಲ್ಲಿ ಅಡುಗೆ ಭಟ್ಟನಾಗಿಯೂ ಅಕ್ಷಯ್ ಕುಮಾರ್ ಕೆಲಸ ಮಾಡಿದರು. ಅಲ್ಲಿಂದ ಮರಳಿ, ಕೊಲ್ಕತ್ತಾದಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿದರು. ಅದಾದ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ತೆರಳಿ ಅಲ್ಲಿ ಹೋಟೆಲ್ ಒಂದರಲ್ಲಿ ಶೆಫ್ ಆಗಿದ್ದರು. ಬಳಿಕ ಮುಂಬೈಗೆ ವಾಪಸ್ಸಾಗಿ ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಿದರು. ಅದೇ ಸಮಯದಲ್ಲಿ ಒಂದು ಪೀಠೋಪಕರಣ ಮಳಿಗೆಗಾಗಿ ಜಾಹೀರಾತಿನಲ್ಲಿ ಅವಕಾಶ ಅಕ್ಷಯ್ಗೆ ದೊರಕಿತು. ಅಲ್ಲಿ ಜಾಹೀರಾತಿಗೆ ಹೆಚ್ಚು ಹಣ ದೊರಕಿದ ಕಾರಣ ಮಾಡೆಲಿಂಗ್ ಅನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಮನಸ್ಸು ಮಾಡಿ ಅದೇ ಹಾದಿಯಲ್ಲಿ ಮುಂದುವರೆದರು. ಬಳಿಕ ನಟನೆಗೂ ಧುಮುಕಿದರು, ಈಗ ಸ್ಟಾರ್ ನಟ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ