
ಸೂಪರ್ ಸ್ಟಾರ್ಗಳೆಂದರೆ ಅವರಿಗೆ ಯಾವುದೇ ಕಷ್ಟಗಳಿರುವುದಿಲ್ಲ. ಕೈಗೊಬ್ಬರು, ಕಾಲಿಗೊಬ್ಬರು ಆಳುಗಳಿರುತ್ತಾರೆ, ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು, ನೂರಾರು ಕೋಟಿ ಹಣ ಎಲ್ಲವೂ ಇರುತ್ತದೆ. ಆದರೆ ಅವರಿಗೆ ಬೇರೆಯದ್ದೇ ರೀತಿಯ ಸಮಸ್ಯೆಗಳು, ಮಾನಸಿಕ ಹಿಂಸೆಗಳು ಎದುರಾಗುತ್ತವೆ. ಇದೀಗ ಬಾಲಿವುಡ್ನ (Bollywood) ಸೂಪರ್ ಸ್ಟಾರ್ ನಟರೊಬ್ಬರು, ತಮಗೆ ಎದುರಾದ ಕಷ್ಟವೊಂದನ್ನು ಹೇಳಿಕೊಂಡಿದ್ದಾರೆ. ತಮ್ಮ ಮಗಳೊಟ್ಟಿಗೆ ಅನಾಮನಿಕನೊಬ್ಬನ ಕೆಟ್ಟ ವರ್ತನೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದಿದ್ದ ಸೈಬರ್ ಜಾಗೃತಿ ಸಪ್ತಾಹ 2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಷಯ್ ಕುಮಾರ್, ತಮ್ಮ 13 ವರ್ಷದ ಪುತ್ರಿ ಹೇಗೆ ಸೈಬರ್ ಲೈಂಗಿಕ ದೌರರ್ಜನ್ಯಕ್ಕೆ ಒಳಗಾಗಿದ್ದರು ಎಂಬುದನ್ನು ನಿರ್ಭೀತಿಯಿಂದ ಹೇಳಿಕೊಂಡಿದ್ದಾರೆ. ಆ ಮೂಲಕ ಇತರರು ಸಹ ತಮಗೆ ಆದ ಅನ್ಯಾಯದ ಬಗ್ಗೆ ಬಹಿರಂಗವಾಗಿ ಮಾತನಾಡುವ ಹಾಗೂ ಧೈರ್ಯವಾಗಿ ದೂರುಗಳನ್ನು ದಾಖಲಿಸುವ ಸ್ಪೂರ್ತಿ ತುಂಬಿದ್ದಾರೆ.
ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ‘ನನ್ನ 13 ವರ್ಷದ ಪುತ್ರಿ ಆನ್ಲೈನ್ನಲ್ಲಿ ಗೇಮ್ ಆಡುತ್ತಿದ್ದರು. ಆನ್ಲೈನ್ನಲ್ಲಿ ಅನಾಮಿಕನೊಟ್ಟಿಗೆ ಗೇಮ್ ನಡೆದಿತ್ತು. ಆ ಬದಿಯ ವ್ಯಕ್ತಿ ನೀನು ಪುರುಷನೋ ಅಥವಾ ಮಹಿಳೆಯೋ ಎಂದು ಕೇಳಿದ್ದಾನೆ. ನನ್ನ ಪುತ್ರಿ ತಾನು ಯುವತಿ ಎಂದು ಹೇಳಿದ ಕೂಡಲೇ, ಆ ಬದಿಯಲ್ಲಿದ್ದ ವ್ಯಕ್ತಿ ಬೆತ್ತಲೆ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ನನ್ನ ಪುತ್ರಿ ಕೂಡಲೇ ಹೋಗಿ ನನ್ನ ಪತ್ನಿಯ ಬಳಿ ಅಂದರೆ ಆಕೆಯ ತಾಯಿಯ ಬಳಿ ವಿಷಯ ಹೇಳಿದ್ದಾಳೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಇದನ್ನೂ ಓದಿ:ಬದಲಾಗೋದೇ ಇಲ್ಲ ಅಕ್ಷಯ್ ಕುಮಾರ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
‘ಈ ರೀತಿಯೇ ಆನ್ಲೈನ್ ದೌರ್ಜನ್ಯಗಳು ಶುರುವಾಗುತ್ತವೆ. ನನ್ನ ಮಗಳು ತಾಯಿಯ ಬಳಿ ಹೇಳಿಕೊಂಡಿದ್ದಕ್ಕೆ ಅನಾಹುತ ಆಗಲಿಲ್ಲ. ಆದರೆ ಎಲ್ಲರೊಟ್ಟಿಗೂ ಹೀಗೆ ಆಗುವುದಿಲ್ಲ. ಕೆಲವು ಮಕ್ಕಳು ಮೈಮರೆತು, ದೂರದೃಷ್ಟಿ ಇಲ್ಲದೆ ಚಿತ್ರಗಳನ್ನು, ವಿಡಿಯೋಗಳನ್ನು ಕಳಿಸಿದ್ದಿದೆ. ಅದೇ ವಿಡಿಯೋ, ಚಿತ್ರಗಳನ್ನು ಇರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ. ಹಣ ದೋಚುತ್ತಾರೆ. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ಸಹ ಇವೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಅಕ್ಷಯ್ ಕುಮಾರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗನ ಹೆಸರು ಆರವ್, ಆತ ವಿದೇಶದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾನೆ. ಮಗಳ ಹೆಸರು ನಿತಾರಾ. ಅವರ ವಯಸ್ಸಿನ್ನೂ 13 ವರ್ಷಗಳಾಗಿದ್ದು ಮುಂಬೈನ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೀಗ ನಿತಾರಾ ಅವರಿಗೆ ಆನ್ಲೈನ್ನಲ್ಲಿ ಕಿರುಕುಳ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Sat, 4 October 25