ಬಾಲಿವುಡ್ (Bollywood) ಪಾಲಿಗೆ ಸದ್ಯಕ್ಕಂತೂ ಆಶಾದಾಯಕ ವಾತಾವರಣ ಕಾಣುತ್ತಿಲ್ಲ. ತೆರೆಕಂಡ ಸಿನಿಮಾಗಳಲ್ಲಿ ಬಹುಪಾಲು ಚಿತ್ರಗಳು ಸೋಲುತ್ತಿವೆ. ಜನರು ಹಿಂದಿ ಸಿನಿಮಾಗಿಂತಲೂ ದಕ್ಷಿಣ ಭಾರತದ ಭಾಷೆಗಳ ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ವರ್ಷವಂತೂ ಅಕ್ಷಯ್ ಕುಮಾರ್, ಆಮಿರ್ ಖಾನ್ ಅವರಂತಹ ಸ್ಟಾರ್ ಕಲಾವಿದರು ಕೂಡ ಸೋತು ಸೊರಗಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರಿಗೆ ಬ್ಯಾಕ್ ಟು ಬ್ಯಾಕ್ ಸೋಲು ಎದುರಾಗಿದೆ. ಈಗ ಅವರು ‘ರಾಮ್ ಸೇತು’ (Ram Setu) ಚಿತ್ರದ ಮೂಲಕವಾದರೂ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ಚಿತ್ರದ ಅಡ್ವಾನ್ಸ್ ಬುಕಿಂಗ್ ಲೆಕ್ಕಾಚಾರ ನೋಡಿದರೆ ಯಾಕೋ ಮತ್ತೆ ಅವರಿಗೆ ಪ್ರೇಕ್ಷಕರು ಕೈ ಕೊಡುವ ಸಂಭವ ಕಾಣುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ಅವರು ಸೂಪರ್ ಸ್ಟಾರ್. ಅವರ ಸಿನಿಮಾಗೆ ಹಣ ಹಾಕಿದರೆ ಮಿನಿಮಮ್ ಲಾಭ ಗ್ಯಾರಂಟಿ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಅದು ಸುಳ್ಳಾಯಿತು. ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ಬಚ್ಚನ್ ಪಾಂಡೆ’ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಹಾಗಾಗಿ ಅವರ ಚಾರ್ಮ್ ನಿಧಾನಕ್ಕೆ ಕಮ್ಮಿ ಆಗಿದೆ. ಸಾಲು ಸಾಲು ಸೋಲಿನ ಬೆನ್ನಲ್ಲೇ ಅವರ ‘ರಾಮ್ ಸೇತು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಟ್ರೇಲರ್ ಮೂಲಕ ‘ರಾಮ್ ಸೇತು’ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 25ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚೆಗೆ ಇದರ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಯಿತು. ಆದರೆ ಜನರು ಟಿಕೆಟ್ ಬುಕ್ ಮಾಡುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಸೋಮವಾರ (ಅ.24) ಬೆಳಗ್ಗೆವರೆಗೂ ಆಗಿರುವ ಬುಕಿಂಗ್ ಗಮನಿಸಿದರೆ ಈ ಸಿನಿಮಾ ಮೊದಲ ದಿನ ಗಳಿಸುವುದು 1 ಕೋಟಿ ರೂಪಾಯಿ ಮಾತ್ರ. ಕೊನೇ ಕ್ಷಣದವರೆಗೂ ಇನ್ನೂ ಹೆಚ್ಚಿನ ಬುಕಿಂಗ್ ಆದರೂ ಕೂಡ ಹೆಚ್ಚೆಂದರೆ 2 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಅಷ್ಟೇ ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ತಯಾರಾಗುತ್ತವೆ. ನಿರ್ಮಾಪಕರಿಗೆ ಲಾಭ ಆಗಬೇಕು ಎಂದರೆ ಕನಿಷ್ಠ 100 ಕೋಟಿ ಮೇಲಾದರೂ ಕಲೆಕ್ಷನ್ ಆಗಬೇಕು. ಆದರೆ ‘ರಾಮ್ ಸೇತು’ ಸಿನಿಮಾ ಅಷ್ಟು ಕಲೆಕ್ಷನ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲೂ ಜನರು ಅಡ್ವಾನ್ಸ್ ಬುಕಿಂಗ್ಗೆ ನೀರಸ ಪ್ರತಿಕ್ರಿಯೆ ತೋರಿಸುತ್ತಿರುವುದು ಅಚ್ಚರಿ ಉಂಟುಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.