Amitabh Bachchan: ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಕಾಲಿಗೆ ಗಾಯ; ನಡೆಯಲೇಬೇಡಿ ಅಂತ ಸಲಹೆ ನೀಡಿದ ವೈದ್ಯರು
Amitabh Bachchan Hospitalized: ಕಾಲಿಗೆ ಪೆಟ್ಟಾಗಿರುವ ಬಗ್ಗೆ ತಮ್ಮ ಬ್ಲಾಗ್ ಮೂಲಕ ಅಮಿತಾಭ್ ಬಚ್ಚನ್ ಅವರು ಮಾಹಿತಿ ನೀಡಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಪ್ರಾರ್ಥಿಸಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಇತ್ತೀಚೆಗಷ್ಟೇ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅದರ ಬೆನ್ನಲ್ಲೇ ಒಂದು ಕಹಿ ಸುದ್ದಿ ಕೇಳಿಬಂದಿದೆ. ಶೂಟಿಂಗ್ ವೇಳೆ ಅವರು ಎಡಗಾಲಿಗೆ ಪೆಟ್ಟು (Amitabh Bachchan Injury) ಮಾಡಿಕೊಂಡಿದ್ದಾರೆ. ರಕ್ತನಾಳ ಕಟ್ ಆಗಿದ್ದರಿಂದ ವಿಪರೀತ ರಕ್ತ ಹೋಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಲಿಗೆ ಹಾಕಿಸಲಾಯಿತು. ಈಗ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಒತ್ತಡ ಹಾಕುವಂತಿಲ್ಲ, ನಡೆಯುವಂತಿಲ್ಲ ಎಂದು ಕೂಡ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸ್ವತಃ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಅಮಿತಾಭ್ ಬಚ್ಚನ್ ಅವರ ಅನುಭವ ಅಪಾರ. 53 ವರ್ಷಗಳಿಗಿಂತಲೂ ಹೆಚ್ಚು ಕಾಲ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ದಣಿವರಿಯದ ಯುವಕನಂತೆ ಈಗಲೂ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಎಷ್ಟೋ ಜನರಿಗೆ ಅವರು ಮಾದರಿ ಆಗಿದ್ದಾರೆ. ತಮ್ಮದೇ ಬ್ಲಾಗ್ ಹೊಂದಿರುವ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ಕಾಲಿಗೆ ಪೆಟ್ಟಾಗಿರುವ ಬಗ್ಗೆಯೂ ಬ್ಲಾಗ್ ಮೂಲಕ ಅವರು ಮಾಹಿತಿ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಪ್ರಾರ್ಥಿಸಿದ್ದಾರೆ. ಈ ಹಿಂದೆ ಎರಡು ಬಾರಿ ಅಮಿತಾಭ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈಗ ಕಾಲಿಗೆ ಪೆಟ್ಟು ಮಾಡಿಕೊಂಡಿರುವುದು ಬೇಸರದ ಸಂಗತಿ. ಇಂಥ ಎಷ್ಟೇ ಅಡೆತಡೆಗಳು ಬಂದರೂ ಅಮಿತಾಭ್ ಅವರು ಕುಗ್ಗುವುದಿಲ್ಲ. ಪ್ರತಿ ಬಾರಿಯೂ ಅವರು ಹೊಸ ಹುಮ್ಮಸ್ಸಿನೊಂದಿಗೆ ಕೆಲಸಕ್ಕೆ ಮರಳುತ್ತಾರೆ. ಅದು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ.
ಇತ್ತೀಚೆಗೆ ಅದ್ದೂರಿಯಾಗಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಆಗಮಿಸಬೇಕಿತ್ತು. ಡಾ. ರಾಜ್ಕುಮಾರ್ ಕುಟುಂಬದ ಜೊತೆ ಅವರಿಗೆ ಉತ್ತಮ ಒಡನಾಟ ಇದೆ. ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲು ಅವರಿಗೂ ಆಮಂತ್ರಣ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲು ಸಾಧ್ಯವಾಗಲಿಲ್ಲ. ವಿಡಿಯೋ ಸಂದೇಶದ ಮೂಲಕ ಪುನೀತ್ ರಾಜ್ಕುಮಾರ್ ಅವರನ್ನು ಅಮಿತಾಭ್ ಸ್ಮರಿಸಿದರು. ‘ಗಂಧದ ಗುಡಿ’ ಸಾಕ್ಷ್ಯಚಿತ್ರಕ್ಕೆ ಶುಭವಾಗಲಿ ಎಂದು ಹರಸಿದರು.
80ರ ಹರೆಯದಲ್ಲೂ ಅಮಿತಾಭ್ ಬಚ್ಚನ್ ಅವರು ಸಖತ್ ಬ್ಯುಸಿ ಆಗಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮ ನಡೆಸಿಕೊಡುವುದರ ಜೊತೆಗೆ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಅನೇಕ ನಿರ್ದೇಶಕರು ಕಥೆ ಬರೆಯುತ್ತಿದ್ದಾರೆ. ಅವರು ಮುಖ್ಯ ಭೂಮಿಕೆ ನಿಭಾಯಿಸಿದ ‘ಗುಡ್ಬೈ’ ಸಿನಿಮಾ ಇತ್ತೀಚೆಗೆ ತೆರೆಕಂಡಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ಆ ಚಿತ್ರಕ್ಕೆ ಸಾಧ್ಯವಾಗಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:34 am, Mon, 24 October 22