Amitabh Bachchan: ಸಾಲದ ಸುಳಿಗೆ ಸಿಲುಕಿದ್ದ ಅಮಿತಾಭ್ ಬಚ್ಚನ್ ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ
Amitabh Bachchan 80th birthday: ಸ್ಟಾರ್ ಆಗಿ ಮೆರೆದ ಬಳಿಕವೂ ಅಮಿತಾಭ್ ಬಚ್ಚನ್ ಅವರಿಗೆ ತೀರಾ ಕಷ್ಟದ ಸಂದರ್ಭ ಎದುರಾಗಿತ್ತು. ನಿರ್ಮಾಪಕರ ಮನೆಗೆ ಹೋಗಿ ‘ದಯವಿಟ್ಟು ಒಂದೇ ಒಂದು ಅವಕಾಶ ಕೊಡಿ’ ಎಂದು ಅವರು ಬೇಡಿಕೊಂಡರು.
ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವಾದ್ಯಂತ ಇರುವ ಅಭಿಮಾನಿಗಳು ಇಂದು (ಅ.11) ಅವರ ಹುಟ್ಟುಹಬ್ಬ (Amitabh Bachchan Birthday) ಆಚರಿಸುತ್ತಿದ್ದಾರೆ. 80ನೇ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರೇ ಸ್ಫೂರ್ತಿ. ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಅಮಿತಾಭ್ ಬಚ್ಚನ್ ಸಾಗಿ ಬಂದ ಹಾದಿ ತುಂಬ ಸುಲಭವಾಗಿಯೇನೂ ಇರಲಿಲ್ಲ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಮುಂದೆ ಬಂದಿದ್ದಾರೆ. ಒಮ್ಮೆಯಂತೂ ಅವರು ಎಲ್ಲವನ್ನೂ ಕಳೆದುಕೊಂಡು ಸಂಪೂರ್ಣ ಸೋತ ಸ್ಥಿತಿಗೆ ತಲುಪಿದ್ದರು. ಆ ಕಷ್ಟದ ದಿನಗಳನ್ನು ಎದುರಿಸಿ ಅವರು ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ.
ಅದು 1999ರ ಸಮಯ. ಹಲವಾರು ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿ ಫೇಮಸ್ ಆಗಿದ್ದರೂ ಕೂಡ ಅಮಿತಾಭ್ ಬಚ್ಚನ್ ಅವರು ಬಿಸ್ನೆಸ್ನಲ್ಲಿ ಸೋತರು. ಅವರ ‘ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್’ ಕಂಪನಿ ಭಾರಿ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಬಂದು ಮನೆ ಬಳಿ ನಿಲ್ಲುವಂತಾಯಿತು. ಕುಟುಂಬದವರಿಗೆ ಬೆದರಿಕೆ ಬಂದವು. ಆ ಸಮಯದಲ್ಲಿ ಅಮಿತಾಭ್ ಬಚ್ಚನ್ ಚಿಂತೆಗೆ ಒಳಗಾಗಿದ್ದರು. ಅಂಥ ಕಷ್ಟದ ಸಂದರ್ಭದಲ್ಲಿಯೂ ಅಮಿತಾಭ್ ಬಚ್ಚನ್ ಅವರು ಸೋಲು ಒಪ್ಪಿಕೊಳ್ಳಲಿಲ್ಲ. ಕೆಲಸದ ಮೂಲಕವೇ ಮತ್ತೆ ಎದ್ದು ನಿಲ್ಲುವ ಮನಸ್ಸು ಮಾಡಿದರು.
ಅಲ್ಲಿಯವರೆಗಿನ 44 ವರ್ಷಗಳ ವೃತ್ತಿಜೀವನದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ಆ ರೀತಿಯ ಕಷ್ಟ ಎಂದೂ ಬಂದಿರಲಿಲ್ಲ. ಸೀದಾ ಅವರು ನಿರ್ಮಾಪಕ ಯಶ್ ಚೋಪ್ರಾ ನಿವಾಸಕ್ಕೆ ಹೋದರು. ದಯವಿಟ್ಟು ಅವಕಾಶ ಕೊಡಿ ಎಂದು ಬೇಡಿಕೊಂಡರು. ಆಗ ಶಾರುಖ್ ಖಾನ್ ಹೀರೋ ಆಗಿದ್ದ ‘ಮೊಹಬ್ಬತೇ’ ಸಿನಿಮಾದಲ್ಲಿ ಬಚ್ಚನ್ ಅವರಿಗೆ ಒಂದು ಪಾತ್ರ ಸಿಕ್ಕಿತು. ಅಲ್ಲಿಂದ ಅವರ ಬದುಕು ಮತ್ತೆ ಬದಲಾಯಿತು. ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರಗಳನ್ನು ಮಾಡುತ್ತ ಅವರು ಮುನ್ನುಗ್ಗಲು ಆರಂಭಿಸಿದರು.
ಆ ಬಳಿಕ ತಮ್ಮ ಪಾಲಿಗೆ ಬಂದ ಎಲ್ಲ ಅವಕಾಶವನ್ನೂ ಅವರು ಒಪ್ಪಿಕೊಳ್ಳಲು ಶುರು ಮಾಡಿದರು. ಒಂದೊಂದೇ ಸಾಲ ತೀರಿಸುತ್ತಾ ಬಂದರು. ಕಳೆದುಕೊಂಡಿದ್ದ ಎಲ್ಲವನ್ನೂ ಮರಳಿ ಪಡೆದರು. ಈಗಲೂ ಅವರು ಬಹುಬೇಡಿಕೆಯ ಕಲಾವಿದನಾಗಿ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ.
ಇಳಿ ವಯಸ್ಸಿನಲ್ಲೂ ಪ್ರತಿ ದಿನ ಕೆಲಸ ಮಾಡುವ ಮೂಲಕ ಕೋಟ್ಯಂತರ ಜನರಿಗೆ ಅಮಿತಾಭ್ ಬಚ್ಚನ್ ಅವರು ಮಾದರಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಎಷ್ಟೋ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Tue, 11 October 22