Karan Johar: ಏಕಾಏಕಿ ಟ್ವಿಟರ್ನಿಂದ ಹೊರಹೋಗಲು ನಿರ್ಧರಿಸಿದ ಕರಣ್ ಜೋಹರ್; ಕಾರಣ ಏನು?
Karan Johar Twitter: ಕರಣ್ ಜೋಹರ್ ಅವರು ಟ್ವಿಟರ್ ತೊರೆದಿರುವುದು ಕುತೂಹಲಕ್ಕೆ ಕಾರಣ ಆಗಿದೆ. ಈ ಬಗ್ಗೆ ನೆಟ್ಟಿಗರು ಬಗೆಬಗೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಸೆಲೆಬ್ರಿಟಿಗಳ ಪಾಲಿಗೆ ಟ್ವಿಟರ್ (Twitter) ಒಂದು ದೊಡ್ಡ ಮಾಧ್ಯಮ. ತಮ್ಮ ಸಿನಿಮಾಗಳ ಪ್ರಚಾರಕ್ಕೆ ಈ ವೇದಿಕೆಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ (Karan Johar) ಕೂಡ ಟ್ವಿಟರ್ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುವವರು. ಆದರೆ ಏಕಾಏಕಿ ಅವರು ಟ್ವಿಟರ್ (Karan Johar Twitter) ತೊರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ. ಕರಣ್ ಜೋಹರ್ ಅವರ ಈ ನಿರ್ಧಾರದಿಂದ ಅನೇಕರಿಗೆ ಅಚ್ಚರಿ ಆಗಿದೆ. ನೆಗೆಟಿವಿಟಿಯಿಂದ ದೂರ ಇರಬೇಕು ಎಂಬ ಕಾರಣಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಮತ್ತೆ ಯಾವಾಗ ಅವರು ಟ್ವಿಟರ್ಗೆ ಮರಳುತ್ತಾರೋ ಎಂಬ ಕೌತುಕ ಮೂಡಿದೆ.
ಬಾಲಿವುಡ್ನಲ್ಲಿ ಕರಣ್ ಜೋಹರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅನೇಕರಿಗೆ ಅವರೇ ಗಾಡ್ ಫಾದರ್. ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಸ್ಟಾರ್ ಕಿಡ್ಗಳನ್ನು ಲಾಂಚ್ ಮಾಡಲು ಕರಣ್ ಜೋಹರ್ ಸದಾ ಮುಂದಿರುತ್ತಾರೆ. ಅವರು ಮಾಡುವ ಪ್ರತಿ ಟ್ವೀಟ್ ಕೂಡ ಲಕ್ಷಾಂತರ ಜನರನ್ನು ತಲುಪುತ್ತದೆ. ಹಾಗಿದ್ದರೂ ಸಹ ಅವರು ಟ್ವಿಟರ್ಗೆ ಗುಡ್ಬೈ ಹೇಳಲು ತೀರ್ಮಾನಿಸಿದ್ದಾರೆ.
ಕರಣ್ ಜೋಹರ್ ನಿರ್ಮಾಣ ಮಾಡಿದ ‘ಬ್ರಹ್ಮಾಸ್ತ್ರ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಕಮಾಯಿ ಮಾಡಿತು. ಕೆಲವರು ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಪ್ರಶ್ನೆ ಮಾಡಿದರು. ಇದರಿಂದ ಒಂದು ಬಗೆಯ ನೆಗೆಟಿವಿಟಿ ಹಬ್ಬಿದೆ. ಅದು ಕರಣ್ ಜೋಹರ್ ಅವರಿಗೆ ಹೆಚ್ಚು ಬೇಸರ ಉಂಟು ಮಾಡಿದಂತಿದೆ. ‘ನಾವು ವಿಮರ್ಶೆಯನ್ನು ಸ್ವೀಕರಿಸಲು ರೆಡಿ ಇದ್ದೇನೆ. ಆದರೆ ನೆಗೆಟಿವಿಟಿ ಸ್ವೀಕರಿಸುವುದು ಕಷ್ಟ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದರ ಬೆನ್ನಲೇ ಅವರು ಟ್ವಿಟರ್ನಿಂದ ಹೊರನಡೆದಿರುವುದು ಕುತೂಹಲಕ್ಕೆ ಕಾರಣ ಆಗಿದೆ.
‘ಪಾಸಿಟಿವ್ ಶಕ್ತಿಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಟ್ವಿಟರ್ಗೆ ವಿದಾಯ’ ಎಂದು ಕರಣ್ ಜೋಹರ್ ಅವರು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಜನರು ಬಗೆಬಗೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ‘ಇವರು ಈ ಅಕೌಂಟ್ ಬಿಟ್ಟು, ಬೇರೊಂದು ಅಕೌಂಟ್ ಮೂಲಕ ಟ್ವಿಟರ್ನಲ್ಲೇ ಇರುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ನಿಮ್ಮ ಮಾನಸಿಕ ಆರೋಗ್ಯ ಮತ್ತು ಬ್ರಹ್ಮಾಸ್ತ್ರ 2ನೇ ಪಾರ್ಟ್ ಬಗ್ಗೆ ಗಮನ ಹರಿಸಿ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ‘ಯಾವುದೇ ಸೋಶಿಯಲ್ ಮೀಡಿಯಾಗಿಂತ ಮನಸ್ಸಿನ ಶಾಂತಿ ತುಂಬ ಮುಖ್ಯ’ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:18 am, Tue, 11 October 22