‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?

ಒಂದು ಸಿನಿಮಾ ಹಿಟ್ ಆದ ಬಳಿಕ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಾರೆ ಕೆಲವು ಕಲಾವಿದರು. ಆದರೆ ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅವರು ಇರುವ ಅವಕಾಶಗಳನ್ನು ಕೈ ಚೆಲ್ಲುತ್ತಿದ್ದಾರೆ. ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ಈ ಬೆಳವಣಿಗೆ ನಡೆದಿದೆ ಎಂಬ ಮಾತು ಹೇಳಿಬರುತ್ತಿದೆ.

‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?
Akshaye Khanna

Updated on: Dec 24, 2025 | 4:02 PM

2025ರಲ್ಲಿ ಅತಿ ಹೆಚ್ಚು ಕೆಲಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಧುರಂಧರ್’ (Dhurandhar) ಪಾತ್ರವಾಗಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಕೇವಲ 20 ದಿನಕ್ಕೆ 600 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ಈ ಸಿನಿಮಾದ ಅಬ್ಬರ ನಿಂತಿಲ್ಲ. ವಿದೇಶದಿಂದ ಬಂದ ಆದಾಯವನ್ನೂ ಸೇರಿಸಿದರೆ 20 ದಿನಕ್ಕೆ ಒಟ್ಟು ಕಲೆಕ್ಷನ್ 925 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ನಟ ಅಕ್ಷಯ್ ಖನ್ನಾ (Akshaye Khanna) ಅವರ ಖ್ಯಾತಿ ಹೆಚ್ಚಾಗಿದೆ. ಹಾಗಾಗಿ ಅವರ ಬೇಡಿಕೆ ಕೂಡ ಹೆಚ್ಚಿದೆ. ಇದರ ಪರಿಣಾಮವಾಗಿ ಅವರು ‘ದೃಶ್ಯಂ 3’ (Drishyam 3) ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಆಗಿರುವುದು ದುಬಾರಿ ಸಂಭಾವನೆ!

‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಮಾಡಿದ್ದಾರೆ. ಇದು ವಿಲನ್ ಪಾತ್ರ. ಈ ಪಾತ್ರಕ್ಕಾಗಿ ಅವರು 2.5 ಕೋಟಿಯಿಂದ 3 ಕೋಟಿ ರೂಪಾಯಿ ತನಕ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ‘ಧುರಂಧರ್’ ಸೂಪರ್ ಹಿಟ್ ಆಗಿದ್ದೇ ತಡ, ಅಕ್ಷಯ್ ಖನ್ನಾ ಅವರು ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

‘ದೃಶ್ಯಂ 3’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಪಾತ್ರ ಮಾಡಬೇಕಿತ್ತು. ಆದರೆ ಈಗ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದರಿಂದ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ. ಅಲ್ಲದೇ, ಅಕ್ಷಯ್ ಖನ್ನಾ ಅವರು ತಮ್ಮ ಪಾತ್ರದ ಲುಕ್ ಕೂಡ ಬದಲಾಗಬೇಕು ಎಂದು ಹಠ ಹಿಡಿದಿದ್ದಾರಂತೆ. ಈ ವಿಚಾರದಲ್ಲಿ ಚಿತ್ರತಂಡದ ಜೊತೆ ಮಾತುಕಥೆ ನಡೆದು, ಸಫಲವಾಗದ ಪರಿಣಾಮ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಅದೇ ರೀತಿ, ‘ಧುರಂಧರ್’ ಸಿನಿಮಾದ ನಾಯಕ ರಣವೀರ್ ಸಿಂಗ್ ಕೂಡ ತಮ್ಮ ಮುಂದಿನ ಸಿನಿಮಾಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ‘ಧುರಂಧರ್’ ಬಳಿಕ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅವರು ಆ ಸಿನಿಮಾ ಮಾಡಲು ಈಗ ಸಿದ್ಧರಿಲ್ಲ ಎನ್ನಲಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಒಂದೇ ರೀತಿಯ ಸಿನಿಮಾ ಮಾಡುವ ಬದಲು ಬೇರೆ ಏನಾದರೂ ಪ್ರಯತ್ನಿಸಬೇಕು ಎಂಬುದು ಅವರ ಆಲೋಚನೆ.

ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2026ರ ಜನವರಿಯಿಂದ ‘ಡಾನ್ 3’ ಸಿನಿಮಾದ ಶೂಟಿಂಗ್ ಆರಂಭಿಸಲು ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಸಜ್ಜಾಗುತ್ತಿದ್ದರು. ಆದರೆ ಈಗ ರಣವೀರ್ ಸಿಂಗ್ ಅವರು ತಮ್ಮ ಮನಸ್ಸು ಬದಲಾಯಿಸಿ ‘ಡಾನ್ 3’ ಮಾಡದೇ ಇರಲು ತೀರ್ಮಾನಿಸಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಆದರೆ ಈ ಎಲ್ಲ ಅಂತೆ-ಕಂತೆಗಳ ಬಗ್ಗೆ ರಣವೀರ್ ಸಿಂಗ್ ಅವರಾಗಲಿ, ಅಕ್ಷಯ್ ಖನ್ನಾ ಅವರಾಗಲಿ ಅಥವಾ ಚಿತ್ರತಂಡದವರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.