ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆರೆಯ ಮೇಲೆ ಈರ್ವರೂ ಜತೆಯಾಗಿ ನಟಿಸಿರುವ ಮೊದಲ ಚಿತ್ರ ‘ಬ್ರಹ್ಮಾಸ್ತ್ರ’ ಇನ್ನಷ್ಟೇ ತೆರೆಕಾಣಬೇಕಿದೆ. ಚಿತ್ರಗಳ ವಿಚಾರಕ್ಕೆ ಬಂದಾಗ ರಣಬೀರ್ ಹಾಗೂ ಆಲಿಯಾ ವೈಯಕ್ತಿಕವಾಗಿ ಹಲವು ಹಿಟ್ ನಿರ್ದೇಶಕರಿಗೆ ಬಹಳ ಆಪ್ತರು. ಅರ್ಥಾತ್, ಈರ್ವರೊಂದಿಗೆ ಕೆಲಸ ಮಾಡಲು ಎಲ್ಲಾ ತಾರಾ ನಿರ್ದೇಶಕರು, ನಿರ್ಮಾಪಕರು ದೀರ್ಘಕಾಲ ಕಾಯುತ್ತಾರೆ. ಅದಕ್ಕೆ ತಕ್ಕಂತೆ ಈ ತಾರಾ ಜೋಡಿಯ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕಮಾಯಿಯನ್ನೂ ಮಾಡುತ್ತವೆ. ಖ್ಯಾತ ನಿರ್ದೇಶಕರಾದ ಇಮ್ತಿಯಾಜ್ ಅಲಿ, ಸಂಜಯ್ ಲೀಲಾ ಭನ್ಸಾಲಿ, ಅಯಾನ್ ಮುಖರ್ಜಿ ಮೊದಲಾದವರು ಹಲವು ವೇದಿಕೆಗಳಲ್ಲಿ ಆಲಿಯಾ ಹಾಗೂ ರಣಬೀರ್ರ ನಟನಾ ಸಾಮರ್ಥ್ಯವನ್ನು, ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಈ ಪಟ್ಟಿಯಲ್ಲಿ ಮತ್ತೋರ್ವ ಸ್ಟಾರ್ ನಿರ್ದೇಶಕ/ ನಿರ್ಮಾಪಕ ಕರಣ್ ಜೋಹರ್ (Karan Johar) ಕೂಡ ಇದ್ದಾರೆ. ನೆಪೋಟಿಸಂ ಬಗ್ಗೆ ಕರಣ್ ಜೋಹರ್ ಕುರಿತು ಹಲವು ಆರೋಪಗಳಿದ್ದರೂ ಕೂಡ, ಹಲವು ಪ್ರತಿಭಾವಂತರನ್ನು ಕರಣ್ ಪರಿಚಯಿಸಿದ್ದು ಸುಳ್ಳಲ್ಲ. ಇದೀಗ ಆಲಿಯಾ- ರಣಬೀರ್ ಹಾಗೂ ಕರಣ್ ಕುರಿತ ಕುತೂಹಲಕರ ವಿಚಾರವೊಂದು ಹೊರಬಿದ್ದಿದೆ.
ಆಲಿಯಾ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದು, ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ. ಅದನ್ನು ನಿರ್ದೇಶಿಸಿದ್ದು ಕರಣ್ ಜೋಹರ್. ಆದರೆ ಆಲಿಯಾ ವೃತ್ತಿ ಜೀವನದ ಮೊದಲಿಗೆ ನಟನೆಗಿಂತ ಹೆಚ್ಚು ಸುದ್ದಿಯಾಗಿದ್ದು ಕರಣ್ ಜೋಹರ್ ಶೋ ಮುಖಾಂತರವೇ! ಆಲಿಯಾ ‘ಕಾಪಿ ವಿತ್ ಕರಣ್’ ಶೋನಲ್ಲಿ ನೀಡಿದ ಹೇಳಿಕೆಗಳು ಟೀಕೆಗೆ ಗುರಿಯಾಗಿ, ನಟಿ ಟ್ರೋಲ್ಗೆ ಒಳಗಾಗಿದ್ದರು. ಆದರೆ ಆಲಿಯಾ- ಕರಣ್ ಬಾಂಧವ್ಯ ಮುಂದುವರೆದಿತ್ತು. ಇದೀಗ ಕರಣ್ ಜೋಹರ್ ನಿರ್ದೇಶನದ ನೂತನ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯಲ್ಲಿ ರಣವೀರ್ ಸಿಂಗ್ಗೆ ನಾಯಕಿಯಾಗಿ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ಇತ್ತೀಚೆಗೆ ಕರಣ್ ನೀಡಿದ್ದ ಹೇಳಿಕೆ ಇದೀಗ ಸಖತ್ ಸುದ್ದಿಯಾಗಿದೆ.
ಅಷ್ಟಕ್ಕೂ ಕರಣ್ ಜೋಹರ್ ಹೇಳಿದ್ದೇನು?
ಕರಣ್ ಜೋಹರ್ ಇತ್ತೀಚೆಗೆ ‘ಸೋಷಿಯಲ್ ಮೀಡಿಯಾ ಸ್ಟಾರ್ ಜಾನಿಸ್’ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿ ಅವರು ಮಾತನಾಡುತ್ತಾ, ಆಲಿಯಾ ಹಾಗೂ ರಣಬೀರ್ ಇರದ ವಾಟ್ಸಾಪ್ ಗುಂಪೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಬಾಲಿವುಡ್ ತಾರೆಯರು ಇರದ ವಾಟ್ಸಾಪ್ ಗುಂಪಿನ ಬಗ್ಗೆ ಹೇಳಿ’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಚಾರ ಹಂಚಿಕೊಂಡಿದ್ದಾರೆ ಕರಣ್. ಆಲಿಯಾ ಹಾಗೂ ರಣಬೀರ್ಗೆ ಆ ಒಂದು ವಾಟ್ಸಾಪ್ ಗುಂಪಿಗೆ ಸೇರಬೇಕು ಎಂಬ ಮನಸ್ಸಿತ್ತಂತೆ. ಈ ಬಗ್ಗೆ ಮನಬಿಚ್ಚಿ ಕೇಳಿಕೊಂಡಿದ್ದರಂತೆ. ಆದರೆ ಅವರನ್ನು ಸೇರಿಸಿಕೊಂಡಿಲ್ಲ ಎಂದಿದ್ದಾರೆ ಕರಣ್ ಜೋಹರ್.
ಅಷ್ಟಕ್ಕೂ ಖ್ಯಾತ ತಾರಾ ಜೋಡಿಗೆ ವಾಟ್ಸಾಪ್ ಗುಂಪೊಂದರಿಂದ ನಿರ್ಬಂಧವೇಕೆ?
ಆ ವಾಟ್ಸಾಪ್ ಗುಂಪು ಯಾವುದು ಎಂಬುದನ್ನೂ ಕರಣ್ ಬಹಿರಂಗಪಡಿಸಿದ್ದಾರೆ. ‘ಎ ಲಿಸ್ಟ್’ ಎಂಬ ಗುಂಪು ಅದಾಗಿದ್ದು, ಇಂಗ್ಲೀಷ್ ವರ್ಣಮಾಲೆಯ ಎ ಅಕ್ಷರ ಹೊಂದಿರುವ, ಚಿತ್ರರಂಗಕ್ಕೆ ಸಂಬಂಧಪಟ್ಟ ಎಲ್ಲರೂ ಆ ಗುಂಪಿನಲ್ಲಿದ್ದಾರೆ. ಆಲಿಯಾ- ರಣಬೀರ್ ಜೋಡಿಯನ್ನು ತೆರೆಯ ಮೇಲೆ ತರುತ್ತಿರುವ ‘ಬ್ರಹ್ಮಾಸ್ತ್ರ’ ಚಿತ್ರ ನಿರ್ದೇಶಕ ಅಯಾನ್ ಮುಖರ್ಜಿ ಕೂಡ ಗುಂಪಿನಲ್ಲಿದ್ದಾರೆ. ಅಷ್ಟಕ್ಕೂ ಆ ಗುಂಪಿನ ವಿಶೇಷ ಏನು ಎಂದು ತಿಳಿಸಿದ ಕರಣ್, ಆ ಗ್ರೂಪ್ನಲ್ಲಿ ಹೊಸ ಟ್ರೇಲರ್ಗಳ ವಿಶ್ಲೇಷಣೆ ನಡೆಯುತ್ತದೆ ಎಂದಿದ್ದಾರೆ.
‘ಎ ಲಿಸ್ಟ್’ ಗುಂಪಿನಲ್ಲಿ ಯಾವಾಗಲೂ ಚಿತ್ರಗಳ ಕುರಿತ ಸಕ್ರಿಯ ಚರ್ಚೆಗಳು ನಡೆಯುವುದರಿಂದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅದಕ್ಕೆ ಸೇರಲು ಬಯಸಿದ್ದರು. ಆದರೆ ಇದಕ್ಕೆ ಸೇರಲು ನಿರ್ದೇಶಕ ಅಯಾನ್ ಮುಖರ್ಜಿಯವರೇ ವಿರೋಧ ವ್ಯಕ್ತಪಡಿಸಿದರಂತೆ.
ಇದಕ್ಕೆ ಕಾರಣ, ‘‘ಯಾವುದೇ ತಾರೆಯರು ಈ ಗುಂಪಿಗೆ ಬೇಡ. ಏಕೆಂದರೆ, ಅವರ ಚಿತ್ರದ ಬಗ್ಗೆಯೇ ನಮಗೆ ಭಿನ್ನಾಭಿಪ್ರಾಯಗಳಿರಬಹುದು. ನಮ್ಮ ವಿಮರ್ಶೆಗಳು ಉತ್ತಮವಾಗಿದ್ದರೂ ಕೂಡ ತಾರೆಯರು ಗುಂಪಿನಲ್ಲಿರುವುದು ಬೇಡ’’ ಎಂದು ಖಡಾಖಂಡಿತವಾಗಿ ನಿರ್ಧಾರ ತಿಳಿಸಿದರಂತೆ ಅಯಾನ್ ಮುಖರ್ಜಿ. ಹೀಗಾಗಿ ಕೊನೆಗೂ ಆಲಿಯಾ- ರಣಬೀರ್ಗೆ ಆ ವಾಟ್ಸಾಪ್ ಗುಂಪಿಗೆ ಪ್ರವೇಶ ಸಿಗಲಿಲ್ಲ ಎಂದಿದ್ದಾರೆ ಕರಣ್ ಜೋಹರ್. ಇದನ್ನು ಕೇಳಿದ ಅಭಿಮಾನಿಗಳು, ತಾರೆಯರ ನಡುವೆಯೂ ಹೀಗೆಲ್ಲಾ ಮಜವಾದ ಸಂಗತಿಗಳು ಇರುತ್ತವೆಯೇ ಎಂದು ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ: ರಣಬೀರ್-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
KGF Chapter 2: ‘ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿತು’; ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಂಜಯ್ ದತ್ ವಿಶೇಷ ಮಾತು