ಬಾಲಿವುಡ್ನ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮದುವೆ (Alia Bhatt Ranbir Kapoor Wedding) ಆಗುತ್ತಿರುವ ವಿಷಯ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ. ಮದುವೆ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಕೇವಲ ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಆದ್ರೆ ಈಗ ಒಂದೊಂದೇ ವಿಚಾರಗಳು ಬಹಿರಂಗ ಆಗುತ್ತಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ (Ranbir Kapoor Marriage) ಆಗುತ್ತಿರುವುದು ಖಚಿತಗೊಂಡಿದೆ. ಇಬ್ಬರ ಮನೆಯನ್ನೂ ಸಿಂಗರಿಸಲಾಗಿದೆ. ಅನೇಕ ಅತಿಥಿಗಳು ಆಗಮಿಸುತ್ತಿದ್ದಾರೆ. ಈ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಅವರು ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಆ ಮೂಲಕ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ಗೆ ಅವರು ಅಭಿನಂದನೆ ತಿಳಿಸಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಆಲಿಯಾ-ರಣಬೀರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಒಂದು ಹಾಡಿನಲ್ಲಿ ಅವರು ಮದುವೆ ಜೋಡಿಯಂತೆಯೇ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಹಂಚಿಕೊಂಡಿರುವ ಅಯಾನ್ ಮುಖರ್ಜಿ ಅವರು, ಈ ತಾರೆಗಳ ಹೊಸ ಬದುಕಿಗೆ ಶುಭ ಹಾರೈಸಿದ್ದಾರೆ. ಅದಕ್ಕೆ ದೀಪಿಕಾ ಪಡುಕೋಣೆ (Deepika Padukone) ಪ್ರತಿಕ್ರಿಯಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ನಡುವೆ ಒಂದು ಕಾಲದಲ್ಲಿ ಪ್ರೀತಿ ಚಿಗುರಿತ್ತು. ಇನ್ನೇನು ಅವರಿಬ್ಬರು ಮದುವೆ ಆಗಿಬಿಡುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್ ಆಯಿತು. ಆ ಬಳಿಕವೂ ಅವರು ಹಳೆಯದನ್ನೆಲ್ಲಾ ಮರೆತು ಸ್ನೇಹಿತರಾಗಿ ಮುಂದುವರಿದರು. ಬಳಿಕ ರಣವೀರ್ ಸಿಂಗ್ ಜತೆ ದೀಪಿಕಾ ಪಡುಕೋಣೆ ಮದುವೆ ನೆರವೇರಿತು. ನಂತರ ಮಾಜಿ ಪ್ರಿಯಕರನ ಜೊತೆ ದೀಪಿಕಾ ಹೆಚ್ಚು ಸಂಪರ್ಕ ಉಳಿಸಿಕೊಳ್ಳಲಿಲ್ಲ.
ಈಗ ಮಾಜಿ ಬಾಯ್ಫ್ರೆಂಡ್ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಸೈಲೆಂಟ್ ಆಗಿದ್ದಾರೆ. ರಣಬೀರ್-ಆಲಿಯಾ ವಿವಾಹಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಒಂದೇ ಒಂದು ಲೈಕ್ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು, ಅಯಾನ್ ಮುಖರ್ಜಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋವನ್ನು ದೀಪಿಕಾ ಪಡುಕೋಣೆ ಲೈಕ್ ಮಾಡಿದ್ದಾರೆ ಅಷ್ಟೇ. ಈ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.
ಮುಂಬೈನಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ನಡೆಯುತ್ತಿದೆ. ವಿವಾಹದ ಹಿನ್ನೆಲೆಯಲ್ಲಿ ಅವರಿಬ್ಬರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಡೀ ಬಂಗಲೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮನೆಯೊಳಗೆ ಎಂಟ್ರಿ ನೀಡುವ ಎಲ್ಲ ಸಿಬ್ಬಂದಿಯ ಮೊಬೈಲ್ ಕ್ಯಾಮೆರಾಗೆ ಪಿಂಕ್ ಸ್ಟಿಕರ್ ಅಂಟಿಸಲಾಗಿದೆ. ಆ ಮೂಲಕ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ಇಂದು (ಏ.14) ಅವರಿಬ್ಬರು ಹಸೆ ಮಣೆ ಏರಲಿದ್ದಾರೆ. ಮದುವೆ ಫೋಟೋಗಳನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಕೂಡ ಎರಡೂ ಕುಟುಂಬದವರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಆ ಸಮಾರಂಭಕ್ಕೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮುಂತಾದವರು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಆಲಿಯಾ ಭಟ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಆರ್ಆರ್ಆರ್’ ಚಿತ್ರದಲ್ಲಿ ನಟಿಸಿದ ಬಳಿಕ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಈ ಪರಿ ಡಿಮ್ಯಾಂಡ್ ಇರುವಾಗಲೇ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ವರ್ಷ ತೆರೆಕಂಡ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಆ ಚಿತ್ರ ಕೂಡ ಸೂಪರ್ ಹಿಟ್ ಆಗಿದೆ.
ಇದನ್ನೂ ಓದಿ:
ರಣಬೀರ್ ಕಪೂರ್ ಮದುವೆಗೆ ಬರ್ತಾರಾ ಮಾಜಿ ಗರ್ಲ್ಫ್ರೆಂಡ್ಸ್ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?
100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್ನಲ್ಲಿ ಆಲಿಯಾ ಭಟ್-ರಣಬೀರ್