ನಟಿ ಆಲಿಯಾ ಭಟ್ ಅವರು ಯಾವಾಗಲೂ ಗಟ್ಟಿ ಕಥಾಹಂದರದ ಸಿನಿಮಾಗಳನ್ನು ಮಾಡುತ್ತಾರೆ. ಈಗ ಅವರು ನಟಿಸಿರುವ ‘ಜಿಗ್ರಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ವರ್ಷ ‘ಸ್ತ್ರೀ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಅದೇ ರೀತಿ ‘ಜಿಗ್ರಾ’ ಚಿತ್ರ ಕೂಡ ಹಿಟ್ ಆಗಲಿದೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ. ಆಲಿಯಾ ಭಟ್ ಅವರ ಅಭಿಮಾನಿಗಳ ವಲಯದಲ್ಲಿ ‘ಜಿಗ್ರಾ’ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ.
‘ಜಿಗ್ರಾ’ ಸಿನಿಮಾಗೆ ವಾಸನ್ ಬಾಲ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥೆ ಏನು ಎಂಬ ಬಗ್ಗೆ ಟೀಸರ್ನಲ್ಲಿ ಸುಳಿವು ಬಿಟ್ಟುಕೊಡಲಾಗಿದೆ. ಪೊಲೀಸರ ವಶದಲ್ಲಿ ಇರುವ ತಮ್ಮನನ್ನು ಬಿಡಿಸಿಕೊಂಡು ಬರಲು ಕಷ್ಟಪಡುವ ಅಕ್ಕನ ಪಾತ್ರದಲ್ಲಿ ಆಲಿಯಾ ಭಟ್ ಅವರು ನಟಿಸಿದ್ದಾರೆ. ಅಕ್ಕ-ತಮ್ಮನ ನಡುವಿನ ಭಾಂದವ್ಯದ ಕಥೆ ಈ ಸಿನಿಮಾದಲ್ಲಿ ಇದೆ. ಆ ಕಾರಣಕ್ಕಾಗಿ ಆಲಿಯಾ ಭಟ್ ಪಾಲಿಗೆ ಇದು ವಿಶೇಷ ಸಿನಿಮಾ ಆಗಲಿದೆ. ವೇದಂಗ್ ರೈನಾ ಅವರು ಈ ಚಿತ್ರದಲ್ಲಿ ಆಲಿಯಾ ಭಟ್ ಸಹೋದರನ ಪಾತ್ರವನ್ನು ಮಾಡಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಜಿಗ್ರಾ’ ಸಿನಿಮಾದ ಟೀಸರ್ ನೋಡಿ ಫಿದಾ ಆಗಿದ್ದಾರೆ. ನಟಿ ಶ್ರದ್ಧಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಈ ಸಿನಿಮಾವನ್ನು ಥಿಯೇಟರ್ನಲ್ಲಿ ಅಣ್ಣ-ತಮ್ಮನ ಜೊತೆ ನೋಡಬೇಕು. ಆಲಿಯಾ ಭಟ್ ಎಂಥ ಅದ್ಭುತ ಹುಡುಗಿ. ಈ ಟ್ರೇಲರ್ ಅದ್ಭುತವಾಗಿದೆ’ ಎಂದು ಶ್ರದ್ಧಾ ಕಪೂರ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಪರಾಜಿಗಳಿಗೆ ಕ್ಯೂಟ್ ಆಗಿ ಪೋಸ್ ನೀಡುವುದು ಕಲಿತ ಆಲಿಯಾ ಭಟ್ ಮಗಳು ರಹಾ ಕಪೂರ್
2023ರಲ್ಲಿ ಆಲಿಯಾ ಭಟ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಲಕ ಯಶಸ್ಸು ಕಂಡಿದ್ದರು. ಆ ಸಿನಿಮಾದ ಬಳಿಕ ಅವರು ಸಣ್ಣ ಬ್ರೇಕ್ ತೆಗೆದುಕೊಂಡರು. 2024ರಲ್ಲಿ ಬಿಡುಗಡೆ ಆಗುತ್ತಿರುವ ಆಲಿಯಾ ಭಟ್ ಅವರ ಮೊದಲ ಸಿನಿಮಾ ‘ಜಿಗ್ರಾ’. ಈ ಸಿನಿಮಾ ಅಕ್ಟೋಬರ್ 11ರಂದು ತೆರೆಕಾಣಲಿದೆ. ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾಗೆ ಆಲಿಯಾ ಭಟ್ ಅವರು ಸಹ-ನಿರ್ಮಾಪಕಿ ಕೂಡ ಹೌದು. ಕರಣ್ ಜೋಹರ್ ಅವರು ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.