Alia Bhatt: ರಿಲೀಸ್​ಗೂ ಮುನ್ನವೇ ‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಆಕ್ರೋಶದ ಸುರಿಮಳೆ; ಕಾರಣ ಒಂದೆರಡಲ್ಲ!

| Updated By: shivaprasad.hs

Updated on: Feb 08, 2022 | 7:01 PM

Gangubai Kathiawadi: ಆಲಿಯಾ ಭಟ್ ನಟನೆಯ, ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ತೆರೆಕಂಡಿತ್ತು. ಆದರೆ ಇದೀಗ ಹಲವು ಕಾರಣಗಳಿಂದ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

Alia Bhatt: ರಿಲೀಸ್​ಗೂ ಮುನ್ನವೇ ‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಆಕ್ರೋಶದ ಸುರಿಮಳೆ; ಕಾರಣ ಒಂದೆರಡಲ್ಲ!
‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್
Follow us on

ಸಂಜಯ್ ಲೀಲಾ ಭನ್ಸಾಲಿ (Sanjay Leela Bhansali) ಚಿತ್ರಗಳು ತೆರೆಯ ಮೇಲೆ ಒಳ್ಳೆಯ ಕಮಾಯಿ ಮಾಡುತ್ತವೆ. ವಿಮರ್ಶಕರಿಂದ, ಜನರಿಂದ ಉತ್ತಮ ಪ್ರತಿಕ್ರಿಯೆಗಳನ್ನೂ ಪಡೆಯುತ್ತವೆ. ಇದೇ ವೇಳೆ ಹಲವು ಕಾರಣಗಳಿಗೆ ವಿವಾದಗಳನ್ನೂ ಸೃಷ್ಟಿಸುತ್ತವೆ. ಇದು ಅವರ ಹಿಂದಿನ ಚಿತ್ರಗಳಲ್ಲೂ ಸಾಬೀತಾಗಿದೆ. ದೀಪಿಕಾ ಪಡುಕೋಣೆ ಅಭಿನಯಿಸಿದ್ದ ‘ಪದ್ಮಾವತ್’ ಕೂಡ ಶೀರ್ಷಿಕೆ ಸೇರಿದಂತೆ ಹಲವು ಕಾರಣಗಳಿಗೆ ವಿವಾದ ಹುಟ್ಟುಹಾಕಿತ್ತು. ಈ ಪರಂಪರೆ ಅವರ ಹೊಸ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ಯಲ್ಲೂ (Gangubai Kathiawadi) ಮುಂದುವರೆದಂತೆ ಕಾಣುತ್ತದೆ. ಇತ್ತೀಚೆಗಷ್ಟೇ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿತ್ತು. ಆಲಿಯಾ ಭಟ್ (Alia Bhatt) ತಮ್ಮ ನಟನೆಯ ಮೂಲಕ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಚಿತ್ರದ ಸಂಭಾಷಣೆ ಹಾಗೂ ಕೆಲವೊಂದು ದೃಶ್ಯಗಳು ವೀಕ್ಷಕರಿಗೆ ಹಿತ ಎನ್ನಿಸಿಲ್ಲ. ಹಲವು ನೆಟ್ಟಿಗರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಜಯ್ ಲೀಲಾ ಭನ್ಸಾಲಿಯವರನ್ನು ಪ್ರಶ್ನಿಸಿದ್ದರೆ, ಮತ್ತಷ್ಟು ಜನರು ಚಿತ್ರದ ಕೆಲವು ಜನಾಂಗೀಯ ನಿಂದನಾ ಸಂಭಾಷಣೆಗಳನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಮಾಹಿತಿ ಇಲ್ಲಿದೆ.

ಚಿತ್ರದಲ್ಲಿ ಜನಾಂಗೀಯಾ ನಿಂದನೆ ಮಾಡಿದ್ರಾ ಭನ್ಸಾಲಿ?

ಟ್ರೈಲರ್​​ನಲ್ಲಿ ನಾಯಕ ನಟಿ ಆಲಿಯಾ ಭಟ್ ಹಲ್ಲು ಕೀಳಿಸುತ್ತಿರುವ ದೃಶ್ಯವೊಂದಿದೆ. ಅದರಲ್ಲಿ ಈಶಾನ್ಯ ಭಾರತದ ಪಾತ್ರವನ್ನು ದಂತ ವೈದ್ಯರ ರೂಪದಲ್ಲಿ ತೋರಿಸಲಾಗಿದೆ. ಅವರು ಆಲಿಯಾಗೆ ಮತ್ತಷ್ಟು ಬಾಯಿ ಅಗಲಿಸಲು ಹೇಳುತ್ತಾರೆ. ಆಗ ಪ್ರತಿಕ್ರಿಯಿಸುವ ಆಲಿಯಾ, ‘ಬಾಯಿಯನ್ನು ಇನ್ನೆಷ್ಟು ಅಗಲಿಸಬೇಕು? ಸಂಪೂರ್ಣ ಚೀನಾವನ್ನು ನನ್ನ ಬಾಯಿಯಲ್ಲಿ ಹಾಕುತ್ತೀರೋ ಹೇಗೆ?’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಈಶಾನ್ಯ ಭಾರತದ ವ್ಯಕ್ತಿಯನ್ನು ಚೀನಾದವರೆಂದು ಭಾರತದ ವಿವಿಧ ಪ್ರದೇಶಗಳಲ್ಲಿ ಹೀಯಾಳಿಸುತ್ತಾರೆ/ ನಿಂದಿಸುತ್ತಾರೆ ಎಂಬ ಆರೋಪ ಮೊದಲಿನಿಂದ ಇದೆ.

ಇದೀಗ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲೂ ಉದ್ದೇಶಪೂರ್ವಕವಾಗಿ ಈ ದೃಶ್ಯ ಇಡಲಾಗಿದೆ ಎಂಬುದು ದೃಶ್ಯವನ್ನು ವಿರೋಧಿಸುತ್ತಿರುವವರ ಅಭಿಪ್ರಾಯ. ಅಲ್ಲದೇ, ಭಾರತ ಇಷ್ಟೆಲ್ಲಾ ಮುಂದುವರೆದಾಗ ಮತ್ತೆ ಹಳೆಯ ಬಾಲಿವುಡ್ ಚಾಳಿಯನ್ನೇ ಮುಂದುವರೆಸುತ್ತೀರಲ್ಲಾ ಎಂದೂ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈಶಾನ್ಯ ಭಾರತದವರೆಂಬ ತಾತ್ಸಾರ ಏಕೆ ಎಂಬುದು ಮತ್ತಷ್ಟು ಜನರ ಪ್ರಶ್ನೆ. ಇವುಗಳನ್ನು ಮುಂದಿಟ್ಟುಕೊಂಡು ಭನ್ಸಾಲಿಯವರನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಟ್ವೀಟ್​ಗಳು ಇಲ್ಲಿವೆ.

ತೃತೀಯ ಲಿಂಗಿ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಬೇಕಿತ್ತು; ನೆಟ್ಟಿಗರ ಅಭಿಪ್ರಾಯ

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಖ್ಯಾತ ನಟ ವಿಜಯ್ ರಾಜ್ ರಜಿಯಾ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೂಬಾಯಿ ವಿರೋಧಿಯ ಪಾತ್ರ ಅದಾಗಿದ್ದು, ವಿಜಯ್ ರಾಜ್ ತೃತೀಯ ಲಿಂಗಿ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಾಲಘಟ್ಟದಲ್ಲೂ ಆ ಪಾತ್ರವನ್ನು ನಿರ್ವಹಿಸಲು ತೃತೀಯ ಲಿಂಗಿ ಸಮುದಾಯದವರು ಸಿಕ್ಕಿಲ್ಲವೇ? ಇನ್ನೂ ಎಷ್ಟೆಂದು ಸಾಮಾನ್ಯ ಕಲಾವಿದರನ್ನು ಆ ಪಾತ್ರಗಳಿಗೆ ನೇಮಿಸುತ್ತೀರಿ? ಎಂದು ಆ ಸಮುದಾಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಸಿನಿಮಾಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶವಿರುವುದು ಅವರದ್ದೇ ಪಾತ್ರಗಳಲ್ಲಿ ಮಾತ್ರ. ಅದನ್ನೂ ಸಾಮಾನ್ಯ ಜನರು ಏಕೆ ಕಿತ್ತುಕೊಳ್ಳುತ್ತೀರಿ ಎಂದು ಕೆಲವರು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.

ಮುಖ್ಯ ವಾಹಿನಿಯಲ್ಲಿ ಇಂತಹ ಅವಕಾಶಗಳನ್ನು ನೀಡಬೇಕು. ವಿಜಯ್ ರಾಜ್ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ತೃತೀಯ ಲಿಂಗಿಗಳಿಗೆ ಅವರದ್ದೇ ಪಾತ್ರವನ್ನು ನಿರ್ವಹಿಸಲು ಬಾಲಿವುಡ್ ಎಂದಿನಿಂದ ಅವಕಾಶ ಕೊಡುತ್ತದೆ? ಈ ಕುರಿತು ಅರಿವು ಬರುವುದು ಯಾವಾಗ? ಎಂದು ಹಲವರು ಬಾಲಿವುಡ್ ಚಿತ್ರರಂಗದ ನಡೆಯನ್ನು, ಭನ್ಸಾಲಿಯವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಈ ಮೂಲಕ ತೃತೀಯ ಲಿಂಗಿಗಳ ಪಾತ್ರದಲ್ಲಿ ಅವರನ್ನೇ ಮೊದಲ ಆಯ್ಕೆಯಾಗಿ ಪರಿಗಣಿಸಬೇಕು ಎಂಬ ಕೂಗು ಮತ್ತಷ್ಟು ಬಲವಾಗಿದೆ. ಈ ಕುರಿತ ಟ್ವೀಟ್​ಗಳು ಇಲ್ಲಿವೆ.

‘ಗಂಗೂಬಾಯಿ ಕಾಠಿಯಾವಾಡಿ’ ಶೀರ್ಷಿಕೆಗೆ ಕನ್ನಡ ಜಾಗೃತಿ ವೇದಿಕೆ ವಿರೋಧ:

ಕರ್ನಾಟಕದ ಹಿರಿಯ ಗಾಯಕಿ ಗಂಗೂಬಾಯಿ ಹಾನ​ಗಲ್​ ಕನ್ನಡದ ಕೀರ್ತಿ. ಸಂಗೀತ ಕ್ಷೇತ್ರದಲ್ಲಿ ಅವರದ್ದು ದೊಡ್ಡ ಹೆಸರು. ಈಗ ಚಿತ್ರದ ಟೈಟಲ್​ ಬಗ್ಗೆ ವಿವಾದ ಆಗುವುದಕ್ಕೂ ಕಾರಣವಾಗಿದ್ದು, ಗಂಗೂಬಾಯಿ ಹೆಸರು. ‘ಸಿನಿಮಾ ಟೈಟಲ್‌ನಿಂದ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನ ಆಗಿದೆ. ಗಂಗೂಬಾಯಿ‌ ಹಾನ್​​ಗಲ್ ಕನ್ನಡದ ಕೀರ್ತಿ. ಸಿನಿಮಾ‌ ಹೆಸರು ಬದಲಿಸಬೇಕು’ ಎಂದು ಕನ್ನಡ ಜಾಗೃತಿ ವೇದಿಕೆ ಆಗ್ರಹಿಸಿದೆ.

ಒಟ್ಟಿನಲ್ಲಿ ಆಲಿಯಾ ಭಟ್ ನಟನೆಯ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಟ್ರೈಲರ್ ಬಿಡುಗಡೆ ನಂತರದಲ್ಲಿ ಈ ಎಲ್ಲಾ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಇದರ ನಡುವೆ ಫೆಬ್ರವರಿ 25ರಂದು ಚಿತ್ರ ತೆರೆಗೆ ಬರುತ್ತಿದೆ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ:

ವಿವಾದದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ; ಕನ್ನಡದ ಖ್ಯಾತ ಗಾಯಕಿಗೆ ಅಪಮಾನ ಆರೋಪ

Gangubai Kathiawadi Trailer: ಕಾಮಾಟಿಪುರದ ಗಂಗೂಬಾಯಿಗೆ ಭರ್ಜರಿ ಗತ್ತು; ನಟನೆಯಲ್ಲಿ ಆಲಿಯಾ ಭಟ್​ಗೆ ಫುಲ್​ ಮಾರ್ಕ್ಸ್​