Akshay Kumar: ಅಕ್ಷಯ್ ಕುಮಾರ್ ನನ್ನ ಹೀರೋ; ನಂಬಿಕೆ ದ್ರೋಹ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ಕಪಿಲ್ ಶರ್ಮಾ

Kapil Sharma: ಕಪಿಲ್ ಶರ್ಮಾ ಹಾಗೂ ಅವರ ತಂಡದಿಂದ ಆದ ನಂಬಿಕೆ ದ್ರೋಹ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಬೇಸರ ತರಿಸಿತ್ತು. ಆದ್ದರಿಂದ ಅವರು ‘ಬಚ್ಚನ್ ಪಾಂಡೆ’ ಚಿತ್ರದ ಪ್ರಚಾರವನ್ನು ಕಪಿಲ್ ಶರ್ಮಾ ಶೋನಲ್ಲಿ ನಡೆಸುವುದಿಲ್ಲ ಎಂದು ವರದಿಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಕಪಿಲ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.​

Akshay Kumar: ಅಕ್ಷಯ್ ಕುಮಾರ್ ನನ್ನ ಹೀರೋ; ನಂಬಿಕೆ ದ್ರೋಹ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ಕಪಿಲ್ ಶರ್ಮಾ
‘ಕಪಿಲ್ ಶರ್ಮಾ ಶೋ’ನಲ್ಲಿ ಕಪಿಲ್ ಶರ್ಮಾ, ಅಕ್ಷಯ್ ಕುಮಾರ್ (ಸಂಗ್ರಹ ಚಿತ್ರ)
Follow us
| Updated By: shivaprasad.hs

Updated on: Feb 09, 2022 | 2:59 PM

ಬಾಲಿವುಡ್ ಚಿತ್ರ ತಾರೆಯರು ತಮ್ಮ ಚಿತ್ರದ ಪ್ರಚಾರಕ್ಕೆ ‘ಕಪಿಲ್ ಶರ್ಮಾ ಶೋ’ಗೆ (Kapil Sharma Show) ವಿಶೇಷ ಪ್ರಾಧಾನ್ಯ ನೀಡುತ್ತಾರೆ. ಕಪಿಲ್ ಶರ್ಮಾ (Kapil Sharma) ನಡೆಸಿಕೊಡುವ ಈ ಜನಪ್ರಿಯ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗವಿದೆ. ಹಾಸ್ಯದ ಮೂಲಕ ಚಿತ್ರದ ಕುರಿತು, ಚಿತ್ರ ತಂಡದ ಕುತೂಹಲಕರ ವಿಚಾರಗಳ ಕುರಿತು ಶೋನಲ್ಲಿ ಪ್ರಸ್ತಾಪವಾಗುತ್ತದೆ. ಇವುಗಳು ಸಖತ್ ಸುದ್ದಿ ಆಗುತ್ತವೆ. ಪ್ರಸ್ತುತ ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಬಚ್ಚನ್ ಪಾಂಡೆ’ ಮಾರ್ಚ್ 18ರಂದು ತೆರೆ ಕಾಣಲಿದೆ. ಆದರೆ ಈ ಚಿತ್ರದ ಪ್ರಚಾರಕ್ಕೆ ‘ಕಪಿಲ್ ಶರ್ಮಾ ಶೋ’ಗೆ ಅವರು ಆಗಮಿಸುವುದಿಲ್ಲ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಪಿಲ್ ಶರ್ಮಾ ಹಾಗೂ ಅವರ ತಂಡದ ಕಡೆಯಿಂದ ಆಗಿರುವ ನಂಬಿಕೆ ದ್ರೋಹವೇ ಕಾರಣ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಇದೀಗ ಕಪಿಲ್ ಶರ್ಮಾ ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ಕಪಿಲ್ ಶರ್ಮಾ ಹೇಳಿದ್ದೇನು?

ಕಪಿಲ್ ಶರ್ಮಾ ತಮ್ಮ ಹೇಳಿಕೆಯಲ್ಲಿ ವರದಿಗಳನ್ನು ನಿರಾಕರಿಸಿಲ್ಲ. ಬದಲಾಗಿ ಅಕ್ಷಯ್ ಕುಮಾರ್ ಮತ್ತು ನಮ್ಮ ನಡುವೆ ಸಂವಹನದಲ್ಲಿ ವ್ಯತ್ಯಾಸವಾಗಿತ್ತು. ಅದನ್ನೀಗ ಸರಿಪಡಿಸಿದ್ದೇನೆ ಎಂದು ಹೇಳಿದ್ದಾರೆ. ಕಪಿಲ್ ಶರ್ಮಾ ತಮ್ಮ ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಿದ್ದು ಹೀಗೆ. ‘ಸ್ನೇಹಿತರೆ, ಮಾಧ್ಯಮಗಳಲ್ಲಿ ನನ್ನ ಹಾಗೂ ಅಕ್ಷಯ್ ಕುಮಾರ್ ಅವರ ಕುರಿತ ವರದಿಗಳನ್ನು ಓದಿದೆ. ಇದನ್ನು ಪಾಜಿ (ಅಕ್ಷಯ್) ಅವರೊಂದಿಗೆ ಚರ್ಚಿಸಿ, ಬಗೆಹರಿಸಿದ್ದೇನೆ. ಒಂದು ಸಣ್ಣ ಮಿಸ್​ಕಮ್ಯುನಿಕೇಶನ್ (ಸಂವಹನ ಕೊರತೆ) ಇಂದ ಹೀಗಾಗಿತ್ತು. ಎಲ್ಲವೂ ಸರಿಯಾಗಿದ್ದು, ಸದ್ಯದಲ್ಲೇ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಎಪಿಸೋಡ್​ನ ಚಿತ್ರೀಕರಣಕ್ಕೆ ಕಪಿಲ್ ಶರ್ಮಾ ಶೋಗೆ ಆಗಮಿಸುತ್ತಾರೆ. ಅವರು (ಅಕ್ಷಯ್) ನಮ್ಮ ಹಿರಿಯ ಸಹೋದರ, ಅವರೆಂದೂ ನನ್ನ ಮೇಲೆ ಕೋಪಿಸಿಕೊಂಡಿಲ್ಲ’ ಎಂದು ಕಪಿಲ್ ಶರ್ಮಾ ವಿಸ್ತಾರವಾಗಿ ಬರೆದಿದ್ದಾರೆ.

ಕಪಿಲ್ ಟ್ವೀಟ್ ಇಲ್ಲಿದೆ:

ಅಕ್ಷಯ್​ಗೆ ನಂಬಿಕೆ ದ್ರೋಹ ಬಗೆದರಾ ಕಪಿಲ್? ಏನಿದು ಪ್ರಕರಣ?

ಪ್ರಸ್ತುತ ಬಚ್ಚನ್ ಪಾಂಡೆ ಚಿತ್ರದ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಕಪಿಲ್ ಶರ್ಮಾ ಶೋಗೆ ಅವರು ಬರುವುದಿಲ್ಲ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಾರಣ, ಲೀಕ್ ಆಗಿದ್ದ ಒಂದು ವಿಡಿಯೋ. ಹೌದು. ಈ ಹಿಂದಿನ ಶೋನಲ್ಲಿ ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಆಗ ಅಕ್ಷಯ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಿದ್ದ ವಿಚಾರ ಪ್ರಸ್ತಾಪ ಆಗಿತ್ತು. ಆಗ ಕಪಿಲ್ ಶರ್ಮಾ  ‘ನೀವು ಓರ್ವ ದೊಡ್ಡ ರಾಜಕಾರಣಿಯನ್ನು ಸಂದರ್ಶನ ಮಾಡಿದ್ದಿರಿ. ಈ ಸಂದರ್ಶನದಲ್ಲಿ ಮಾವಿನ ಹಣ್ಣಿನ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದಿರಿ’ ಎಂದು ನಗುತ್ತಲೇ ಅಕ್ಷಯ್ ಕಾಲೆಳೆದಿದ್ದರು. ಅಕ್ಷಯ್​ ಕುಮಾರ್ ‘ಧೈರ್ಯ ಇದ್ದರೆ ಅವರ ಹೆಸರನ್ನು ಹೇಳಿ’ ಎಂದು ಸವಾಲು ಹಾಕಿದ್ದರು. ಅವರ ಮಾತುಕತೆ ಹಾಸ್ಯ ರೀತಿಯಲ್ಲಿ ನಡೆದಿತ್ತು.

ಆದರೆ ಅಕ್ಷಯ್​ಗೆ ಈ ವಿಚಾರ ಪ್ರಸಾರವಾಗುವುದು ಇಷ್ಟವಿರಲಿಲ್ಲ. ಆದ್ದರಿಂದ ಕಪಿಲ್ ಶರ್ಮಾ ಹಾಗೂ ವಾಹಿನಿಯವರಲ್ಲಿ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿಚಾರವನ್ನು ಪ್ರಸ್ತಾಪಿಸುವುದು ಬೇಡ ಎಂದು ಪ್ರಸಾರ ಮಾಡದಂತೆ ಕೋರಿದ್ದರು. ಇದಕ್ಕೆ ವಾಹಿನಿ ಹಾಗೂ ಕಪಿಲ್ ಶರ್ಮಾ ಒಪ್ಪಿದ್ದರು. ಆದರೆ ನಂತರದಲ್ಲಿ ಈ ವಿಡಿಯೋ ಲೀಕ್ ಆಗಿತ್ತು. ಇದು ಅಕ್ಷಯ್​ಗೆ ಸುತರಾಂ ಇಷ್ಟವಾಗಿರಲಿಲ್ಲ.

ಈ ಪ್ರಕರಣವನ್ನು ಅಕ್ಷಯ್ ನಂಬಿಕೆ ದ್ರೋಹ ಎಂದು ಪರಿಗಣಿಸಿದ್ದರು. ಅಲ್ಲದೇ ಈ ಘಟನೆಯ ಕುರಿತು ಕಪಿಲ್ ಶರ್ಮಾ ಕಡೆಯಿಂದ ಸ್ಪಷ್ಟನೆ ಬರುವವರೆಗೆ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ತೀರ್ಮಾನವನ್ನು ಅವರು ಮಾಡಿದ್ದರು. ಇದೀಗ ಕಪಿಲ್ ಶರ್ಮಾ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಆಗಿರುವ ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಕಪಿಲ್ ಶರ್ಮಾ ಹೇಳಿಕೆಯನ್ನು ಹಲವು ವರದಿಗಳು ಅರ್ಥೈಸಿವೆ. ಒಟ್ಟಿನಲ್ಲಿ ಕಪಿಲ್ ಹೇಳಿಕೆಯಂತೆ ಅಕ್ಷಯ್ ಶೋನಲ್ಲಿ ಸದ್ಯದಲ್ಲೇ ಭಾಗಿಯಾಗಲಿದ್ದಾರೆ.

‘ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್ ಸಮ್ಜಿ ನಿರ್ದೇಶಿಸಿದ್ದು, ಅಕ್ಷಯ್ ಕುಮಾರ್ ಜತೆಗೆ ಜಾಕ್ವೆಲಿನ್ ಫರ್ನಾಂಡಿಸ್, ಕೃತಿ ಸನೋನ್, ಅರ್ಷದ್ ವರ್ಸಿ, ಪಂಕಜ್ ತ್ರಿಪಾಠಿ ಮೊದಲಾದವರು ಬಣ್ಣಹಚ್ಚಿದ್ದಾರೆ. ಮಾರ್ಚ್ 18ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ:

ಅಕ್ಕಿಗೆ ಕಪಿಲ್​ ಶರ್ಮಾ ನಂಬಿಕೆ ದ್ರೋಹ​; ‘ದಿ ಕಪಿಲ್​ ಶರ್ಮಾ ಶೋ’ ಬೈಕಾಟ್​ ಮಾಡಿದ ಅಕ್ಷಯ್​ ಕುಮಾರ್

Salman Khan: ಸೂಪರ್ ಸ್ಟಾರ್ ಆದರೂ ಅಮ್ಮನ ಮಡಿಲಲ್ಲಿ ಇನ್ನೂ ಪುಟ್ಟ ಮಗು; ಸಲ್ಮಾನ್ ಖಾನ್ ಫೋಟೋ ವೈರಲ್