ಆಲಿಯಾ ಭಟ್ (Alia Bhatt) ಬಾಲಿವುಡ್ನ ಟಾಪ್ ನಟಿ. ದೀಪಿಕಾ ಪಡುಕೋಣೆಯನ್ನೂ ಮೀರಿಸಿ ಮುಂದೆ ಸಾಗಿಬಿಟ್ಟಿದ್ದಾರೆ ಆಲಿಯಾ ಭಟ್. ಕಳೆದ ಕೆಲವು ವರ್ಷಗಳಲ್ಲಿ ಒಂದರ ಹಿಂದೊಂದು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಆಲಿಯಾ ಕೊಟ್ಟಿದ್ದಾರೆ. ಜೊತೆಗೆ ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಮೊದಲಿಗೆ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಆಲಿಯಾ ನಟಿಸಿದ್ದ ‘ಆರ್ಆರ್ಆರ್’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ ಬಿಡುಗಡೆ ಆದ ‘ಬ್ರಹ್ಮಾಸ್ತ್ರ’ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಯ್ತು. ಇದೆಲ್ಲದರ ನಡುವೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು.
ಇಷ್ಟು ಮಾತ್ರವೇ ಅಲ್ಲದೆ, ಹಾಲಿವುಡ್ ಸಿನಿಮಾದಲ್ಲಿಯೂ ಆಲಿಯಾ ಭಟ್ ನಟಿಸಿ ಬಂದರು. ಇದೀಗ ಆಲಿಯಾ ಭಟ್ ಮತ್ತೊಮ್ಮೆ ದಕ್ಷಿಣ ಭಾರತದ ನಟನಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ‘ಆರ್ಆರ್ಆರ್’ ಸಿನಿಮಾನಲ್ಲಿ ಜೂ ಎನ್ಟಿಆರ್-ರಾಮ್ ಚರಣ್ ಜೊತೆಗೆ ನಟಿಸಿರುವ ಆಲಿಯಾ ಭಟ್, ಇದೀಗ ಮತ್ತೊಮ್ಮೆ ತೆಲುಗಿನ ಸ್ಟಾರ್ ನಟನಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ತೆಲುಗು ಸಿನಿಮಾದಲ್ಲಿ ಅಲ್ಲ ಬದಲಿಗೆ ಹಿಂದಿ ಸಿನಿಮಾದಲ್ಲಿ.
ಜೂ ಎನ್ಟಿಆರ್, ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡುತ್ತಿರುವುದು ಗೊತ್ತಿರುವ ಸಂಗತಿಯೇ. ಕೆಲವು ಮೂಲಗಳ ಪ್ರಕಾರ ‘ವಾರ್ 2’ ಸಿನಿಮಾನಲ್ಲಿ ಜೂ ಎನ್ಟಿಆರ್ಗೆ ಜೊತೆಯಾಗಿ ಆಲಿಯಾ ಭಟ್ ನಾಯಕಿಯಾಗಿ ನಟಿಸಲಿದ್ದಾರಂತೆ. ಹೀಗೊಂದು ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಓಡಾಡುತ್ತಿದೆ.
ಇದನ್ನೂ ಓದಿ:ಸ್ಪೈ ಯೂನಿವರ್ಸ್ನಲ್ಲಿ ನಟಿಸ್ತಾರೆ ಆಲಿಯಾ ಭಟ್; ಮಾಹಿತಿ ಬಿಟ್ಟಿಕೊಟ್ಟ ಯಶ್ ರಾಜ್ ಫಿಲ್ಮ್ಸ್
‘ಆರ್ಆರ್ಆರ್’ ಸಿನಿಮಾನಲ್ಲಿ ರಾಮ್ ಚರಣ್ರ ಪ್ರೇಯಸಿಯಾಗಿ ಆಲಿಯಾ ಭಟ್ ನಟಿಸಿದ್ದರು. ಜೂ ಎನ್ಟಿಆರ್ ಜೊತೆಗೆ ಕೇವಲ ಒಂದು ದೃಶ್ಯದಲ್ಲಿ ಮಾತ್ರವೇ ಆಲಿಯಾ ನಟಿಸಿದ್ದರು. ಅದಾದ ಬಳಿಕ ಸಿನಿಮಾ ಮುಗಿದ ಮೇಲೆ ಪ್ರಸಾರವಾಗುವ ಹಾಡಿನಲ್ಲಿ ಆಲಿಯಾ-ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ಒಟ್ಟಿಗೆ ಕುಣಿದಿದ್ದರು. ಈಗ ಆಲಿಯಾ ಹಾಗೂ ಜೂ ಎನ್ಟಿಆರ್ ಒಟ್ಟಿಗೆ ನಟನೆ ಮಾಡಲಿದ್ದಾರೆ. ಅದೂ ನಾಯಕ-ನಾಯಕಿಯಾಗಿ.
‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ಜೊತೆಗೆ ಜೂ ಎನ್ಟಿಆರ್ ನಟಿಸುತ್ತಿದ್ದಾರೆ. ಈ ಇಬ್ಬರೂ ರಾ ಏಜೆಂಟ್ಗಳ ಮಾತ್ರದಲ್ಲಿ ನಟಿಸುತ್ತಿದ್ದಾರೆ. ‘ವಾರ್ 2’ ಸಿನಿಮಾನಲ್ಲಿ ಜೂ ಎನ್ಟಿಆರ್ ದಕ್ಷಿಣ ಭಾರತದ ವ್ಯಕ್ತಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕಾಗಿ ಬರೋಬ್ಬರಿ 100 ದಿನಗಳನ್ನು ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ತೆಗೆದಿಟ್ಟಿದ್ದಾರಂತೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು, ಸಿನಿಮಾದ ಚಿತ್ರೀಕರಣ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ