
ಫ್ರಾನ್ಸ್ನ ರಿವೇರಿಯಾದಲ್ಲಿ ಕಾನ್ ಸಿನಿಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಫ್ಯಾಷನ್ ಹಬ್ಬಕ್ಕೆ ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಉತ್ಸವದ ಎರಡನೇ ದಿನದಂದು ಆಲಿಯಾ ಭಟ್ ಅವರು ಗೌನ್ ಧರಿಸಿ ಮಿಂಚಿದರು. ಆದರೆ, ಅವರು ರೆಡ್ ಕಾರ್ಪೆಟ್ ಮೇಲೆ ನಡೆದು ಬರುವಾಗ ಸಂಭವಿಸಿದ ಒಂದು ಘಟನೆ ಚರ್ಚೆಗೆ ಕಾರಣ ಆಗಿದೆ. ಆಲಿಯಾ ಭಟ್ ಅವರನ್ನು ಯಾರೂ ಗುರುತಿಸಲೂ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಲಿಯಾ ಭಟ್ ಅವರು ಕ್ಯಾಮೆರಾಗಳಿಗೆ ಕೈ ಬೀಸುತ್ತಾ, ಫ್ಲೈಯಿಂಗ್ ಕಿಸ್ ನೀಡುತ್ತಾ ಫೋಸ್ ನೀಡುತ್ತಿದ್ದಾರೆ. ಆದರೆ ವಿಡಿಯೋದ ಮತ್ತೊಂದು ಬದಿಯಲ್ಲಿರುವ ಛಾಯಾಗ್ರಾಹಕರು ಆಲಿಯಾ ಅವರ ಪಕ್ಕದಲ್ಲಿ ಬರುತ್ತಿರುವ ಇತರ ಅಂತಾರಾಷ್ಟ್ರೀಯ ತಾರೆಯರ ಫೋಟೋ ತೆಗೆಯುವುದರಲ್ಲಿ ಬ್ಯುಸಿ ಆಗಿರೋದು ವಿಡಿಯೋದಲ್ಲಿ ಕಂಡುಬಂದಿದೆ. ಇದನ್ನು ಕಂಡು ನೆಟ್ಟಿಗರು ‘ಆಲಿಯಾ ಯಾರಿಗೆ ಕೈ ಬೀಸುತ್ತಿದ್ದಾರೆ? ಅಲ್ಲಿ ಯಾರೂ ಅವರನ್ನು ಗುರುತಿಸುತ್ತಿಲ್ಲ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
‘ಕಾನ್ ಜಾಗತಿಕ ವೇದಿಕೆಯಾಗಿದ್ದು, ಇದು ಆಲಿಯಾ ಅವರ ಎರಡನೇ ಭೇಟಿ. ಆದರೂ ಅಲ್ಲಿನ ಛಾಯಾಗ್ರಾಹಕರಿಗೆ ಇವರು ಯಾರೆಂದೇ ತಿಳಿದಿಲ್ಲ. ಇದು ಭಾರತೀಯ ಸಿನಿಮಾ ರಂಗಕ್ಕೆ ಒಂದು ರೀತಿಯ ಮುಜುಗರ ತರುವ ವಿಷಯ’ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾನ್ ಫಿಲಂ ಫೆಸ್ಟ್ನಲ್ಲಿ ಮಿಂಚು ಹರಿಸಿದ ಆಲಿಯಾ ಭಟ್
ಮತ್ತೊಂದೆಡೆ ಆಲಿಯಾ ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ‘ರೆಡ್ ಕಾರ್ಪೆಟ್ ಎಂಬುದು ತುಂಬಾ ಗಜಿಬಿಜಿಯಿಂದ ಕೂಡಿರುತ್ತದೆ. ಒಂದು ಕಡೆಯ ಛಾಯಾಗ್ರಾಹಕರು ಬೇರೆ ಸೆಲೆಬ್ರಿಟಿಯನ್ನು ಕ್ಲಿಕ್ಕಿಸುತ್ತಿದ್ದರೆ, ಮತ್ತೊಂದು ಕಡೆಯವರು ಆಲಿಯಾ ಅವರ ಫೋಟೋವನ್ನು ಕ್ಲಿಕ್ಕಿಸುತ್ತಿದ್ದರು. ಇದನ್ನು ಯಾರೂ ಹೇಳುತ್ತಿಲ್ಲ’ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಕಾನ್ ಸಿನಿಮೋತ್ಸವ ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದು. 1946 ರಿಂದ ಪ್ರತಿವರ್ಷ ಫ್ರಾನ್ಸ್ನ ಕೇನ್ಸ್ನಲ್ಲಿ ಇದನ್ನು ಆಯೋಜಿಸಲಾಗುತ್ತದೆ. ಇಲ್ಲಿ ಕೇವಲ ಗ್ಲಾಮರ್ ಪ್ರದರ್ಶನ ಮಾತ್ರವಲ್ಲದೆ, ವಿಶ್ವದ ಅತ್ಯುತ್ತಮ ಸಿನಿಮಾಗಳ ಪ್ರದರ್ಶನ ನಡೆಯುತ್ತದೆ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸೇರಿದಂತೆ ಹಲವು ಭಾರತೀಯ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Thu, 14 May 26