ಆಮಿರ್ ಖಾನ್ ಜತೆ ‘ಗಜಿನಿ 2’ ಸಿನಿಮಾ ಮಾಡಲು ಮುಂದಾದ ಅಲ್ಲು ಅರ್ಜುನ್ ತಂದೆ

‘ಗಜಿನಿ’ ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳು ಕಳೆದಿವೆ. ಇಂದಿಗೂ ಕೂಡ ಆಮಿರ್ ಖಾನ್ ಅವರ ಅಭಿಮಾನಿಗಳ ಫೇವರಿಟ್ ಲಿಸ್ಟ್​ನಲ್ಲಿ ಈ ಸಿನಿಮಾ ಇದೆ. ಈ ಚಿತ್ರಕ್ಕೆ 2ನೇ ಪಾರ್ಟ್​ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಲ್ಲು ಅರವಿಂದ್ ಅವರು ‘ಗಜನಿ 2’ ಮಾಡುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಆಮಿರ್ ಖಾನ್ ಕೂಡ ಧ್ವನಿಗೂಡಿಸಿದ್ದಾರೆ.

ಆಮಿರ್ ಖಾನ್ ಜತೆ ‘ಗಜಿನಿ 2’ ಸಿನಿಮಾ ಮಾಡಲು ಮುಂದಾದ ಅಲ್ಲು ಅರ್ಜುನ್ ತಂದೆ
Allu Aravind, Aamir Khan

Updated on: Jan 31, 2025 | 11:03 PM

ಆಮಿರ್ ಖಾನ್ ನಟಿಸಿದ ‘ಗಜನಿ’ ಸಿನಿಮಾ 2008ರಲ್ಲಿ ತೆರೆಕಂಡಿತ್ತು. ಬಾಲಿವುಡ್​ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿ ಈ ಚಿತ್ರದ್ದು. ಎ.ಆರ್​. ಮುರುಗದಾಸ್ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂದು ಫ್ಯಾನ್ಸ್ ಕಾದಿದ್ದಾರೆ. ಅಂಥ ಅಭಿಮಾನಿಗಳಿಗೆ ಖುಷಿ ನೀಡುವಂತಹ ಸುದ್ದಿ ಇದು. ಈಗ ‘ಗಜಿನಿ 2’ ಸಿನಿಮಾದ ಬಗ್ಗೆ ಮಾತುಕಥೆ ಆರಂಭ ಆಗಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ‘ಗಜಿನಿ 2’ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ.

ಟಾಲಿವುಡ್​ನಲ್ಲಿ ‘ತಂಡೇಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಹಿಂದಿ ವರ್ಷನ್​ ಟ್ರೇಲರ್​ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲು ಅರವಿಂದ್ ಕೂಡ ವೇದಿಕೆಯಲ್ಲಿ ಇದ್ದರು. ಈ ವೇಳೆ ಅಲ್ಲು ಅರವಿಂದ್ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ಅಂದಿನ ನೂರು ಕೋಟಿ ರೂಪಾಯಿ ಇಂದಿನ 1000 ಕೋಟಿ ರೂಪಾಯಿಗೆ ಸಮ. ನಾನು ಆಮಿರ್ ಖಾನ್ ಜೊತೆ 1000 ಕೋಟಿ ರೂಪಾಯಿಯ ಸಿನಿಮಾ ಮಾಡಬೇಕು. ಅದು ಗಜನಿ 2 ಆಗಿರಬಹುದು’ ಎಂದು ಅಲ್ಲು ಅರವಿಂದ್ ಹೇಳಿದರು. ‘ಖಂಡಿತವಾಗಿಯೂ ಸರ್. ಜನರು ಈಗಾಗಲೇ ಇಂಟರ್​ನೆಟ್​ನಲ್ಲಿ ಗಜಿನಿ 2 ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ’ ಎಂದು ಆಮಿರ್​ ಖಾನ್ ಹೇಳಿದರು.

ಇದನ್ನೂ ಓದಿ: ಆಮಿರ್​, ಸಲ್ಮಾನ್, ಶಾರುಖ್ ಜೊತೆಯಾಗಿ ಸಿನಿಮಾ ಮಾಡೋದು ಖಚಿತ

ವೇದಿಕೆಯಲ್ಲೇ ಇವರಿಬ್ಬರು ‘ಗಜಿನಿ 2’ ಸಿನಿಮಾದ ಬಗ್ಗೆ ಮಾತನಾಡಿದ್ದರಿಂದ ಅಭಿಮಾನಿಗಳಿಗೆ ಖುಷಿ ಆಗಿದೆ. ಆಮಿರ್​ ಖಾನ್ ಅವರು ನಟಿಸಿದ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡುತ್ತಿಲ್ಲ. ಹಾಗಾಗಿ ಅವರಿಗೆ ಕೂಡ ಒಂದು ಬ್ರೇಕ್ ಬೇಕಿದೆ. ಒಂದು ಹಂತದಲ್ಲಿ ಅವರು ಸಿನಿಮಾ ರಂಗವನ್ನು ತೊರೆಯಲು ಕೂಡ ನಿರ್ಧಾರ ಮಾಡಿದ್ದರು. ಆದರೆ ಕುಟುಂಬದವರ ಜೊತೆ ಮಾತನಾಡಿದ ನಂತರ ತಮ್ಮ ನಿರ್ಧಾರ ಬದಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:03 pm, Fri, 31 January 25