ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ದಂಪತಿ ತಾರಾ ಜೋಡಿಗಳಲ್ಲೊಂದು. ಈ ವರ್ಷದ ಜನವರಿಯಲ್ಲಿ ಈ ಜೋಡಿ ಪುತ್ರಿ ವಮಿಕಾಳನ್ನು ಕುಟುಂಬಕ್ಕೆ ಸ್ವಾಗತಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅನುಷ್ಕಾ, ಪುತ್ರಿಗೆ ಜನ್ಮ ನೀಡುವ ಮೊದಲಿನ ತಮ್ಮ ಗೊಂದಲಗಳನ್ನು ಹೇಳಿಕೊಂಡಿದ್ದಾರೆ. ‘‘ಕೇವಲ ಒಂದು ವಾರದ ಹಿಂದೆ ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ಹೇಳಿಕೊಳ್ಳುತ್ತಿದ್ದೆ. ಮಹಿಳೆಯರಿಗೆ ಮದುವೆಯಾಗುವ ಮುನ್ನ, ತಾಯಿಯಾಗುವ ಮುನ್ನ ಮತ್ತು ತಾಯಿಯಾದ ನಂತರ ಹೀಗೆಯೇ ಕಾಣಬೇಕು ಎಂದು ಸಮಾಜದಿಂದ ಎಷ್ಟು ಒತ್ತಡಗಳಿರುತ್ತವೆ. ಮಗುವಿಗೆ ಜನ್ಮ ನೀಡಿದ ನಂತರ ನನ್ನ ದೇಹವನ್ನೇ ನಾನು ದೂಷಿಸಿಕೊಳ್ಳಬಹುದೇ ಎಂದು ತಾಯಿಯಾಗುವ ಮುನ್ನ ತಲೆಕೆಡಿಸಿಕೊಂಡಿದ್ದೆ’’ ಎಂದು ಅನುಷ್ಕಾ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘‘ನನ್ನ ದೇಹ ಮೊದಲು ಟೋನ್ಡ್ ಆಗಿದ್ದಂತೆ ಈಗ ಇಲ್ಲ. ಅದರ ಕುರಿತು ವರ್ಕ್ ಮಾಡುತ್ತಿದ್ದೇನೆ, ಕಾರಣ, ನಾನು ಫಿಟ್ ಆಗಿರಲು ಯೋಚಿಸಿದ್ದೇನೆ. ಮೊದಲು ನನ್ನ ದೇಹ ಹೇಗಿತ್ತೋ ಅದಕ್ಕಿಂತ ಈಗ ಹೆಚ್ಚು ಈಗ ಕಂಫರ್ಟ್ ಆಗಿದ್ದೇನೆ. ಕಾರಣ, ದೇಹ ಹೇಗೆ ಕಾಣುತ್ತದೆ ಎನ್ನುವುದಕ್ಕಿಂತ ನಮ್ಮ ಮನಸ್ಥಿತಿ ಬಹಳ ಮುಖ್ಯ’’ ಎಂದು ಅನುಷ್ಕಾ ಹೇಳಿದ್ದಾರೆ. ಪತಿ ವಿರಾಟ್ ಕೊಹ್ಲಿ ಜೊತೆ ಈ ಕುರಿತು ಮಾತನಾಡಿದ ಸಂದರ್ಭವನ್ನೂ ಅನುಷ್ಕಾ ವಿವರಿಸಿದ್ದಾರೆ. ಒಮ್ಮೆ ನನ್ನ ಹಳೆಯ ಚಿತ್ರಗಳನ್ನು ನೋಡುತ್ತಾ ನಾನು, ವಿರಾಟ್ ಕುಳಿತಿದ್ದೆವು. ಆಗ ನಾನು ‘‘ಈ ಹಿಂದೆ ಎಷ್ಟು ಚಂದವಿದ್ದೆ ಎಂದು ಹೇಳಿಕೊಂಡೆ. ಆಗ ವಿರಾಟ್, ನೀನು ಯಾವಾಗಲೂ ಹೀಗೆ ಮಾಡುತ್ತೀಯ. ನಿನ್ನ ಚಿತ್ರಗಳನ್ನು ನೀನೇ ನೋಡಿಕೊಂಡು ಚೆನ್ನಾಗಿದೆ ಎನ್ನುತ್ತಿ. ಆದರೆ ನಾನು ಅವುಗಳು ಅದ್ಭುತವಾಗಿದೆ ಎಂದರೆ, ಹೌದಾ, ಓಕೆ- ಎಂದು ಹೇಳುತ್ತಿ’’ ಎಂದಿದ್ದರು ಎಂದು ಅನುಷ್ಕಾ ನಕ್ಕಿದ್ದಾರೆ.
ಹಳೆಯ ಚಿತ್ರಗಳನ್ನು ನೋಡಿ ಮಹಿಳೆಯರು ಹೇಗೆ ಒತ್ತಡಕ್ಕೆ ಒಳಗಾಗುವುದು, ತಮ್ಮ ಸೌಂದರ್ಯದ ಕುರಿತು ಯೋಚಿಸುವುದು ಇವುಗಳನ್ನು ಅನುಷ್ಕಾ ಇನ್ನು ಮುಂದೆ ಮಾಡುವುದಿಲ್ಲವಂತೆ. ಇದಕ್ಕೆ ಕಾರಣವನ್ನೂ ವಿವರಿಸಿರುವ ಅವರು, ಎಲ್ಲಾ ಮಹಿಳೆಯರು ಅನುಭವಿಸುವ ಈ ಗೊಂದಲ ತಮ್ಮ ಮಗಳು ವಮಿಕಾಳಿಗೆ ಕಾಡಬಾರದು. ಆತ್ಮವಿಶ್ವಾಸದಿಂದ ಆಕೆ ಬೆಳೆಯಬೇಕು ಎಂದು ಹೇಳಿದ್ದಾರೆ. ಈ ಮೂಲಕ ತಾಯಿಯಾದ ನಂತರ ಸೌಂದರ್ಯದ ಕುರಿತು ಗೊಂದಲಗೊಳ್ಳುವ ಮಹಿಳೆಯರಿಗೆ ಕಿವಿಮಾತನ್ನೂ ಅನುಷ್ಕಾ ಹೇಳಿದ್ದಾರೆ.
ಚಿತ್ರಗಳ ವಿಷಯಕ್ಕೆ ಬಂದರೆ, ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಜೀರೋ’ ಚಿತ್ರದಲ್ಲಿ. ನಂತರ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಚಿತ್ರ ನಿರ್ಮಾಣದಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ:
Aryan Khan: ಆರ್ಯನ್ ಖಾನ್ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್ ಪುತ್ರ
Puneeth Rajkumar: ಪುನೀತ್- ಪ್ರೇಮ್ ಕಾಂಬಿನೇಷನ್ನಲ್ಲಿ ಐತಿಹಾಸಿಕ ಚಿತ್ರ ಮೂಡಿಬರಬೇಕಿತ್ತು, ಆದರೆ..
Published On - 9:59 am, Sat, 13 November 21