ಶಾರುಖ್​ ಖಾನ್​ ವಿಚಾರದಲ್ಲಿ ತಪ್ಪು ಮಾಡಿದ್ರಾ ಅನುಷ್ಕಾ ಶೆಟ್ಟಿ; ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

2017ರ ಬಳಿಕ ಅನುಷ್ಕಾ ಶೆಟ್ಟಿ ಅವರು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿಲ್ಲ. ‘ಬಾಹುಬಲಿ 2’ ನಂತರ ಅವರು ನಟಿಸಿದ ಬೇರೆ ಯಾವುದೇ ಚಿತ್ರ ಕೂಡ ಸದ್ದು ಮಾಡಿಲ್ಲ. ಹೀಗಿರುವಾಗ ಹೊಸ ಸಿನಿಮಾದ ರಿಲೀಸ್​ ದಿನಾಂಕ ಸೂಕ್ತವಾಗಿರಬೇಕು. ಆದರೆ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಚಿತ್ರತಂಡ ದೊಡ್ಡ ರಿಸ್ಕ್​ ತೆಗೆದುಕೊಳ್ಳಲು ರೆಡಿಯಾಗಿದೆ.

ಶಾರುಖ್​ ಖಾನ್​ ವಿಚಾರದಲ್ಲಿ ತಪ್ಪು ಮಾಡಿದ್ರಾ ಅನುಷ್ಕಾ ಶೆಟ್ಟಿ; ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ
ಅನುಷ್ಕಾ ಶೆಟ್ಟಿ, ಶಾರುಖ್​ ಖಾನ್​
Updated By: ರಾಜೇಶ್ ದುಗ್ಗುಮನೆ

Updated on: Aug 15, 2023 | 6:26 AM

ನಟ ಶಾರುಖ್​ ಖಾನ್​ ಅವರು ‘ಜವಾನ್​’ (Jawan Movie) ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಸೆಪ್ಟೆಂಬರ್​ 7ರಂದು ಅದ್ದೂರಿಯಾಗಿ ‘ಜವಾನ್​’ ರಿಲೀಸ್​ ಆಗಲಿದೆ. ಶಾರುಖ್​ ಖಾನ್ (Shah Rukh Khan)​ ಅವರು ಈಗ ಫಾರ್ಮ್​ನಲ್ಲಿ ಇದ್ದಾರೆ. ಹಾಗಾಗಿ ಅವರ ಸಿನಿಮಾದ ಎದುರಿನಲ್ಲಿ ಬೇರೆ ಸಿನಿಮಾಗಳು ತೆರೆಕಾಣಲು ಹೆದರುತ್ತವೆ. ಆದರೆ ‘ಜವಾನ್​’ ರಿಲೀಸ್​ ಆಗುವ ದಿನವೇ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ಹೊಸ ಸಿನಿಮಾ ಕೂಡ ಬಿಡುಗಡೆ ಆಗಲಿದೆ! ಆ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಉಂಟಾಗಲಿದೆ. ಹೌದು, ಅನುಷ್ಕಾ ಶೆಟ್ಟಿ ಮತ್ತು ನವೀನ್​ ಪೊಲಿಶೆಟ್ಟಿ ಅಭಿನಯದ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾ ಕೂಡ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗುವುದು ಖಚಿತವಾಗಿದೆ.

2017ರ ಬಳಿಕ ಅನುಷ್ಕಾ ಶೆಟ್ಟಿ ಅವರು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿಲ್ಲ. ‘ಬಾಹುಬಲಿ 2’ ಸಿನಿಮಾದ ನಂತರ ಅವರು ನಟಿಸಿದ ಬೇರೆ ಯಾವುದೇ ಚಿತ್ರ ಕೂಡ ಸದ್ದು ಮಾಡಿಲ್ಲ. ಅಲ್ಲದೇ ಸಿನಿಮಾಗಳ ಆಯ್ಕೆಯಲ್ಲೂ ಅವರು ಚ್ಯೂಸಿ ಆಗಿದ್ದಾರೆ. ಅವರನ್ನು ಅಭಿಮಾನಿಗಳು ದೊಡ್ಡ ಪರದೆ ಮೇಲೆ ನೋಡಲು ಕಾದಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಮತ್ತೆ ಗೆದ್ದು ಬೀಗಬೇಕು ಎಂಬುದು ಕೂಡ ಫ್ಯಾನ್ಸ್​ ಬಯಕೆ. ಹೀಗಿರುವಾಗ ಹೊಸ ಸಿನಿಮಾದ ರಿಲೀಸ್​ ದಿನಾಂಕ ಸೂಕ್ತವಾಗಿರಬೇಕು. ಆದರೆ ‘ಜವಾನ್​’ ರೀತಿಯ ದೈತ್ಯ ಸಿನಿಮಾದ ಎದುರು ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಇಂಥ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅನುಷ್ಕಾ ಶೆಟ್ಟಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿಗೆ ಟ್ವಿಟರ್​ನಲ್ಲಿ ಒಂದು ಮಿಲಿಯನ್​ ಪ್ರೀತಿ; ನಟಿಗೆ ಖುಷಿಯೋ ಖುಷಿ

ಭಾರಿ ಬಜೆಟ್​ನಲ್ಲಿ ‘ಜವಾನ್​’ ಸಿನಿಮಾ ಮೂಡಿಬಂದಿದೆ. ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅಟ್ಲಿ ಮತ್ತು ಶಾರುಖ್​ ಖಾನ್​ ಅವರ ಕಾಂಬಿನೇಷನ್​ ಇರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಈ ವರ್ಷ ಆರಂಭದಲ್ಲಿಯೇ ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾ ಮೂಲಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದರು. ಅದೇ ರೀತಿ ‘ಜವಾನ್​’ ಕೂಡ ಅಬ್ಬರಿಸಲಿದೆ ಎಂಬುದು ಬಹುತೇಕರ ಅಭಿಪ್ರಾಯ. ಇಂಥ ಸಿನಿಮಾದ ಎದುರಿನಲ್ಲಿ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾವನ್ನು ರಿಲೀಸ್​ ಮಾಡುವ ಅಗತ್ಯ ಇದೆಯೇ ಎಂಬುದು ಸದ್ಯದ ಪ್ರಶ್ನೆ. ‘ಯುವಿ ಕ್ರಿಯೇಷನ್ಸ್​’ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾಗೆ ಮಹೇಶ್​ ಬಾಬು ನಿರ್ದೇಶನ ಮಾಡಿದ್ದಾರೆ.

‘ಯುವಿ ಕ್ರಿಯೇಷನ್ಸ್​’  ಟ್ವೀಟ್​:

‘ಜವಾನ್​’ ಬಾಲಿವುಡ್​ ಸಿನಿಮಾ ಆಗಿದ್ದರೂ ಕೂಡ ದಕ್ಷಿಣ ಭಾರತದಲ್ಲಿ ಇದರ ಹವಾ ಜೋರಾಗಿ ಇರಲಿದೆ. ಯಾಕೆಂದರೆ, ಈ ಚಿತ್ರ ತೆಲುಗು ಮತ್ತು ತಮಿಳಿಗೂ ಡಬ್​ ಆಗಿ ತೆರೆ ಕಾಣುತ್ತಿದೆ. ನಯನತಾರಾ, ವಿಜಯ್​ ಸೇತುಪತಿ ಸೇರಿದಂತೆ ಸೌತ್​ ಇಂಡಿಯಾದ ಅನೇಕ ಸ್ಟಾರ್​ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ನಿರ್ದೇಶಕರು ಕೂಡ ದಕ್ಷಿಣ ಭಾರತದವರು. ಈ ಚಿತ್ರಕ್ಕೆ ತೆಲುಗಿನ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾ ಪೈಪೋಟಿ ನೀಡಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:47 pm, Mon, 14 August 23