‘ಸಿಖಂಧರ್’ ಸೋಲಿಗೆ ನಾನೊಬ್ಬನೆ ಕಾರಣ ಅಲ್ಲ: ಸಲ್ಲು ಸಿನಿಮಾ ನಿರ್ದೇಶಕನ ತಪ್ಪೊಪ್ಪಿಗೆ
Sikandar movie: ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು, ಸಿನಿಮಾ ಫ್ಲಾಪ್ ಆಗಿತ್ತು. ಸಿನಿಮಾ ಸೋತಿದ್ದಕ್ಕೆ ನಿರ್ದೇಶಕ ಎಆರ್ ಮುರುಗದಾಸ್ ಕಾರಣ ಎನ್ನಲಾಗಿತ್ತು. ಇದೀಗ ನಿರ್ದೇಶಕ ಎಆರ್ ಮುರುಗದಾಸ್ ಈ ಬಗ್ಗೆ ಮಾತನಾಡಿದ್ದು, ‘ಸೋಲಿಗೆ ನಾನೊಬ್ಬನೆ ಕಾರಣವಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ಸಲ್ಮಾನ್ ಖಾನ್ ಸಹ ಸೋಲಿಗೆ ಕಾರಣ ಎಂದಿದ್ದಾರೆ.

ಸಲ್ಮಾನ್ ಖಾನ್ (Salman Khan) ಸಿನಿಮಾ ಒಂದು ದೊಡ್ಡ ಹಿಟ್ ಆಗಿ ವರ್ಷಗಳೇ ಆಗಿವೆ. ಸತತ ಸೋಲು ಕಂಡಿದ್ದ ಶಾರುಖ್ ಖಾನ್ ನಟನೆಯ ಕಳೆದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಸಲ್ಮಾನ್ ಖಾನ್ ಸಹ ಹಿಟ್ ಕೊಡಲೇ ಬೇಕೆಂದು ದಕ್ಷಿಣ ಚಿತ್ರರಂಗದ ಸ್ಟಾರ್ ನಿರ್ದೇಶಕರ ಕೈ ಹಿಡಿದಿದ್ದರು. ‘ಗಜಿನಿ’, ‘ತುಪ್ಪಾಕಿ’, ‘ಕತ್ತಿ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಮುರುಗದಾಸ್ ಅವರು ಸಲ್ಮಾನ್ ಖಾನ್ ಅವರಿಗಾಗಿ ‘ಸಿಖಂಧರ್’ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ಸೋತಿತು. ಹಲವರು ನಿರ್ದೇಶಕ ಮುರುಗದಾಸ್ ಮೇಲೆ ಗೂಬೆ ಕೂರಿಸಿದರು. ಆದರೆ ಇದೀಗ ಮುರುಗದಾಸ್ ಸಿನಿಮಾ ಸೋಲಿನ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ. ‘ಸಿನಿಮಾ ಸೋಲಿಗೆ ನಾನೊಬ್ಬನೆ ಹೊಣೆಗಾರನಲ್ಲ’ ಎಂದಿದ್ದಾರೆ.
‘ಸಿಖಂಧರ್’ ಸಿನಿಮಾದ ಕತೆ ನನಗೆ ಇಷ್ಟವಾಗಿತ್ತು. ನಾವು ನಮ್ಮ ಸುತ್ತಲಿನ ಜನರ ಬಂಧವನ್ನು ಗೌರವಿಸುವುದಿಲ್ಲ, ಹೆಂಡತಿ ನಿಧನ ಹೊಂದಿದ ಬಳಿಕ ಇಡೀ ಊರು ನಾಯಕನೊಟ್ಟಿಗೆ ಹೇಗೆ ನಿಂತುಕೊಳ್ಳುತ್ತದೆ ಎಂಬುದು ನನ್ನ ಸಿನಿಮಾದ ಮೂಲ ಕತೆ ಅಥವಾ ವಿಷಯವಾಗಿತ್ತು. ಆದರೆ ಅಂದುಕೊಂಡಿದ್ದನ್ನು ನಾನು ಸೂಕ್ತವಾಗಿ ತೆರೆಗೆ ತರಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಸಿನಿಮಾದ ಸಂಪೂರ್ಣ ನಿಯಂತ್ರಣ ನನ್ನ ಕೈಯಲ್ಲಿ ಇರಲಿಲ್ಲ, ನಾನು ಅಂದುಕೊಂಡಂತೆ ಸಿನಿಮಾ ಮಾಡಲಾಗಿಲ್ಲ’ ಎಂದಿದ್ದಾರೆ ಮುರುಗದಾಸ್.
‘ಗಜಿನಿ’ ಸಿನಿಮಾ ಬಗ್ಗೆ ಮಾತನಾಡಿ, ‘ಆಮಿರ್ ಖಾನ್ ವಿಷಯದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ‘ಗಜಿನಿ’ ಸಿನಿಮಾ ಅನ್ನು ಅದಾಗಲೇ ನಾನು ತಮಿಳಿನಲ್ಲಿ ಮಾಡಿದ್ದೆ. ನನಗೆ ಸಣ್ಣ ಪುಟ್ಟ ಬದಲಾವಣೆ ಮಾತ್ರವೇ ಮಾಡಬೇಕಿತ್ತು. ಅದನ್ನು ಇಬ್ಬರೂ ಸೇರಿ ಒಪ್ಪಿಯೇ ಮಾಡಿದೆವು. ಅಲ್ಲದೆ ಆ ಸಿನಿಮಾ ಸೋತಿದ್ದರೂ, ‘ಗಜಿನಿ’ ಸಿನಿಮಾ ಮಾಡಿ ಗೆದ್ದಿದ್ದ ಕಾರಣ ನನ್ನ ಕಾರಣಕ್ಕೆ ಸಿನಿಮಾ ಸೋತಿತು ಎನ್ನಲಾಗುತ್ತಿರಲಿಲ್ಲ. ಈಗ ‘ಸಿಖಂಧರ್’ ಸಿನಿಮಾ ಸೋತಿದ್ದಕ್ಕೆ ಬಹಳ ಬೇಸರ ನನಗೆ ಆಗಿಲ್ಲ ಏಕೆಂದರೆ ಆ ಸೋಲಿಗೆ ನಾನೊಬ್ಬನೇ ಕಾರಣ ಅಲ್ಲ’ ಎಂದಿದ್ದಾರೆ ಮುರುಗದಾಸ್.
ಇದನ್ನೂ ಓದಿ:ಆಮಿರ್ ಖಾನ್ ಜತೆ ‘ಘಜಿನಿ 2’ ಮಾಡ್ತೀರಾ? ಉತ್ತರ ನೀಡಿದ ನಿರ್ದೇಶಕ ಮುರುಗದಾಸ್
ಮುರುಗದಾಸ್ ಅವರು ತಮಿಳಿನ ಸ್ಟಾರ್ ನಿರ್ದೇಶಕ. ‘ಗಜಿನಿ’, ‘ಸ್ಟಾಲಿನ್’, ‘ತುಪ್ಪಾಕಿ’, ‘ಕತ್ತಿ’, ‘ಸ್ಪೈಡರ್’, ‘7ತ್ ಸೆನ್ಸ್’, ‘ದರ್ಬಾರ್’ ಇನ್ನೂ ಕೆಲ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಶಿವಕಾರ್ತಿಕೇಯನ್ ನಟನೆಯ ‘ಮದರಾಸಿ’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಮದರಾಸಿ’ ಸಿನಿಮಾನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ವಿದ್ವತ್ ಜಮಾಲ್, ಬಿಜು ಮೆನನ್ ಸೇರಿ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




