
ಚಿತ್ರರಂಗದ ಸೆಲೆಬ್ರಿಟಿಗಳಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ದುರ್ಬಳಕೆ ಹಾಗೂ ‘ಡಿಪ್‌ಫೇಕ್’ (Deepfake) ವೀಡಿಯೋಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಟಿ ಶಾಲಿನಿ ಪಾಂಡೆ ಅವರಿಗೆ ಕೂಡ ಈ ತಂತ್ರಜ್ಞಾನದ ದುರ್ಬಳಕೆಯಿಂದ ತಲೆನೋವು ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ, ಎಐ ಮೂಲಕ ಸೃಷ್ಟಿಸಲಾದ ನಕಲಿ ವಿಡಿಯೋ ಕುರಿತು ಶಾಲಿನಿ ಪಾಂಡೆ (Shalini Pandey) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಾಲಿನಿ ಪಾಂಡೆ, ‘ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಎಐ ಸೃಷ್ಟಿತ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ಸಂಪೂರ್ಣವಾಗಿ ನಕಲಿ ಮತ್ತು ಎಡಿಟ್ ಮಾಡಲಾದ ವಿಡಿಯೋ. ತಂತ್ರಜ್ಞಾನವನ್ನು ಈ ರೀತಿ ದುರ್ಬಳಕೆ ಮಾಡಿಕೊಂಡು ವ್ಯಕ್ತಿಗಳನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿ ಹಾನಿ ಮಾಡುವುದು ಅತ್ಯಂತ ಕಳವಳಕಾರಿ ವಿಚಾರ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಈ ರೀತಿಯ ದೌರ್ಜನ್ಯವನ್ನು ನಾನು ಖಂಡಿಸುತ್ತೇನೆ. ತಂತ್ರಜ್ಞಾನದ ಈ ದುರ್ಬಳಕೆ ಎಂದಿಗೂ ಸಾಮಾನ್ಯವಾಗಬಾರದು. ನಿಮಗೆ ಈ ವಿಡಿಯೋ ಕಂಡುಬಂದರೆ ದಯವಿಟ್ಟು ಅದನ್ನು ಶೇರ್ ಮಾಡಬೇಡಿ, ಫಾರ್ವರ್ಡ್ ಮಾಡಬೇಡಿ ಅಥವಾ ಡೌನ್‌ಲೋಡ್ ಮಾಡಬೇಡಿ. ಬದಲಿಗೆ ತಕ್ಷಣವೇ ಅದನ್ನು ರಿಪೋರ್ಟ್ ಮಾಡಿ, ವಿಡಿಯೋ ಪ್ರಸಾರ ತಡೆಯಲು ನೆರವಾಗಿ’ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರಲ್ಲಿ ಶಾಲಿನಿ ಪಾಂಡೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಹಲವು ಪ್ರಮುಖ ನಟ-ನಟಿಯರು ಡಿಪ್‌ಫೇಕ್ ಸಂತ್ರಸ್ತರಾಗಿದ್ದಾರೆ. ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಮಿರ್ ಖಾನ್, ರಣವೀರ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ನಕಲಿ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರಿ ವಿವಾದ ಸೃಷ್ಟಿಸಿದ್ದವು.
ಇದನ್ನೂ ಓದಿ: ಡಿಪ್‌ಫೇಕ್ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೋಡಿ
ಇತ್ತೀಚೆಗಷ್ಟೇ ನಟಿ ಮೃಣಾಲ್ ಠಾಕೂರ್ ಕೂಡ ತಮ್ಮ ಡಿಪ್‌ಫೇಕ್ ವಿಡಿಯೋ ಹರಿಬಿಟ್ಟವರ ವಿರುದ್ಧ ತೀವ್ರ ಕಿಡಿಕಾರಿದ್ದರು. ‘ಒಬ್ಬರ ಅನುಮತಿಯಿಲ್ಲದೆ ಅವರ ಗುರುತನ್ನು ಬಳಸುವುದು ಕಾನೂನುಬಾಹಿರ’ ಎಂದು ಎಚ್ಚರಿಸಿದ್ದ ಮೃಣಾಲ್, ಇಂತಹ ಕೃತ್ಯವೆಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಗಂಭೀರ ಎಚ್ಚರಿಕೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.