ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರ್ಯನ್ ಖಾನ್, ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಅವರು ಸುಮಾರು ಒಂದು ತಿಂಗಳ ನಂತರದಲ್ಲಿ ಜೈಲಿನಿಂದ ಹೊರಬರುತ್ತಿದ್ದಾರೆ. ಜಾಮೀನು ಇಂದು ಮಂಜೂರಾದ ಹೊರತಾಗಿಯೂ ಇನ್ನೂ ಎರಡು ದಿನ ಅವರು ಜೈಲಿನಲ್ಲೇ ಇರಬೇಕಿದೆ. ಆರ್ಯನ್ ಶನಿವಾರ ಜೈಲಿನಿಂದ ಹೊರ ಬರುತ್ತಾರೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ.
ಆರ್ಯನ್ ಖಾನ್ಗೆ ಇಂದು ಕೋರ್ಟ್ ಜಾಮೀನು ಮಾತ್ರ ಮಂಜೂರು ಮಾಡಿದೆ. ಆದರೆ, ಜಾಮೀನು ನೀಡಿದ್ದೇಕೆ ಎಂಬುದಕ್ಕೆ ಕಾರಣವನ್ನು ವಿವರಿಸಿಲ್ಲ. ಶುಕ್ರವಾರ ಈ ಬಗ್ಗೆ ಕೋರ್ಟ್ ವಿಸ್ತಾರವಾಗಿ ತೀರ್ಪನ್ನು ಓದಲಿದೆ. ಹೀಗಾಗಿ, ನಾಳೆ ಈ ಮೂವರಿಗೆ ಅಧಿಕೃತವಾಗಿ ಜಾಮೀನು ಸಿಗಲಿದೆ. ಕೋರ್ಟ್ ಆದೇಶ ನೀಡಿದ ನಂತರದಲ್ಲಿ ಅದರ ಪ್ರತಿ ಜೈಲನ್ನು ಸೇರಬೇಕು. ಜೈಲಿನಲ್ಲಿ ಕೆಲ ಪ್ರಕ್ರಿಯೆಗಳು ಇರುತ್ತವೆ. ಆ ಪ್ರಕ್ರಿಯಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ, ನಾಳೆ ಸಂಜೆ ಅಥವಾ ಶನಿವಾರ ಬೆಳಗ್ಗೆ ಆರ್ಯನ್ ಬಿಡುಗಡೆ ಆಗಬಹುದು ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಕೋರ್ಟ್ನಲ್ಲಿ ನಡೆದ ವಾದ ಏನು?
ಎನ್‌ಸಿಬಿ ಪರ ಎಎಸ್‌ಜಿ ಅನಿಲ್ ಸಿಂಗ್ ವಾದಮಂಡನೆ ಮಾಡಿದ್ದು, ಆರ್ಯನ್‌ಗೆ ಜಾಮೀನು ನೀಡಬಾರದು ಎಂದು ವಾದಿಸಿದರು. ‘ಡ್ರಗ್ಸ್ ಸೇವಿಸಿರುವುದನ್ನು ಅರ್ಬಾಜ್ ಒಪ್ಪಿಕೊಂಡಿದ್ದಾನೆ. ಆರ್ಯನ್ ಖಾನ್ ಡ್ರಗ್ಸ್ ದಂಧೆಯ ಬಗ್ಗೆ ದಾಖಲೆ ಇದೆ. ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ ಆರ್ಯನ್‌ಗೆ ಮಾಹಿತಿಯಿತ್ತು. ಆರ್ಯನ್ ವಾಟ್ಸಾಪ್ ಚಾಟ್‌ನಿಂದ ವಾಣಿಜ್ಯ ಉದ್ದೇಶಕ್ಕೆ ಡ್ರಗ್ಸ್ ಇಟ್ಟುಕೊಂಡಿದ್ದರು ಎಂಬುದು ಪತ್ತೆ ಆಗಿದೆ. ಕ್ರೂಸ್‌ನಲ್ಲಿ ಹಲವು ಮಾದರಿಯ ಡ್ರಗ್ಸ್ ಪತ್ತೆಯಾಗಿದೆ. ಇದು ನರಹತ್ಯೆಗಿಂತ ಘೋರ ಅಪರಾಧವಾಗಿದೆ’ ಎಂದು ವಾದಿಸಿದರು ಅವರು.
‘ಅರ್ಬಾಜ್ ಡ್ರಗ್ಸ್ ತರುತ್ತಿರುವುದು ಆರ್ಯನ್‌ಗೆ ಗೊತ್ತಿತ್ತು. ಪ್ರಯಾಣ ವೇಳೆ ಇವರು ಡ್ರಗ್ಸ್ ಸೇವಿಸಲು ಪ್ಲಾನ್ ಮಾಡಿದ್ದರು. ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಜಾಮೀನು ಕೊಡಬೇಕೆಂದಿಲ್ಲ. ಮೇಲ್ನೋಟಕ್ಕೆ ಪ್ರಕರಣ ಕಂಡುಬಂದರೂ ನಿರಾಕರಿಸಬಹುದು. ಆರ್ಯನ್, ಅರ್ಬಾಜ್ ಮರ್ಚೆಂಟ್ ಬಾಲ್ಯದ ಸ್ನೇಹಿತರು. ಇಬ್ಬರೂ ಒಟ್ಟಿಗೆ ತೆರಳುತ್ತಿದ್ರು, ಒಂದೇ ಕೊಠಡಿಯಲ್ಲಿರುತ್ತಿದ್ದರು. ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆ ಮಾಡಿಲ್ಲವೆಂದು ಹೇಳುತ್ತಿದ್ದಾರೆ. ಅವರು ಡ್ರಗ್ಸ್ ಸೇವಿಸಿಲ್ಲ ಅಂದ್ರೆ ಪರೀಕ್ಷೆ ನಡೆಸುವುದು ಏಕೆ? ಆರೋಪಿಗಳ ಬಳಿ ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಸಿಕ್ಕಿತ್ತು’ ಎಂದು ಅನಿಲ್ ಸಿಂಗ್ ವಾದ ಮಂಡಿಸಿದರು.
ಆರ್ಯನ್ ಪರ ವಾದ ಮಂಡನೆ ಮಾಡಿದ ವಕೀಲ ಮುಕುಲ್ ರೋಹ್ಟಗಿ. ‘ಆರ್ಯನ್ ಖಾನ್ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಯಾವ ಕಾರಣಕ್ಕೆ ಬಂಧನವೆಂದು ತಿಳಿದುಕೊಳ್ಳುವ ಹಕ್ಕಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ’ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ಇದನ್ನೂ ಓದಿ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ರೇವ್ ಪಾರ್ಟಿ ತನಿಖೆ ಸಮೀರ್ ವಾಂಖೆಡೆಯಿಂದಲೇ ಮುಂದುವರಿಕೆ: ಎನ್‌ಸಿಬಿ