ಟೈಗರ್ ಶ್ರಾಫ್ಗೆ ಸಿನಿಮಾ ನಿರ್ದೇಶಿಸಲಿರುವ ಕನ್ನಡದ ನಿರ್ದೇಶಕ
Avane Srimannarayana: ಬಾಲಿವುಡ್ನ ಸ್ಟಾರ್ ನಟರುಗಳು ಹಿಟ್ ಸಿನಿಮಾ ನೀಡಲು ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರುಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಖಾನ್ಗಳೇ ಒಬ್ಬರ ಹಿಂದೊಬ್ಬರಂತೆ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ. ಇದೀಗ ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ಬಾಲಿವುಡ್ನ ಸ್ಟಾರ್ ಯುವನಟನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಬಾಲಿವುಡ್ ಸ್ಟಾರ್ ನಟರುಗಳಿಗೆ ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರುಗಳ ಮೇಲೆ ವಿಶೇಷ ಪ್ರೀತಿ ಬಂದಿದೆ. ಒಬ್ಬರ ಹಿಂದೊಬ್ಬರು, ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಹಿಟ್ ಸಿನಿಮಾಗಳಿಗಾಗಿ ಬಾಲಿವುಡ್ ನಟರುಗಳು ದಕ್ಷಿಣದ ನಿರ್ದೇಶಕರ ಬೆನ್ನು ಹತ್ತಿದ್ದಾರೆ. ಅಟ್ಲಿ ಜೊತೆಗೆ ಶಾರುಖ್ ಖಾನ್, ಮುರುಗದಾಸ್ ಜೊತೆಗೆ ಸಲ್ಮಾನ್ ಖಾನ್, ಸಂದೀಪ್ ರೆಡ್ಡಿ ಜೊತೆಗೆ ರಣ್ಬೀರ್ ಕಪೂರ್, ಲೋಕೇಶ್ ಜೊತೆ ಆಮಿರ್ ಖಾನ್ ಇನ್ನೂ ಕೆಲವರು ಕೆಲ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇದೀಗ ಕನ್ನಡದ ನಿರ್ದೇಶಕರೊಬ್ಬರು, ಬಾಲಿವುಡ್ ಸ್ಟಾರ್ ಯುವನಟನಿಗಾಗಿ ಸಿನಿಮಾ ಮಾಡಲಿದ್ದಾರೆ.
ರಕ್ಷಿತ್ ಶೆಟ್ಟಿ ನಟಿಸಿ ಸಹ ನಿರ್ಮಾಣ ಮಾಡಿದ್ದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶನ ಮಾಡಿದ್ದ ಸಚಿನ್ ರವಿ ಅವರು ಬಾಲಿವುಡ್ಗೆ ಪಯಣ ಬೆಳೆಸಿದ್ದಾರೆ. ಬಾಲಿವುಡ್ನ ಸ್ಟಾರ್ ಯುವನಟ ಟೈಗರ್ ಶ್ರಾಫ್ ಅವರಿಗಾಗಿ ಸಚಿನ್ ರವಿ ಸಿನಿಮಾ ಮಾಡಲಿದ್ದಾರೆ. ಸಿನಿಮಾಕ್ಕೆ ಉದ್ಯಮಿ, ನಿರ್ಮಾಪಕ ಮುರಾದ್ ಕೆಹ್ತಾನಿ ಬಂಡವಾಳ ಹೂಡಲಿದ್ದಾರೆ. ಸಿನಿಮಾದ ಮಾತುಕತೆ ಅಂತಿಮವಾಗಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಈಗಾಗಲೇ ಶುರುವಾಗಿದೆ ಎನ್ನಲಾಗುತ್ತಿದೆ.
ಎಡಿಟರ್, ನಿರ್ದೇಶಕ ಎರಡೂ ಆಗಿರುವ ಸಚಿನ್ ರವಿ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಳಿಕ ಯಾವುದೇ ಸಿನಿಮಾ ಮಾಡಿಲ್ಲ. ಶಾಹಿದ್ ಕಪೂರ್ ನಟನೆಯ ‘ಅಶ್ವತ್ಥಾಮ’ ಸಿನಿಮಾ ಮಾಡಲು ಸಚಿನ್ ಮುಂದಾಗಿದ್ದರು. ಆದರೆ ಅದು ಕೈಗೂಡಲಿಲ್ಲ. ಇದೀಗ ಟೈಗರ್ ಶ್ರಾಫ್ ಜೊತೆಗೆ ಹೊಸದೊಂದು ಪರಿಪೂರ್ಣ ಆಕ್ಷನ್ ಸಿನಿಮಾ ನಿರ್ಮಾಣ ಮಾಡಲು ಸಚಿನ್ ರವಿ ಮುಂದಾಗಿದ್ದಾರೆ. ಇದು ಸೋಲೊ ಸಿನಿಮಾ ಆಗಿರಲಿದ್ದು, ಯಾವುದೇ ಆಕ್ಷನ್ ಸಿನಿಮಾಗಳ ಮುಂದಿನ ಭಾಗ ಆಗಿರುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಮತ್ತೊಂದು ಭಾರಿ ದೊಡ್ಡ ಅವಕಾಶ ಬಾಚಿಕೊಂಡ ಶ್ರೀಲೀಲಾ
‘ಜವಾನ್’ ಸೇರಿದಂತೆ ಇನ್ನೂ ಕೆಲವು ಆಕ್ಷನ್ ಸಿನಿಮಾಗಳಿಗೆ ಡೈಲಾಗ್ ಬರೆದಿರುವ ಸುಮಿತ್ ಅರೋರಾ ಈ ಸಿನಿಮಾಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಸಿನಿಮಾಕ್ಕಾಗಿ ಹಾಲಿವುಡ್ನ ನುರಿತ ಆಕ್ಷನ್ ಕೊರಿಯಾಗ್ರಫರ್ಗಳನ್ನು ಕರೆಸಲಾಗುತ್ತಿದೆ. ಪ್ರಸ್ತುತ ಇತರೆ ಪಾತ್ರಗಳಿಗಾಗಿ ನಟರನ್ನು ಹುಡುಕಾಡುವ ಕೆಲಸ ಚಾಲ್ತಿಯಲ್ಲಿದೆ. ಸಿನಿಮಾದ ಚಿತ್ರೀಕರಣ ಅಕ್ಟೋಬರ್ನಲ್ಲಿ ಶುರುವಾಗಲಿದೆ.
ಸಚಿನ್ ರವಿ ಅವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ ಆಗಿರಲಿದೆ. ಸಚಿನ್, ಈ ಮೊದಲು ‘ಕಿರಿಕ್ ಪಾರ್ಟಿ’, ‘ಸಿಂಪಲ್ ಆಗ್ ಒಂದ್ ಲವ ಸ್ಟೋರಿ’, ‘ಆಪರೇಷನ್ ಅಲಮೇಲಮ್ಮ’, ‘ಉಳಿದವರು ಕಂಡಂತೆ’ ಸಿನಿಮಾಗಳಿಗೆ ಎಡಿಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಬಳಿಕ ‘ಉಳಿದವರು ಕಂಡಂತೆ’ ಸಿನಿಮಾ ನಿರ್ದೇಶನ ಮಾಡಿದರು. ಈಗ ಬಾಲಿವುಡ್ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




