ಭೂಮಿಕಾ ಚಾವ್ಲಾ (Bhumika Chawla) ಒಂದು ಕಾಲದ ಸ್ಟಾರ್ ನಟಿ. ಅನುಷ್ಕಾ ಶೆಟ್ಟಿ (Anushka Shetty), ನಯನತಾರಾ ಅವರುಗಳು ತೆಲುಗು, ತಮಿಳು ಚಿತ್ರರಂಗವನ್ನು ಆಳಿದ ರೀತಿಯಲ್ಲಿಯೇ ಭೂಮಿಕಾ ಚಾವ್ಲಾ ಸಹ ತೆಲುಗು ಚಿತ್ರರಂಗವನ್ನು ಆಳಿದವರು. ಹೊಸ ಹೀರೋ ಆಗಲಿ, ಹಳೆಯ ಹೀರೋ ಆಗಲಿ ಭೂಮಿಕಾ ಚಾವ್ಲಾ ನಾಯಕಿಯಾಗಿ ಇರಲೇ ಬೇಕು ಎಂಬ ಸ್ಥಿತಿ 2000 ದಶಕದಲ್ಲಿ ನಿರ್ಮಾಣವಾಗಿತ್ತು. ತೆಲುಗಿನಲ್ಲಿ ಸ್ಟಾರ್ ಎನಿಸಿಕೊಂಡ ಬಳಿಕ ಹಿಂದಿಗೆ ಪದಾರ್ಪಣೆ ಮಾಡಿ ಮೊದಲ ಸಿನಿಮಾದಲ್ಲಿಯೇ ಸೂಪರ್ ಹಿಟ್ ನೀಡಿದರು ಆದರೂ ಬಾಲಿವುಡ್ (Bollywood) ಭೂಮಿಕಾ ಅವರನ್ನು ಒಪ್ಪಿಕೊಳ್ಳಲಿಲ್ಲ, ಹಲವು ಸಿನಿಮಾಗ ಅವಕಾಶಗಳನ್ನು ಅವರಿಂದ ತಪ್ಪಿಸಲಾಯ್ತು. ಈ ಬಗ್ಗೆ ಸ್ವತಃ ಭೂಮಿಕಾ ಮಾತನಾಡಿದ್ದಾರೆ.
ಇದೀಗ ಸಲ್ಮಾನ್ ಖಾನ್ (Salman Khan) ನಟನೆಯ ಕಿಸಿ ಕ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ವೆಂಕಟೇಶ್ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸಿದ್ದು, ಅಸಲಿಗೆ ಭೂಮಿಕಾ ಚಾವ್ಲಾ ಬಾಲಿವುಡ್ ಪ್ರವೇಶ ಮಾಡಿದ್ದು ಇದೇ ಸಲ್ಮಾನ್ ಖಾನ್ರ ನಾಯಕಿಯಾಗಿ ತೇರೆ ನಾಮ್ ಸಿನಿಮಾ ಮೂಲಕ. ಹಿಟ್ ಸಿನಿಮಾಗಳಿಲ್ಲದೆ ಬಸವಳಿದಿದ್ದ ಸಲ್ಮಾನ್ ಖಾನ್ಗೆ ತೇರೆ ನಾಮ್ ದೊಡ್ಡ ಹಿಟ್ ಜೊತೆಗೆ ದೊಡ್ಡ ಮಾರುಕಟ್ಟೆಯನ್ನು ಕಟ್ಟಿಕೊಟ್ಟಿತು. ಆದರೆ ಆ ಸಿನಿಮಾದ ಬಳಿಕ ಭೂಮಿಕಾ ಚಾವ್ಲಾ ಅವರನ್ನು ಉದ್ದೇಶಪೂರ್ವಕವಾಗಿ ಕೆಲವು ಸಿನಿಮಾಗಳಿಂದ ದೂರ ಇಡಲಾಯ್ತು.
ಶಾಹಿದ್ ಕಪೂರ್, ಕರೀನಾ ಕಪೂರ್ ನಟಿಸಿರುವ ‘ಜಬ್ ವಿ ಮೆಟ್’ ಸಿನಿಮಾ ಬಾಲಿವುಡ್ನ ಕಲ್ಟ್ ಪ್ರೇಮಕತಾ ಸಿನಿಮಾಗಳಲ್ಲಿ ಒಂದು. ಈ ಸಿನಿಮಾಕ್ಕೆ ಮೊದಲ ಆಯ್ಕೆ ಆಗಿದ್ದಿದ್ದು ಭೂಮಿಕಾ ಚಾವ್ಲಾ. ಆ ಸಿನಿಮಾಕ್ಕೆ ನಾನು ಸಹಿ ಮಾಡಿದಾಗ ಸಿನಿಮಾದ ನಾಯಕ ಬಾಬಿ ಡಿಯೋಲ್ ಆಗಿದ್ದರು. ಸಿನಿಮಾಕ್ಕೆ ಟ್ರೈನ್ ಎಂದು ಹೆಸರಿಡಲಾಗಿತ್ತು. ಅದಾದ ಬಳಿಕ ಶಾಹಿದ್ ಕಪೂರ್ ಹಾಗೂ ನಾನು ನಟಿಸುವುದು ಎಂದಾಯಿತು. ಅದಾದ ಬಳಿಕ ಶಾಹಿದ್ ಕಪೂರ್ ಮತ್ತು ಆಯೆಷಾ ಟಾಕಿಯಾ ನಟಿಸುತ್ತಾರೆ ಎಂದಾಯಿತು. ಇದೆಲ್ಲವೂ ಆಗಿ ಕೊನೆಗೆ ಕರೀನಾ ಕಪೂರ್ ಆ ಸಿನಿಮಾದ ನಾಯಕಿಯಾದರು. ಆಗ ನನಗೆ ಬಹಳ ಬೇಸರವಾಗಿತ್ತು. ಆದರೆ ಆ ಬೇಸರ ಹೆಚ್ಚು ದಿನ ಇರಲಿಲ್ಲ, ನಾನು ಅದನ್ನೆಲ್ಲ ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಎಂದಿದ್ದಾರೆ ಭೂಮಿಕಾ.
ಅದಾದ ಬಳಿಕ ರಾಜ್ಕುಮಾರ್ ಹಿರಾನಿ ನನ್ನನ್ನು ಭೇಟಿಯಾಗಿ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಅಂತೆಯೇ ನಾನು ಸಹಿ ಮಾಡಿದೆ. ಆದರೆ ಆ ಸಿನಿಮಾದಲ್ಲಿ ಸಹ ನಟಿಸಲಾಗಲಿಲ್ಲ. ಆದರೆ ನಾನು ಆ ಸಿನಿಮಾದ ಅವಕಾಶ ಕಳೆದುಕೊಂಡ ಬಗ್ಗೆ ರಾಜ್ಕುಮಾರ್ ಹಿರಾನಿ ನನಗೆ ಕಾರಣ ನೀಡಿದರು. 10-12 ವರ್ಷಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ, ಬೇರೆ ಯಾರೋ ಮಾಡಿದ ತಪ್ಪಿಗೆ ನಿಮ್ಮನ್ನು ಸಿನಿಮಾಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂದು ಹಿರಾನಿ ಹೇಳಿದರು.
ಅದಾದ ಬಳಿಕ ಮಣಿರತ್ನಂ ನಿರ್ದೇಶನದ ಕಣ್ಣತ್ತಿಲ್ ಮುತ್ತಮಿತ್ತಾಳ್ ಸಿನಿಮಾಕ್ಕೂ ಸಹಿ ಮಾಡಿದ್ದೆ ಆ ಸಿನಿಮಾ ಸಹ ಆಗಲಿಲ್ಲ. ಆ ಸಿನಿಮಾದಲ್ಲಿ ಮಾಧವನ್ ಜೊತೆಗೆ ಸಿಮ್ರನ್ ನಟಿಸಿದರು. ಇದೆಲ್ಲವೂ ಆಗುತ್ತಲೇ ಇರುತ್ತವೆ, ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂದು ಕೂಲ್ ಆಗಿಯೇ ಹೇಳಿದ್ದಾರೆ ಭೂಮಿಕಾ ಚಾವ್ಲಾ.
ಭೂಮಿಕಾ, ತೆಲುಗಿನ ಸೂಪರ್ ಹಿಟ್ ಸಿನಿಮಾಗಳಾದ, ಖುಷಿ, ವಾಸು, ಜೈ ಚಿರಂಜೀವ, ಸಿಂಹಾದ್ರಿ, ಒಕ್ಕಡು, ನಾ ಆಟೊಗ್ರಾಫ್, ಸಾಂಬಾ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ತೇರೆನಾಮ್, ರನ್, ಗಾಂಧಿ ಮೈ ಫಾದರ್, ಸಿಲ್ಸಿಲಾ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಲವ್ ಯು ಆಲಿಯಾ, ಉಪೇಂದ್ರ ನಟನೆಯ ಗಾಡ್ಫಾದರ್ನ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ