
ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ‘ಬಂದರ್’ (Bandar) ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ಅವರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆಯಾದರೂ, ಇದು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ತರುತ್ತಿಲ್ಲ. ಮೊದಲ ಸೋಮವಾರ (ಜೂನ್ 9) ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಪ್ರಸಿದ್ಧ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಬಂದರ್’ ಸಿನಿಮಾ ತನ್ನ ನಾಲ್ಕನೇ ದಿನವಾದ ಸೋಮವಾರದಂದು ಅತ್ಯಂತ ಕಡಿಮೆ ಗಳಿಕೆಯನ್ನು ದಾಖಲಿಸಿದೆ. ಚಿತ್ರವು ಸೋಮವಾರ ಕೇವಲ 24 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಮೊದಲ ದಿನ (ಗುರುವಾರ) 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಶನಿವಾರ 95 ಲಕ್ಷ ರೂಪಾಯಿ, ಭಾನುವಾರ 1 ಕೋಟಿ ರೂಪಾಯಿ ಗಳಿಸಿತ್ತು.
ವಿಭಿನ್ನ ಕಥಾಹಂದರ ಹೊಂದಿರುವ ‘ಬಂದರ್’ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಇತರ ದೊಡ್ಡ ಸಿನಿಮಾಗಳಿಂದ ಭಾರಿ ಪೈಪೋಟಿ ಎದುರಾಗಿದೆ. ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’, ಹಾಲಿವುಡ್ ಹಾರರ್ ಸಿನಿಮಾ ‘ಒಬ್ಸೆಷನ್’, ರಾಮ್ ಚರಣ್ ನಟನೆಯ ತೆಲುಗು ಚಿತ್ರ ‘ಪೆದ್ದಿ’ ಮತ್ತು ಹೊಸ ಹೀ-ಮ್ಯಾನ್ ಸಿನಿಮಾ ‘ಮಾಸ್ಟರ್ಸ್ ಆಫ್ ದಿ ಯೂನಿವರ್ಸ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡುತ್ತಿವೆ.
ಇದನ್ನೂ ಓದಿ: ‘ಹಸಿಬಿಸಿ ಸೀನ್ ಬಗ್ಗೆ ಪತ್ನಿಗೆ ಆಮೇಲೆ ಗೊತ್ತಾಗಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’: ಬಾಬಿ ಡಿಯೋಲ್
ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಬಾಬಿ ಡಿಯೋಲ್ ಅವರು ಚಲನಚಿತ್ರ ರಂಗದಲ್ಲಿ ಸತತ ಸೋಲುಗಳನ್ನು ಕಂಡು ಕೆರಿಯರ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವ ಗಾಯಕ ಮತ್ತು ನಟ ಸಮರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಗಾಯತ್ರಿ (ಸಪ್ನಾ ಪಬ್ಬಿ) ಎಂಬ ಮಹಿಳೆ ಸಮರ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದಾಗ ಆತನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಕಾನೂನು ಹೋರಾಟದ ಚಕ್ರವ್ಯೂಹದಲ್ಲಿ ಸಿಲುಕುವ ಸಮರ್, ‘ಬಂದರ್’ (ಕೋತಿ) ರೀತಿ ಒಂದೊಂದೇ ಅಡೆತಡೆಗಳನ್ನು ಹೇಗೆ ದಾಟಬೇಕಾಗುತ್ತದೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Tue, 9 June 26