ಬಾಡಿಗಾರ್ಡ್ ವರ್ತನೆಗೆ ನೆಟ್ಟಿಗರ ಆಕ್ರೋಶ: ಜಾಕ್ವೆಲಿನ್ ಕೈ ಹಿಡಿದು ಎಳೆದ ಭದ್ರತಾ ಸಿಬ್ಬಂದಿ

‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಬಿಡುಗಡೆಗೆ ಕಾದಿರುವ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಅವರ ಬಾಡಿಗಾರ್ಡ್ ನಡೆದುಕೊಂಡ ರೀತಿಯನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಬಾಡಿಗಾರ್ಡ್ ವರ್ತನೆಗೆ ನೆಟ್ಟಿಗರ ಆಕ್ರೋಶ: ಜಾಕ್ವೆಲಿನ್ ಕೈ ಹಿಡಿದು ಎಳೆದ ಭದ್ರತಾ ಸಿಬ್ಬಂದಿ
Jacqueline Fernandez

Updated on: Jun 22, 2026 | 4:54 PM

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರ ಬಾಡಿಗಾರ್ಡ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾಕ್ವೆಲಿನ್ ಅವರ ಕೈಯನ್ನು ಹಿಡಿದು ವೇದಿಕೆಯತ್ತ ಕರೆದೊಯ್ಯಲು ಯತ್ನಿಸಿದ ಬಾಡಿಗಾರ್ಡ್‌ನ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ, ಬಾಡಿಗಾರ್ಡ್ (Jacqueline Fernandez Bodyguard) ಕೈ ಹಿಡಿದ ತಕ್ಷಣ ಜಾಕ್ವೆಲಿನ್ ತುಸು ಮುಜುಗರಕ್ಕೊಳಗಾದಂತೆ ಕಂಡರೂ, ತಕ್ಷಣವೇ ಆತನನ್ನು ತಡೆದು ಅಭಿಮಾನಿಗಳಿಗೆ ಹಸನ್ಮುಖಿಯಾಗಿ ಸೆಲ್ಫಿ ನೀಡಿದ್ದಾರೆ.

ಭಾನುವಾರ (ಜೂನ್ 22) ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಭಿಮಾನಿಗಳ ಪ್ರೀತಿಗೆ ಓಗೊಟ್ಟ ನಟಿ, ಅಲ್ಲೇ ನಿಂತು ಫೋಟೋಗೆ ಫೋಸ್ ನೀಡಲು ಮುಂದಾದರು. ಆದರೆ ಇದೇ ವೇಳೆ ಅವರ ಬಾಡಿಗಾರ್ಡ್, ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಣಿಕಟ್ಟನ್ನು ಬಲವಾಗಿ ಹಿಡಿದು, ಅಭಿಮಾನಿಗಳಿಂದ ದೂರ ಜರುಗಿಸಿ ವೇದಿಕೆಯತ್ತ ಮುನ್ನಡೆಯುವಂತೆ ಒತ್ತಾಯಿಸಿದ್ದಾನೆ.

ಜಾಕ್ವೆಲಿನ್ ಫರ್ನಾಂಡಿಸ್ ವೈರಲ್ ವಿಡಿಯೋ:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಬಾಡಿಗಾರ್ಡ್ ವಿರುದ್ಧ ಮುಗಿಬಿದ್ದಿದ್ದಾರೆ. ‘ರಕ್ಷಣೆ ನೀಡುವುದು ಸರಿ. ಆದರೆ ಒಬ್ಬ ಮಹಿಳೆಯ ಅನುಮತಿಯಿಲ್ಲದೆ ಆಕೆಯ ಕೈ ಮುಟ್ಟುವ ಹಕ್ಕು ಇವನಿಗೆ ಕೊಟ್ಟವರು ಯಾರು? ದೂರ ನಿಂತೇ ರಕ್ಷಣೆ ನೀಡಬಹುದಿತ್ತು’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ‘ಅಭಿಮಾನಿಗಳ ಬಗ್ಗೆ ಜಾಕ್ವೆಲಿನ್​ಗೆ ಇರುವ ಗೌರವ ಮತ್ತು ಪ್ರೀತಿ ಮೆಚ್ಚುವಂತದ್ದು, ಆದರೆ ಬೌನ್ಸರ್ ನಡೆ ತಪ್ಪು’ ಎಂದು ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಆದರೆ, ಕೆಲವರು ಜಾಕ್ವೆಲಿನ್ ಫರ್ನಾಂಡಿಸ್ ಅವರ ಬಾಡಿಗಾರ್ಡ್ ಪರವಾಗಿಯೂ ಧ್ವನಿ ಎತ್ತಿದ್ದಾರೆ. ‘ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಎಷ್ಟು ಹತ್ತಿರವಾದರೂ, ಭದ್ರತೆಯ ದೃಷ್ಟಿಯಿಂದ ಅವರನ್ನು ತಡೆಯುವುದು ಬಾಡಿಗಾರ್ಡ್‌ಗಳ ಕೆಲಸ. ಅವರಿಗೆ ಮೊದಲೇ ಇಂತಹ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿರುತ್ತದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಅಬ್ಸೆಷನ್’ ಎಫೆಕ್ಟ್: ಹಾರರ್ ಸಿನಿಮಾ ಒಪ್ಪಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ತಮ್ಮ ಬಹುನಿರೀಕ್ಷಿತ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ದಿಶಾ ಪಟಾನಿ, ರವೀನಾ ಟಂಡನ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಸಿನಿಮಾ ಜೂನ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us