‘ಅಬ್ಸೆಷನ್’ ಎಫೆಕ್ಟ್: ಹಾರರ್ ಸಿನಿಮಾ ಒಪ್ಪಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್
ಜಾಗತಿಕ ಮಟ್ಟದಲ್ಲಿ ‘ಅಬ್ಸೆಷನ್’ ಸಿನಿಮಾ ಸದ್ದು ಮಾಡಿದೆ. ಇದರಿಂದಾಗಿ ಹಾರರ್ ಸಿನಿಮಾಗಳ ಕ್ರೇಜ್ ಹೆಚ್ಚಿದೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಪೂರ್ಣಪ್ರಮಾಣದ ಒಂದು ಹಾರರ್ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಗೆ ಹಾರರ್ ಮತ್ತು ಸಸ್ಪೆನ್ಸ್ ಸಿನಿಮಾಗಳ ಕ್ರೇಜ್ ಜೋರಾಗಿದೆ. ಹಾಲಿವುಡ್‌ನ ‘ಅಬ್ಸೆಷನ್’ (Obsession), ‘ಬ್ಯಾಕ್ರೂಮ್ಸ್’ ಚಿತ್ರಗಳಿಂದ ಹಿಡಿದು ಭಾರತದ ‘ಶೈತಾನ್’, ‘ಭ್ರಮಯುಗಂ’ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್’ ತನಕ ಹಾರರ್ ಚಿತ್ರಗಳು (Horror Movie) ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಈ ಟ್ರೆಂಡ್ ನೋಡಿ ಈಗ ಸ್ಟಾರ್ ನಟ-ನಟಿಯರು ಕೂಡ ಹಾರರ್ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೂಡ ಮೊದಲ ಬಾರಿಗೆ ಪಕ್ಕಾ ಹಾರರ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ.
ಈ ಹಿಂದೆ ಜಾಕ್ವೆಲಿನ್ ಅವರು ‘ಭೂತ್ ಪೊಲೀಸ್’ ಚಿತ್ರದಲ್ಲಿ ನಟಿಸಿದ್ದರಾದರೂ, ಅದು ಹಾರರ್-ಕಾಮಿಡಿ ಕಥಾಹಂದರದ ಚಿತ್ರವಾಗಿತ್ತು. ಆದರೆ ಈಗ ಅವರು ಒಪ್ಪಿಕೊಂಡಿರುವುದು ಅವರ ವೃತ್ತಿಜೀವನದ ಮೊದಲ ಸಂಪೂರ್ಣ ಹಾರರ್ ಚಿತ್ರವಾಗಿದೆ. ಬಹಳ ದಿನಗಳಿಂದ ಒಳ್ಳೆಯ ಹಾರರ್ ಕಥೆಗಾಗಿ ಹುಡುಕುತ್ತಿದ್ದ ಜಾಕ್ವೆಲಿನ್‌ಗೆ ಕೊನೆಗೂ ಕಥೆಯೊಂದು ಇಷ್ಟವಾಗಿದೆ. ಈ ಚಿತ್ರದಲ್ಲಿ ಕೇವಲ ಹಾರರ್ ಮಾತ್ರವಲ್ಲದೆ, ಭಾವನಾತ್ಮಕ ಸನ್ನಿವೇಶಗಳು ಮತ್ತು ಅದ್ಭುತವಾದ ಸಂಗೀತವೂ ಇರಲಿದ್ದು, ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ.
ಖ್ಯಾತಿ ಮದಾನ್ ಅವರ ‘ನಾಟ್ ಔಟ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಜಾಕ್ವೆಲಿನ್ ಮುಖ್ಯ ಪಾತ್ರದಲ್ಲಿದ್ದರೆ, ಅವರಿಗೆ ಜೋಡಿಯಾಗಿ ಇಬ್ಬರು ನಾಯಕ ನಟರು ಫೈನಲ್ ಆಗಿದ್ದಾರೆ. ಆದರೆ ಚಿತ್ರದ ಶೀರ್ಷಿಕೆ, ನಿರ್ದೇಶಕರು ಮತ್ತು ಇತರ ನಟರ ವಿವರಗಳನ್ನು ಸದ್ಯಕ್ಕೆ ಗುಟ್ಟಾಗಿಡಲಾಗಿದೆ.
ಮೂಲಗಳ ಪ್ರಕಾರ, ಈ ಚಿತ್ರದ ಪ್ರಮೋಷನಲ್ ಸಾಂಗ್ ಮತ್ತು ಟೀಸರ್ ಶೂಟಿಂಗ್ ಈಗಾಗಲೇ ಮುಗಿದಿದೆ. ಪ್ರಸ್ತುತ ಚಿತ್ರದ ನಟರು ವರ್ಕ್‌ಶಾಪ್‌ಗಳಲ್ಲಿ ಬ್ಯುಸಿಯಾಗಿದ್ದು, ಜೂನ್ ತಿಂಗಳ ಕೊನೆಯ ವಾರದಲ್ಲಿ ಸಿನಿಮಾದ ಚಿತ್ರೀಕರಣ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಅನೌನ್ಸ್‌ಮೆಂಟ್ ಹೊರಬೀಳಲಿದೆ.
ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ
ಸದ್ಯಕ್ಕಂತೂ ಜಾಕ್ವೆಲಿನ್ ಫರ್ನಾಂಡಿಸ್ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ‘ಹೌಸ್‌ಫುಲ್ 5’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಮಲ್ಟಿಸ್ಟಾರರ್ ಕಾಮಿಡಿ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಜೂನ್ 26ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




