AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ

ನೂರಾರು ಕೋಟಿ ರೂಪಾಯಿ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ನಂಟಿನಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೆ ಸಂಕಷ್ಟ ಹೆಚ್ಚಿದೆ. ಮಾಫಿ ಸಾಕ್ಷಿಯಾಗಿ ಈ ಪ್ರಕರಣದಿಂದ ಪಾರಾಗಲು ಪ್ರಯತ್ನಿಸಿದ್ದ ಅವರಿಗೆ ಹಿನ್ನಡೆ ಆಗಿದೆ. ಪ್ರಕರಣದಲ್ಲಿ ಅವರ ಕೈವಾಡ ಬಲವಾಗಿದೆ ಎಂದು ಇಡಿ ಆರೋಪಿಸಿದೆ.

ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ
Jacqueline Fernandez
ಮದನ್​ ಕುಮಾರ್​
|

Updated on: May 11, 2026 | 8:42 PM

Share

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ತಾನು ಅಪ್ರೂವರ್ (ಮಾಫಿ ಸಾಕ್ಷಿ) ಆಗಲು ಅನುಮತಿ ನೀಡಬೇಕೆಂದು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಯನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದೆ. ಜಾಕ್ವೆಲಿನ್ ಈ ಪ್ರಕರಣದಲ್ಲಿ ಕೇವಲ ಸಂತ್ರಸ್ತೆಯಲ್ಲ, ಬದಲಿಗೆ ಅವರು ಅಪರಾಧದ ಹಣದ ಪ್ರಮುಖ ಫಲಾನುಭವಿ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಜಾಕ್ವೆಲಿನ್ ಅವರ ಪಾತ್ರವು ಸಣ್ಣ ಮಟ್ಟದ್ದಲ್ಲ. ಅವರು ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿದೆ. ತನಿಖೆಯ ಉದ್ದಕ್ಕೂ ಜಾಕ್ವೆಲಿನ್ ಅಸಮರ್ಪಕ ಮತ್ತು ಅಸಮಂಜಸ ಹೇಳಿಕೆಗಳನ್ನು ನೀಡಿದ್ದಾರೆ. ನಗದು ವ್ಯವಹಾರಗಳು, ದುಬಾರಿ ಉಡುಗೊರೆಗಳು ಮತ್ತು ಬ್ಯಾಂಕ್ ವಹಿವಾಟುಗಳ ಬಗ್ಗೆ ಅವರು ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಇಡಿ ಆರೋಪಿಸಿದೆ.

ಸುಕೇಶ್ ಚಂದ್ರಶೇಖರ್ ಅವರ ಅಪರಾಧ ಹಿನ್ನೆಲೆ ತಿಳಿದಿದ್ದರೂ ಜಾಕ್ವೆಲಿನ್ ಅವರೊಂದಿಗೆ ಸಂಪರ್ಕ ಮುಂದುವರಿಸಿದ್ದರು. ಅವರಿಗೆ ನೀಡಲಾದ ದುಬಾರಿ ಉಡುಗೊರೆಗಳು ಮತ್ತು ಹಣಕಾಸಿನ ಸವಲತ್ತುಗಳು ಅಕ್ರಮ ಹಣದಿಂದಲೇ ಬಂದಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖಾಧಿಕಾರಿಗಳು ಪುರಾವೆಗಳನ್ನು ಎದುರಿಟ್ಟಾಗ ಮಾತ್ರ ಅವರು ಕೆಲವು ವಿಷಯಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಅಪ್ರೂವರ್ ಆಗಿ ಪರಿಗಣಿಸುವುದು ಪ್ರಕರಣದ ಗಂಭೀರತೆಯನ್ನು ಕುಗ್ಗಿಸುತ್ತದೆ ಎಂದು ಇಡಿ ಹೇಳಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ನಡೆಯುತ್ತಿರುವ ಈ ತನಿಖೆಯಲ್ಲಿ ತಾನು ಅಧಿಕಾರಿಗಳಿಗೆ ಸಹಕರಿಸಲು ಸಿದ್ಧವಿರುವುದಾಗಿ ಹೇಳಿದ್ದ ಜಾಕ್ವೆಲಿನ್, ಈ ಮೂಲಕ ಪ್ರಕರಣದಿಂದ ಸ್ವಲ್ಪ ಮಟ್ಟಿನ ವಿನಾಯಿತಿ ಪಡೆಯಲು ಯೋಜಿಸಿದ್ದರು. ಆದರೆ, ಇಡಿ ಸಲ್ಲಿರುವ ಈ ಆಕ್ಷೇಪಾರ್ಹ ವರದಿಯು ಜಾಕ್ವೆಲಿನ್ ಅವರ ಮುಂದಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಹೆಸರಲ್ಲಿ 25 ಕೋಟಿ ರೂ. ದೇಣಿಗೆ ನೀಡಿದ ಸುಕೇಶ್

ನಟಿ ಪಿಂಕಿ ಇರಾನಿ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಜೊತೆಗಿನ ಒಡನಾಟದ ಬಗ್ಗೆಯೂ ಜಾಕ್ವೆಲಿನ್ ಫರ್ನಾಂಡಿಸ್ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಬೆಳವಣಿಗೆಯಿಂದಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸದ್ಯಕ್ಕೆ ಕಾನೂನು ಸಂಕಷ್ಟದಿಂದ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us