ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ ಡೇಟಿಂಗ್ ಆರಂಭಿಸಿದ್ದಾಗ ತೀವ್ರ ಟೀಕೆಗೆ ಗುರಿಯಾಗಿತ್ತು ಈ ಜೋಡಿ. ಅದಕ್ಕೆ ಕಾರಣ ಇಬ್ಬರ ನಡುವೆ ಇದ್ದ ವಯಸ್ಸಿನ ಅಂತರ. ಮಲೈಕಾ ಕಪೂರ್ ಗಿಂತಲೂ 12 ವರ್ಷ ಚಿಕ್ಕವರು ಅರ್ಜುನ್ ಕಪೂರ್. ಈ ವಯಸ್ಸಿನ ಅಂತರದ ಕಾರಣಕ್ಕೆ ಮಲೈಕಾ ಹಾಗೂ ಅರ್ಜುನ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ, ನಿಂದನೆಗಳನ್ನು ಕೇಳಿದ್ದರು. ಟೀಕೆಗಳು ಬಂದರೂ ಸಹ ಹಲವು ವರ್ಷ ಇಬ್ಬರೂ ಸಹಬಾಳ್ವೆ ನಡೆಸಿದರು. ಇದೀಗ ಈ ಇಬ್ಬರೂ ಪರಸ್ಪರ ದೂರಾಗುತ್ತಿದ್ದಾರೆ.
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದರು. 2018 ರಲ್ಲಿ ಮೊದಲ ಬಾರಿಗೆ ಇವರಿಬ್ಬರ ಹೆಸರು ಒಟ್ಟಿಗೆ ಕೇಳಿ ಬಂದಿತ್ತು. ಮಲೈಕಾರ 45 ನೇ ವರ್ಷದ ಹುಟ್ಟುಹಬ್ಬದಲ್ಲಿ ತಾವಿಬ್ಬರೂ ಪ್ರೀತಿಯಲ್ಲಿದ್ದು, ಇನ್ನುಮುಂದೆ ಸಹಬಾಳ್ವೆ ಮಾಡುವುದಾಗಿ ಘೋಷಿಸಿದ್ದರು. ಈ ಆರು ವರ್ಷಗಳಲ್ಲಿ ಪ್ರೀತಿಯಿಂದಲೇ ಇದ್ದ ಈ ಜೋಡಿ ಈಗ ಕೆಲವು ಕಾರಣಗಳಿಂದಾಗಿ ಪರಸ್ಪರ ದೂರಾಗುತ್ತಿದ್ದಾರೆ.
ಈ ಬಗ್ಗೆ ಕೆಲ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದ್ದು, ಈ ಜೋಡಿ ಪರಸ್ಪರ ಗೌರವದಿಂದಲೇ ದೂರಾಗುತ್ತಿದ್ದಾರೆ. ತಮ್ಮ ಬ್ರೇಕ್ ಅಪ್ ಬಗ್ಗೆ ಮೌನದಿಂದಿದ್ದು ಪರಸ್ಪರರ ಪರ ಅಥವಾ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಿರಲು ನಿರ್ಧರಿಸಿದ್ದಾರೆ. ಇಬ್ಬರೂ ಸಹ ಗೌರವಪೂರ್ವಕವಾಗಿ ದೂರಾಗುತ್ತಿದ್ದು, ಇಬ್ಬರೂ ಸಹ ತಮ್ಮ ಗೆಳೆತನವನ್ನು ಮುಂದುವರೆಸಲಿದ್ದಾರೆ ಎಂದು ಇಬ್ಬರಿಗೂ ಆಪ್ತವಾಗಿರುವವರು ತಿಳಿಸಿರುವುದಾಗಿ ಪಿಂಕ್ ವಿಲ್ಲಾ ವರದಿ ಮಾಡಿದೆ.
ಇದನ್ನೂ ಓದಿ:ಮುಂದಾಗುವುದನ್ನು ಅರ್ಥೈಸಿಕೊಂಡು ಬೇರೆ ಆದ ಮಲೈಕಾ ಅರೋರಾ-ಅರ್ಜುನ್ ಕಪೂರ್?
ಮಲೈಕಾ ಅರೋರಾ, ಸಲ್ಮಾನ್ ಖಾನ್ರ ಸಹೋದರ ಅರ್ಬಾಜ್ ಖಾನ್ ಜೊತೆಗೆ 1998 ರಲ್ಲಿ ವಿವಾಹವಾದರು. ಇಬ್ಬರಿಗೂ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಈ ಇಬ್ಬರೂ 2016 ರಲ್ಲಿ ದೂರಾಗುತ್ತಿರುವುದಾಗಿ ಘೋಷಿಸಿ, 2017 ರಲ್ಲಿ ಪರಸ್ಪರ ದೂರಾದರು. ಆ ಬಳಿಕ ಮಲೈಕಾ ಅರೋರಾ, ಅರ್ಜುನ್ ಕಪೂರ್ ಅನ್ನು ಡೇಟ್ ಮಾಡಲು ಆರಂಭಿಸಿದರು. ಇಬ್ಬರೂ ಸಹ ಆರಂಭದಲ್ಲಿ ಹಲವು ಟೀಕೆಗಳನ್ನು ಎದುರಿಸಬೇಕಾಯ್ತು. ಮಲೈಕಾ ಅಂತೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದರು. ಇಬ್ಬರು ಆರು ವರ್ಷಗಳ ಕಾಲ ಒಟ್ಟಿಗೆ ಸಹಬಾಳ್ವೆ ನಡೆಸಿದರಾದರೂ ಇಬ್ಬರೂ ಮದುವೆ ಮಾಡಿಕೊಂಡಿರಲಿಲ್ಲ. ಇಬ್ಬರಿಗೂ ಮಕ್ಕಳು ಸಹ ಇಲ್ಲ.
ಮಲೈಕಾ ಅರೋರಾ ರಿಯಾಲಿಟಿ ಶೋಗಳ ಜಡ್ಜ್ ಆಗಿದ್ದಾರೆ ಜೊತೆಗೆ ಕೆಲವು ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಕಪೂರ್ ‘ಸಿಂಘಂ ಅಗೇನ್’, ‘ಮೇರೆ ಪತ್ನಿ ಕಾ ರೀಮೇಕ್’ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ