ನಟಿ, ಸಂಸದೆ ಕಂಗನಾ ರನೌತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೇ ಈ ಹಿಂದೆ ಹೇಳಿದ್ದಂತೆ ಅವರ ಇರುವ ಹಣ, ಆಸ್ತಿಗಳನ್ನು ಅಡಮಾನವಿಟ್ಟು ‘ಎಮರ್ಜೆನ್ಸಿ’ ಸಿನಿಮಾ ನಿರ್ಮಿಸಿದ್ದಾರೆ. ಆದರೆ ಈ ಸಿನಿಮಾದ ಬಿಡುಗಡೆಗೆ ತೀವ್ರ ಅಡ್ಡಿ-ಆತಂಕ ಎದುರಾಗಿದೆ. ಕಂಗನಾ, ಬಿಜೆಪಿ ಸಂಸದೆಯಾಗುವ ಮುನ್ನವೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ಆದರೆ ಚುನಾವಣೆ ಟಿಕೆಟ್ ಸಿಕ್ಕಿದ ಕಾರಣ ಬಿಡುಗಡೆ ತಡ ಮಾಡಿದ್ದರು. ಈಗ ಅಂದುಕೊಂಡಂತೆ ಸಂಸದೆ ಆಗಿದ್ದಾರೆ ಆದರೆ ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ.
‘ಎಮರ್ಜೆನ್ಸಿ’ ಸಿನಿಮಾ, ಇಂದಿರಾ ಗಾಂಧಿ ಕುರಿತಾದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾ ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಸಿಖ್ ಸಮುದಾಯದವರು ಸಿನಿಮಾದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಖ್ ಸಮುದಾಯದ ವಿರೋಧದ ನಡುವೆಯೂ ಸಿನಿಮಾ ಬಿಡುಗಡೆ ದಿನಾಂಕವನ್ನು ಕಂಗನಾ ರನೌತ್ ಘೋಷಣೆ ಮಾಡಿದ್ದರು. ಆದರೆ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್ಸಿ ಹಿಂದೇಟು ಹಾಕಿದೆ.
ಸಿಬಿಎಫ್ಸಿ, ಬೇಗನೆ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸೂಚನೆ ನೀಡುವಂತೆ ‘ಎಮರ್ಜೆನ್ಸಿ’ ಸಿನಿಮಾದ ನಟಿ, ನಿರ್ದೇಶಕಿ, ನಿರ್ಮಾಪಕಿಯೂ ಆಗಿರುವ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕಂಗನಾ ಮನವಿಯನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಪ್ರಮಾಣ ಪತ್ರದ ವಿಷಯದಲ್ಲಿ ಸಿಬಿಎಫ್ಸಿಗೆ ಸೂಚನೆಗಳನ್ನು ನೀಡಲಾಗದು ಎಂದು ಕಂಗನಾರ ಅರ್ಜಿಯನ್ನು ತಳ್ಳಿ ಹಾಕಿದೆ. ‘ಮಧ್ಯ ಪ್ರದೇಶ ಹೈಕೋರ್ಟ್ ಸಿಬಿಎಫ್ಸಿಗೆ ‘ಎಮರ್ಜೆನ್ಸಿ’ ಸಿನಿಮಾದ ಕುರಿತಾಗಿ ಸೂಚನೆ ನೀಡಿರುವ ಕಾರಣ, ತಾನು ‘ಎಮರ್ಜೆನ್ಸಿ’ ಸಿನಿಮಾದ ಪ್ರಮಾಣ ಪತ್ರ ಬೇಗನೆ ನೀಡುವಂತೆ ಸೂಚನೆ ನೀಡಲಾಗದು’ ಎಂದಿದೆ.
ಇದನ್ನೂ ಓದಿ:ಇಂದಿರಾ ಗಾಂಧಿಯಂತೆ ಮಮತಾರನ್ನು ಹತ್ಯೆ ಮಾಡಿ ಎಂದಿದ್ದ ವಿದ್ಯಾರ್ಥಿನಿಯ ಬಂಧನ
ಕಂಗನಾ ರನೌತ್ರ ‘ಎಮರ್ಜೆನ್ಸಿ’ ಸಿನಿಮಾದ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲಯ, ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ಮೊದಲು ಅರ್ಜಿದಾರರು ಎತ್ತಿರುವ ಅನುಮಾನಗಳಿಗೆ ಸ್ಪಷ್ಟನೆ ನೀಡಿಯೇ ಪ್ರಮಾಣ ಪತ್ರ ನೀಡಬೇಕು ಎಂದಿದೆ. ಇದೇ ಕಾರಣಕ್ಕೆ ಸಿಬಿಎಫ್ಸಿ, ‘ಎಮರ್ಜೆನ್ಸಿ’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿದೆ.
ಕೆಲ ಮೂಲಗಳ ಪ್ರಕಾರ, ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಇನ್ನೂ ಕೆಲವು ಕಾಂಗ್ರೆಸ್ ರಾಜಕಾರಣಿಗಳು ಹಾಗೂ ಸಿಖ್ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ. ಎಲ್ಲವನ್ನು ಅತಿರೇಕದ ದೃಷ್ಟಿಯಿಂದಲೇ ಕಂಗನಾ ತಮ್ಮ ಸಿನಿಮಾದಲ್ಲಿ ತೋರಿಸಿರುವ ಕಾರಣ ಸಿಬಿಎಫ್ಸಿ, ಪ್ರಮಾಣ ಪತ್ರ ನೀಡಲು ತಡ ಮಾಡುತ್ತಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ