ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್‌ಗೆ (Aryan Khan) ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಾಮೀನು ಷರತ್ತನ್ನು ಮಾರ್ಪಡಿಸಲು ಕೋರಿ ಆರ್ಯನ್ ಖಾನ್ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಪುರಸ್ಕರಿಸಿದೆ. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಅದು ಆದೇಶ ಹೊರಡಿಸಿದೆ. ವಿನಾಯಿತಿ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಆರ್ಯನ್ ಖಾನ್, ಜಾಮೀನು ಷರತ್ತಿನ ಭಾಗವಾಗಿ ಪ್ರತಿ ಶುಕ್ರವಾರ ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಬಾಂಬೆ ಹೈಕೋರ್ಟ್, ಆರ್ಯನ್ ಖಾನ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ, ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಎನ್ಸಿಬಿಗೆ ಹಾಜರಾಗಬೇಕು ಎಂದು ಹೇಳಿತ್ತು. ಅದರಂತೆ ಆರ್ಯನ್ ಖಾನ್ ಅವರು ನವೆಂಬರ್ 5, 12, 19, 26 ಮತ್ತು ಡಿಸೆಂಬರ್ 3 ಮತ್ತು 10 ರಂದು ಎನ್‌ಸಿಬಿ ಮುಂದೆ ಹಾಜರಾಗಿದ್ದರು.
ಎನ್‌ಸಿಬಿಯ ಮೂರು ಪುಟಗಳ ಪ್ರತಿಕ್ರಿಯೆ ಮತ್ತು ಆರ್ಯನ್ ಖಾನ್ ಅವರ ಮನವಿಯನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಎನ್‌ಡಬ್ಲ್ಯೂ ಸಾಂಬ್ರೆ ಅವರು ಆರ್ಯನ್ ಖಾನ್ ಅವರನ್ನು ಎನ್‌ಸಿಬಿಯಿಂದ ಯಾವಾಗ ಮತ್ತು ಎಲ್ಲಿಗೆ ಕರೆದರೂ ಸಾಕಷ್ಟು ಸಮಯ ನೀಡಿದರೆ ಪ್ರಯಾಣಿಸಲು ತೊಂದರೆಯಿಲ್ಲ ಎಂದು ತಿಳಿಸಿದ್ದನ್ನು ಗಮನಿಸಿದರು. ಮತ್ತು ಈ ಕುರಿತು ಕೋರ್ಟ್ ಮಾಹಿತಿ ನೀಡಿ, ಎನ್‌ಸಿಬಿ ಕಚೇರಿ ಹೊರತಾದ ಯಾವುದೇ ಸ್ಥಳಗಳಿಗೆ ಆರ್ಯನ್ ತೆರಳುವ ಮುನ್ನ ಡ್ರಗ್ ಕ್ರೂಸ್ ಪ್ರಕರಣದ ತನಿಖಾಧಿಕಾರಿಗೆ ತಿಳಿಸಬೇಕು ಎಂದು ಆದೇಶಿಸಿದೆ.
ಆರ್ಯನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿ ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಯಲ್ಲಿ ಹಾಜರಾತಿಯನ್ನು ಗುರುತಿಬೇಕು ಎನ್ನುವ ಆದೇಶ ತೆಗೆಯಬೇಕು ಎಂದು ಅವರು ಕೋರಿದ್ದರು.
ಬುಧವಾರ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ‘‘ಪ್ರಕರಣದಲ್ಲಿ ಏನೂ ಆಗುತ್ತಿಲ್ಲ, ಅವರು (ಖಾನ್) ಸಹಕರಿಸುತ್ತಾರೆ ಮತ್ತು ಎನ್‌ಸಿಬಿ ಬಯಸಿದಾಗ ಬಂದು ಹೋಗುತ್ತಾರೆ. ಈಗ ದೆಹಲಿಯಿಂದ ತನಿಖೆ ನಡೆಯುತ್ತಿದೆ, ಒಂದು ವೇಳೆ ಅವರು ದೆಹಲಿಗೆ ಬರಬೇಕೆಂದು ಬಯಸಿದರೆ ಆರ್ಯನ್ ಅಲ್ಲಿಗೂ ತೆರಳುತ್ತಾರೆ. ಅವರು ಎನ್‌ಸಿಬಿ ಕಚೇರಿಗೆ ಹೋಗಬೇಕಾದಾಗಲೆಲ್ಲಾ ಭಾರಿ ಪೊಲೀಸ್ ನಿಯೋಜನೆ ಇರುತ್ತದೆ. ಮುಂಬೈ ನಗರಕ್ಕೆ ಇತರ ರೀತಿಯಲ್ಲಿ ಸಹಾಯ ಮಾಡಲು ಇದನ್ನು ಕಡಿತ ಮಾಡಬಹುದು’’ ಎಂದಿದ್ದರು.
ಎನ್‌ಸಿಬಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸತ್, ಜಾಮೀನು ಷರತ್ತನ್ನು ಮಾರ್ಪಾಡು ಮಾಡುವಲ್ಲಿ ಎನ್ಸಿಬಿಗೆ ಯಾವುದೇ ತೊಂದರೆ ಇಲ್ಲ. ಆದರೆ ಆರ್ಯನ್ ಅವರು ದೆಹಲಿ ಅಥವಾ ಮುಂಬೈಗೆ ಕರೆದಾಗ ಹಾಜರಾಗಬೇಕು ಎಂದರು. ಅಂತಿಮವಾಗಿ ನ್ಯಾಯಾಲಯ ಜಾಮೀನು ಷರತ್ತನ್ನು ಸಡಿಲಿಸಿ ಆದೇಶ ನೀಡಿದೆ.
ಇದನ್ನೂ ಓದಿ:
‘ನಮ್ಮ ಊರಿಗೆ ಬಂದು ತುಂಬಾ ಸಮಯವಾಯ್ತು’; ಬೆಂಗಳೂರ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
Raj Kundra: ಅಶ್ಲೀಲ ಚಿತ್ರ ಪ್ರಕರಣ; ರಾಜ್ ಕುಂದ್ರಾಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್