ಮೋದಿ ಬಗ್ಗೆ ಜೋಕ್, ಕುನಾಲ್ ಕಾಮ್ರಾಗೆ ನಿಷೇಧ ಹೇರಿದ ಬುಕ್​ಮೈ ಶೋ

Kunal Kamra: ಇತ್ತೀಚೆಗೆ ಭಾರತದ ಸ್ಟಾಂಡಪ್ ಕಮಿಡಿಯನ್​ಗಳ ಟೈಮು ಸರಿ ಇದ್ದಂತಿಲ್ಲ. ಕೆಲ ವಾರಗಳ ಹಿಂದೆ ಸಮಯ್ ರೈನಾ ಸೇರಿದಂತೆ ಇನ್ನೂ ಕೆಲ ಕಮಿಡಿಯನ್​ಗಳ ಮೇಲೆ ಕೇಸು ದಾಖಲಾಗಿತ್ತು. ಈಗ ಕುನಾಲ್ ಕಾಮ್ರಾ ಮೇಲೆ ಕೇಸು ದಾಖಲಾಗಿದೆ. ಇದರ ಜೊತೆಗೆ ಕುನಾಲ್ ಕಾಮ್ರಾ ಅವರನ್ನು ಬುಕ್ ಮೈ ಶೋ ಬ್ಯಾನ್ ಮಾಡಿದ್ದು, ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದಿದೆ.

ಮೋದಿ ಬಗ್ಗೆ ಜೋಕ್, ಕುನಾಲ್ ಕಾಮ್ರಾಗೆ ನಿಷೇಧ ಹೇರಿದ ಬುಕ್​ಮೈ ಶೋ
Kunal Kamra

Updated on: Apr 05, 2025 | 3:51 PM

ಇತ್ತೀಚೆಗೆ ಕಮಿಡಿಯನ್​ಗಳ ಸಮಯ ಸರಿಯಿದ್ದಂತಿಲ್ಲ. ನಗಿಸಲು ಹೇಳುವ ಜೋಕುಗಳು ಕಮಿಡಿಯನ್​ಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಕೆಲ ವಾರಗಳ ಹಿಂದಷ್ಟೆ ಕಾಮಿಡಿ ಶೋ ‘ಇಂಡಿಯಾ ಗಾಟ್ ಲೇಟೆಂಟ್​’ನಲ್ಲಿ ರಣ್ವೀರ್ ಅಲ್ಹಾಬಾದಿಯಾ ಹೇಳಿದ ಒಂದು ಕೆಟ್ಟ ಜೋಕಿನಿಂದ ರಾದ್ಧಾಂತವೇ ಆಯ್ತು. ಕಮಿಡಿಯನ್ ರಣ್ವೀರ್ ಅಲ್ಹಾಬಾದಿಯಾ, ಸಮಯ್ ರೈನಾ (Samay Raina) ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಯ್ತು. ಇದೀಗ ಕಮಿಡಿಯನ್ (Comedian) ಕುನಾಲ್ ಕಾಮ್ರಾ (Kunal Kamra) ಸರದಿ. ಕುನಾಲ್ ಕಾಮ್ರಾರ ಇತ್ತೀಚೆಗಿನ ಕಾಮಿಡಿ ಶೋ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದರ ನಡುವೆ ಬುಕ್ ಮೈ ಶೋ, ಕುನಾಲ್ ಮೇಲೆ ನಿಷೇಧ ಹೇರಿದ್ದು, ಅವರ ಯಾವುದೇ ಶೋನ ಟಿಕೆಟ್​ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ. ಜೊತೆಗೆ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತನ್ನ ವೆಬ್​ಸೈಟ್​ನಿಂದ ಅಳಿಸಿ ಹಾಕಿದೆ.

ಇತ್ತೀಚೆಗೆ ಕಾಮಿಡಿ ಶೋ ಒಂದನ್ನು ಮಾಡಿದ್ದ ಕುನಾಲ್ ಕಾಮ್ರಾ ಅದರ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪೊಟಿಕಲ್ ಕಾಮಿಡಿಯನ್ ಆಗಿರುವ ಕುನಾಲ್ ಕಾಮ್ರಾ ಆ ಶೋನಲ್ಲಿ ಏಕನಾಥ್ ಶಿಂಧೆ, ನರೇಂದ್ರ ಮೋದಿ, ಅಮಿತ್ ಶಾ, ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಹಾಸ್ಯ ಮಾಡಿದ್ದರು. ಕುನಾಲ್ ಕಾಮ್ರಾರ ವಿಡಿಯೋ ಸಖತ್ ವೈರಲ್ ಆಗಿತ್ತು. ಎರಡೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿತ್ತು. ಜೊತೆಗೆ ವಿಡಿಯೋ ನೋಡಿದ ಜನ ಧಾರಾಳವಾಗಿ ಹಣವನ್ನು ಸಹ ಕುನಾಲ್​ಗೆ ನೀಡಿದ್ದರು. ಆದರೆ ವಿಡಿಯೋ ನೋಡಿದ ಶೀವಸೇನಾ (ಶಿಂಧೆ ಬಣ) ರೊಚ್ಚಿಗೆದ್ದಿದ್ದು, ಶೋ ನಡೆದ ಮುಂಬೈನ ‘ಹಾಬಿಟ್’ ಆಡಿಟೋರಿಯಂಗೆ ನುಗ್ಗಿ ದಾಂಧಲೆ ಎಬ್ಬಿಸಿ, ಗಲಾಟೆ ಮಾಡಿದ್ದರು.

ಬಳಿಕ ಶಿವಸೇನೆಯು ಪೊಲೀಸರಿಗೆ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಕುನಾಲ್​ ಕಾಮ್ರಾಗೆ ಮೂರು ಬಾರಿ ಸಮನ್ಸ್ ಸಹ ನೀಡಿದ್ದಾರೆ. ಆದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿರುವ ಕುನಾಲ್ ಕಾಮ್ರಾ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಈ ನಡುವೆ ಶಿವಸೇನಾ (ಶಿಂಧೆ ಬಣ)ದ ಯೂಥ್​ ವಿಂಗ್​ನ ಮುಖಂಡ ರಾಹುಲ್ ಕನಾಲ್, ಬುಕ್​ ಮೈ ಶೋಗೆ ಪತ್ರ ಬರೆದು, ಕುನಾಲ್ ಕಾಮ್ರಾರ ಮುಂದಿನ ಶೋಗಳ ಟಿಕೆಟ್ ಅನ್ನು ಮಾರಾಟ ಮಾಡದಂತೆ ಮನವಿ ಮಾಡಿದ್ದರು.

ಇದನ್ನೂ ಓದಿ:ಜರ್ಮನಿಯಲ್ಲಿ ಪ್ರಧಾನಿ ಎದುರು ದೇಶಭಕ್ತಿ ಗೀತೆ ಹಾಡಿದ್ದ ಬಾಲಕನ ತಂದೆ ಫುಲ್​ ಗರಂ; ಟ್ವೀಟ್ ಡಿಲೀಟ್ ಮಾಡಿದ ಹಾಸ್ಯನಟ ಕುನಾಲ್ ಕಾಮ್ರಾ

ಶಿವಸೇನಾದ ಪತ್ರಕ್ಕೆ ಸ್ಪಂದಿಸಿರುವ ಬುಕ್ ಮೈ ಶೋ, ಕುನಾಲ್ ಕಾಮ್ರಾ ಬಗ್ಗೆ ತನ್ನ ವೆಬ್ ಸೈಟ್​ನಲ್ಲಿ ದಾಖಲಾಗಿದ್ದ ಎಲ್ಲ ಮಾಹಿತಿಯನ್ನು ಅಳಿಸಿ ಹಾಕಿದೆ. ಅದರ ಜೊತೆಗೆ ಕುನಾಲ್ ಅವರ ಮುಂದಿನ ಯಾವುದೇ ಶೋನ ಟಿಕೆಟ್ ಅನ್ನು ತನ್ನ ವೆಬ್ ಸೈಟ್ ಮೂಲಕ ಮಾರಾಟ ಮಾಡುವುದಿಲ್ಲ ಎಂದಿದೆ. ಕಾಮ್ರಾಗೆ ನಿಷೇಧ ಹೊಸದೇನೂ ಅಲ್ಲ. ಈ ಹಿಂದೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಕೆಣಕಿದ್ದಕ್ಕೆ ಹಲವು ವಿಮಾನಯಾನ ಸಂಸ್ಥೆಗಳು ಕಾಮ್ರಾ ಮೇಲೆ ನಿಷೇಧ ಹೇರಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sat, 5 April 25