ಸೈಫ್ ಅಲಿ ಖಾನ್ಗೆ ಇರಿದವನ ಜಾಮೀನು ಅರ್ಜಿಗೆ ವಿರೋಧ, ಮಹತ್ವದ ಅಂಶ ಬೆಳಕಿಗೆ
Saif Ali Khan: ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ ಆರೋಪಿ ಷರೀಫುಲ್ ಫಕೀರ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಮುಂಬೈ ಪೊಲೀಸರು ತಕರಾರು ಸಲ್ಲಿಸಿದ್ದಾರೆ. ಪ್ರಕರಣದ ಕೆಲ ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿರಿಸಿರುವ ಪೊಲೀಸರು, ಆರೋಪಿಗೆ ಜಾಮೀನು ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಜನವರಿ ತಿಂಗಳಿನಲ್ಲಿ ಇರಿತಕ್ಕೆ ಒಳಗಾಗಿದ್ದರು. ಈ ಘಟನೆ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಸೈಫ್ ಅಲಿ ಖಾನ್ಗೆ ಹಲವು ಬಾರಿ ಚಾಕು ಇರಿಯಲಾಗಿತ್ತು. ಸೈಫ್ ಅಲಿ ಖಾನ್, ಕೆಲ ದಿನ ಆಸ್ಪತ್ರೆಯಲ್ಲಿದ್ದು ಆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದರು. ಚಾಕು ಇರಿದ ಆರೋಪಿ ಶಾರಿಫುಲ್ ಫಕೀರ್ ಅನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಇದೀಗ ಜೈಲಿನಲ್ಲಿದ್ದಾನೆ.
ಆರೋಪಿ ಶಾರಿಫುಲ್ ಫಕೀರ್ ಇತ್ತೀಚೆಗಷ್ಟೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪೊಲೀಸರು, ಆರೋಪಿಗೆ ಜಾಮೀನು ನೀಡಬಾರದೆಂದು ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ಅರ್ಜಿಯಲ್ಲಿ ಸೈಫ್ ಅಲಿ ಖಾನ್, ಚಾಕು ಇರಿತಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ಮುಂಬೈ ಪೊಲೀಸರು ಹೇಳಿರುವಂತೆ, ಸೈಫ್ ಅಲಿ ಖಾನ್, ದೇಹದಿಂದ ಹೊರಗೆ ತೆಗೆದ ಚಾಕುವಿನ ತುಂಡು ಹಾಗೂ ಆರೋಪಿಯನ್ನು ಬಂಧಿಸಿದಾಗ ಆತನಿಂದ ವಶಪಡಿಸಿಕೊಂಡ ಚಾಕು ಒಂದೇ ಆಗಿದೆ ಎಂದಿದ್ದಾರೆ.
ಇದರ ಜೊತೆಗೆ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದು ಶಾರುಫುಲ್ ಫಕೀರನೇ ಎಂಬುದಕ್ಕೆ ಸಾಕಷ್ಟು ಇತರೆ ಸಾಕ್ಷ್ಯಗಳನ್ನು ಕಲೆ ಹಾಕಿರುವುದಾಗಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಸಹ ಹೇಳಿದ್ದಾರೆ. ಇದರ ಜೊತೆಗೆ ಒಂದೊಮ್ಮೆ ಆರೋಪಿಗೆ ಜಾಮೀನು ನೀಡಿದರೆ, ಬಾಂಗ್ಲಾದೇಶದಿಂದ ಅತಿಕ್ರಮವಾಗಿ ದೇಶ ಪ್ರವೇಸಿರುವ ಆಸಾಮಿಯು ಪರಾರಿ ಆಗುವ ಸಾಧ್ಯತೆ ಇದೆ. ಜೊತೆಗೆ ಸಾಕ್ಷ್ಯ ನಾಶವನ್ನೂ ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಮಗನ ಟ್ರೋಲ್ ಮಾಡಿದ ಒರಿ
ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ಪ್ರಕರಣದ ಆರೋಪಿ ಶಾರುಫುಲ್ ಫಕೀರ, ತಾನು ದಾಳಿ ಮಾಡಿಲ್ಲವೆಂದು, ಪೊಲೀಸರು ಸುಖಾ ಸುಮ್ಮನೆ ತಮ್ಮನ್ನು ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಹೇಳಿರುವಂತೆ, ಸಿಸಿಟಿವಿ ಕ್ಯಾಮೆರಾನಲ್ಲಿ ಸೆರೆಯಾಗಿರುವ ವ್ಯಕ್ತಿ ಹಾಗೂ ತಾವು ಬಂಧಿಸಿರುವ ವ್ಯಕ್ತಿ ಒಬ್ಬನೇ ಎಂದಿದೆ. ಫೇಶಿಯಲ್ ರೆಕೆಗ್ನಿಷನ್ ತಂತ್ರಜ್ಞಾನದ ಮೂಲಕ ಅದನ್ನು ಖಾತ್ರಿ ಮಾಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಈ ಹಿಂದೆಯೇ ಹೇಳಿದ್ದಾರೆ.
ಜನವರಿ 16 ರಂದು ತಡರಾತ್ರಿ, ಸೈಫ್ ಅಲಿ ಖಾನ್ ವಾಸಿಸುವ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ ಅಗಂತುಕ ವ್ಯಕ್ತಿ, ಸೈಫ್ ಅಲಿ ಖಾನ್ ಪುತ್ರನ ರೂಂಗೆ ನುಗ್ಗಿದ ಆತನ ತಡೆಯಲು ಸೈಫ್ ಅಲಿ ಖಾನ್ ಪ್ರಯತ್ನಿಸಿದಾಗ ಚಾಕುವಿನಿಂದ ದಾಳಿ ಮಾಡಿದ್ದ, ಸುಮಾರು 10ಕ್ಕೂ ಹೆಚ್ಚು ಬಾರಿ ಸೈಫ್ ಅಲಿ ಖಾನ್ ಮೇಲೆ ಆತ ದಾಳಿ ಮಾಡಿದ್ದ. ಆಟೋದವರೊಬ್ಬರ ನೆರವಿನೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಿದ್ದರು. ಕೆಲವೇ ದಿನಗಳಲ್ಲಿ ಕ್ಷೇಮವಾಗಿ ಮನೆಗೆ ಮರಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ