‘ಅವರಿಗೂ ಮನೆ ಇದೆ’; ಡ್ರೈವರ್ ಏಕಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ದಾಳಿಯ ಬಳಿಕ ಆಟೋದಲ್ಲಿ ಆಸ್ಪತ್ರೆಗೆ ಹೋದ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ಮನೆಯಲ್ಲಿ ಚಾಲಕ ಇಲ್ಲದಿರುವುದು ಮತ್ತು ತುರ್ತು ಪರಿಸ್ಥಿತಿಯಿಂದಾಗಿ ಆಟೋ ಬಳಸಿದ್ದಾಗಿ ಹೇಳಿದ್ದಾರೆ. ಗಾಯದ ತೀವ್ರತೆ ಮತ್ತು ಚೇತರಿಕೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಸೈಫ್ ಅಲಿ ಖಾನ್ ಅವರ ಮೇಲೆ ಜನವರಿ 16ರಂದು ದಾಳಿ ನಡೆಯಿತು. ಕಳ್ಳತನಕ್ಕೆ ಬಂದ ವ್ಯಕ್ತಿ ದಾಳಿ ಮಾಡಿದ್ದ. ಚಾಕುವಿನಿಂದ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದ. ಈ ದಾಳಿ ಬಳಿಕ ಸಾಕಷ್ಟು ಚರ್ಚೆ ಹುಟ್ಟಿತ್ತು. ಸೈಫ್ ಅಲಿ ಖಾನ್ ಅವರ ಬಳಿ ಐಷಾರಾಮಿ ಕಾರಿದ್ದರೂ ಆಟೋದಲ್ಲಿ ತೆರಳಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಈಗ ಸೈಫ್ ಅಲಿ ಖಾನ್ ಅವರು ಉತ್ತರ ನೀಡಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ಆರು ಬಾರಿ ಅವರ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಎರಡು ಗಾಯ ಗಂಭೀರ ಆಗಿತ್ತು. ಅವರಿಗೆ ಮುಂಬೈನ ಲೀಲಾವತಿ ಹಾಸ್ಪಿಟಲ್ನಲ್ಲಿ ಸರ್ಜರಿ ನಡೆದಿದೆ. ಈಗ ಘಟನೆ ಬಗ್ಗೆ, ಆಟೋದಲ್ಲಿ ತೆರಳಿದ್ದು ಏಕೆ ಎಂಬ ಬಗ್ಗೆ ಸೈಫ್ ಅಲಿ ಖಾನ್ ಅವರು ದೆಹಲಿ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ಸೈಫ್ ಅಲಿ ಖಾನ್ ಬೆನ್ನಿನ್ನಲ್ಲಿ ಒಂದೂವರೆಗೆ ಗಂಟೆ ಚಾಕುವಿನ ಪೀಸ್ ಇಟ್ಟುಕೊಂಡು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಎದ್ದಿದೆ. ನಾನು ಅಷ್ಟೆಲ್ಲಾ ಹೊತ್ತು ಇರಲಿಲ್ಲ. ದಾಳಿ ಬಳಿಕ ಆಸ್ಪತ್ರೆಗೆ ತೆರಳಿದೆ. ಸೈಫ್ ರಿಕ್ಷಾದಲ್ಲಿ ತೆರಳಿದ್ದೇಕೆ ಎನ್ನುವ ಪ್ರಶ್ನೆಯೂ ಎದ್ದಿದೆ’ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.
‘ಸೈಫ್ ಅಲಿ ಖಾನ್ ಮನೆಯಲ್ಲಿ ಡ್ರೈವರ್ ಕೂಡ ಇರಲಿಲ್ಲವಾ ಎಂದು ಎಲ್ಲರೂ ಕೇಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಡ್ರೈವರ್ ಉಳಿದುಕೊಳ್ಳೊದಿಲ್ಲ. ಎಲ್ಲರಿಗೂ ಅವರದ್ದೇ ಆದ ಮನೆ ಇದೆ. ನಮ್ಮ ಮನೆಯಲ್ಲಿ ಕೆಲಸದವರ ಪೈಕಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಕಾರು ಚಾಲಕರು ಇರೋದಿಲ್ಲ. ಕೆಲವೊಮ್ಮೆ ಮಧ್ಯರಾತ್ರಿ ಎಲ್ಲಾದರೂ ಹೋಗೋದಿದ್ದರೆ ಅವರ ಬಳಿ ಉಳಿದುಕೊಳ್ಳಿ ಎಂದು ಹೇಳುತ್ತೇವೆ’ ಎಂದಿದ್ದಾರೆ ಸೈಫ್ ಅಲಿ ಖಾನ್. ಈ ಮೂಲಕ ಎಲ್ಲಾ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
‘ನನಗೆ ಕೀ ಸಿಕ್ಕಿದ್ದರೆ ನಾನೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಅದೃಷ್ಟವಾಶತ್ ಕೀ ಸಿಗಲಿಲ್ಲ! ನಾನು ಮೂರು ಗಂಟೆಗೆ ಚಾಲಕರಿಗೆ ಕರೆ ಮಾಡಿ ಬನ್ನಿ ಎಂದು ಹೇಳಬಹುದಿತ್ತು. ಆದರೆ, ಅವರು ಬರೋಕೆ ಸಮಯ ಬೇಕಲ್ಲ. ನಾನು ತುರ್ತಾಗಿ ಆಸ್ಪತ್ರೆಗೆ ಸೇರಬೇಕಿತ್ತು’ ಎಂದು ವಿವರಿಸಿದ್ದಾರೆ ಸೈಫ್ ಅಲಿ ಖಾನ್.
ಇದನ್ನೂ ಓದಿ: ಹಲ್ಲೆ ಬಳಿಕ ಮೊದಲ ಬಾರಿಗೆ ಈವೆಂಟ್ಗೆ ಬಂದ ಸೈಫ್ ಅಲಿ ಖಾನ್; ಕಾಣಿಸ್ತಿದೆ ಗಾಯದ ಗುರುತು
‘ನಾನು ಬೇಗ ರಿಕವರಿ ಆದ ಬಗ್ಗೆ ಅನೇಕರು ನಂಬುತ್ತಿಲ್ಲ. ಇದರ ಬಗ್ಗೆ ಅನೇಕರು ಫನ್ ಮಾಡುತ್ತಿದ್ದಾರೆ. ಆ ಬಗ್ಗೆ ನನಗೆ ಬೇಸರ ಇಲ್ಲ’ ಎಂದಿದ್ದಾರೆ ಅವರು. ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಐದು ದಿನ ಇದ್ದರು. ಚಿಕಿತ್ಸೆ ಪಡೆದು ಮರಳಿದ ಅವರು ಫಿಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Mon, 10 February 25