ಪಾಪ.. ನನಗಿಂತಲೂ ಅವನ ಜೀವನ ಹಾಳಾಗಿದೆ: ಕಳ್ಳನಿಗೂ ಕರುಣೆ ತೋರಿಸಿದ ಸೈಫ್ ಅಲಿ ಖಾನ್
ನಟ ಸೈಫ್ ಅಲಿ ಖಾನ್ ಅವರು ತಮ್ಮ ಮನೆಯಲ್ಲಿ ನಡೆದ ಭೀಕರ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮನೆಗೆ ನುಗ್ಗಿ ಚಾಕು ಹಾಕಿದ ಕಳ್ಳನ ಬಗ್ಗೆಯೂ ಅವರು ಕರುಣೆ ತೋರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಳ್ಳರ ದಾಳಿ ವೇಳೆ ಚೂರಿ ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರು ಈಗ ಚೇತರಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ನಡೆದ ಆ ಕಹಿ ಘಟನೆಯ ಬಗ್ಗೆ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಡೆಲ್ಲಿ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕದಿಯಲು ಮನೆಯೊಳಗೆ ನುಗ್ಗಿದ್ದ ಕಳ್ಳ ದಾಳಿ ಮಾಡಿದಾಗ ಸೈಫ್ ಅವರಿಗೆ ಹಲವು ಗಾಯಗಳು ಆಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಿದ್ದರೂ ಕೂಡ ಆ ಕಳ್ಳನ ಬಗ್ಗೆ ಸೈಫ್ ಅಲಿ ಖಾನ್ ಅವರು ಕರುಣೆ ತೋರಿಸಿದ್ದಾರೆ.
ಸೈಫ್ ಅಲಿ ಖಾನ್ ಅವರು ಇನ್ಮುಂದೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ತಮ್ಮ ರಕ್ಷಣೆಗಾಗಿ ವೆಪನ್ ಇಟ್ಟುಕೊಳ್ಳಬೇಕು ಎಂದು ಕೆಲವರು ಅಭಿಪ್ರಾಯ ತಿಳಿಸಿದ್ದುಂಟು. ಆ ಬಗ್ಗೆ ಕೇಳಿದ ಪ್ರಶ್ನೆಗೆ ಸೈಫ್ ಉತ್ತರಿಸಿದ್ದಾರೆ. ‘ಏನೂ ಬದಲಾಗಲ್ಲ. ನನಗೆ ಅಪಾಯ ಇದೆ ಎಂದು ನಾನು ಭಾವಿಸಿಲ್ಲ. ಕಳ್ಳ ಪ್ಲ್ಯಾನ್ ಮಾಡಿ ಈ ದಾಳಿ ಮಾಡಿಲ್ಲ. ನನಗೆ ಅನಿಸಿದ ಹಾಗೆ ಆತನ ದರೋಡೆ ಪ್ರಯತ್ನ ವಿಫಲ ಆಗಿದೆ. ಆತ ಪಾಪ.. ನನಗಿಂತಲೂ ಅವನ ಜೀವನ ಹಾಳಾಗಿದೆ’ ಎಂದು ಸೈಫ್ ಅಲಿ ಖಾನ್ ವಿವರಿಸಿದ್ದಾರೆ.
ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಬಳಿಕ ಸೆಲೆಬ್ರಿಟಿಗಳು, ಉದ್ಯಮಿಗಳು ತಮ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಸೈಫ್ ಅಲಿ ಖಾನ್ ಅವರು ಗನ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಒಂದು ವೇಳೆ ಮನೆಯಲ್ಲಿ ಗನ್ ಇದ್ದರೆ ಅದನ್ನು ಮಕ್ಕಳು ಮುಟ್ಟುವ ಸಾಧ್ಯತೆ ಇರುತ್ತದೆ. ಗನ್ ಇದ್ದಲ್ಲಿ ಅಪಾಯ ಖಂಡಿತವಾಗಿಯೂ ಇರುತ್ತದೆ ಎಂಬ ಕಾರಣದಿಂದ ಸೈಫ್ ಅಲಿ ಖಾನ್ ಅವರು ಗನ್ ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ಅವರಿಗೂ ಮನೆ ಇದೆ’; ಡ್ರೈವರ್ ಏಕಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸೈಫ್ ಅಲಿ ಖಾನ್
ಕಳ್ಳನಿಂದ ಚಾಕು ಇರಿತಕ್ಕೆ ಒಳಗಾದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಐದು ದಿನ ದಾಖಲಾಗಿದ್ದರು. ಅವರಿಗೆ 2 ಶಸ್ತ್ರಚಿಕಿತ್ಸೆ ಮಾಡಲಾಯಿತು. ಬೆನ್ನಿನಲ್ಲಿ ಸಿಕ್ಕಿಕೊಂಡಿದ್ದ ಚಾಕು ಚೂರನ್ನು ಹೊರಗೆ ತೆಗೆಯಲಾಯಿತು. ಕುತ್ತಿಗೆಗೂ ಸರ್ಜರಿ ಮಾಡಲಾಯಿತು. ಡಿಸ್ಚಾರ್ಜ್ ಆದ ನಂತರ ಅವರು ಮೊದಲ ಬಾರಿಗೆ ನೆಟ್ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ‘ಜ್ಯೂವೆಲ್ ಥೀಫ್’ ಸಿನಿಮಾದ ಪ್ರಚಾರ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.