ಬಿಡುಗಡೆ ಆದ ಮೂರೇ ದಿನಕ್ಕೆ ಉಚಿತ ಟಿಕೆಟ್ ಆಫರ್ ಘೋಷಿಸಿದ ‘ದಿ ವ್ಯಾಕ್ಸಿನ್ ವಾರ್’
The Vaccine War: 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಿಡುಗಡೆ ಆದಂದಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಕುಟುಂತ್ತಲೇ ಸಾಗುತ್ತಿದೆ. ಸಿನಿಮಾಕ್ಕೆ ಪ್ರಚಾರ ನೀಡುವ ಉದ್ದೇಶದಿಂದ ಉಚಿತ ಟಿಕೆಟ್ ಆಫರ್ ಘೋಷಿಸಲಾಗಿದೆ.
‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರೀತಿಯಲ್ಲಿ ದೊಡ್ಡ ಜಯವಿರಲಿ ಸಾಮಾನ್ಯ ಯಶಸ್ಸು ಸಹ ಸಿನಿಮಾಕ್ಕೆ ಕಷ್ಟವಾಗಿದೆ. ಇದೇ ಕಾರಣಕ್ಕೆ ಸಿನಿಮಾವನ್ನು ಗೆಲ್ಲಿಸಿಕೊಳ್ಳಲು ವಿವಿಧ ಪ್ರಯತ್ನಗಳನ್ನು ವಿವೇಕ್ ಅಗ್ನಿಹೋತ್ರಿ ಮಾಡುತ್ತಿದ್ದು, ಉಚಿತ ಟಿಕೆಟ್ ಆಫರ್ ಅನ್ನು ಸಹ ನೀಡುತ್ತಿದ್ದಾರೆ.
ಹೌದು, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಒಂದು ಟಿಕೆಟ್ ಖರೀದಿ ಮಾಡಿದರೆ ಒಂದು ಟಿಕೆಟ್ ಉಚಿತವಾಗಿ ಸಿಗಲಿದೆ. ಅಲ್ಲಿಗೆ ಒಂದು ಟಿಕೆಟ್ ಬೆಲೆಯಲ್ಲಿ ಇಬ್ಬರು ಸಿನಿಮಾ ನೋಡಬಹುದಾಗಿದೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, ”ಇಂದು ಭಾನುವಾರ ಹಾಗೂ ಗಾಂಧಿ ಜಯಂತಿಯಂತೆ ನೀವು ನಿಮ್ಮ ಕುಟುಂಬದವರೊಡನೆ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ವೀಕ್ಷಿಸಿ. ಈ ಎರಡು ದಿನ ಒಂದು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತವಿದ್ದು, ಆ ಉಚಿತ ಟಿಕೆಟ್ ಅನ್ನು ನಿಮ್ಮ ಮನೆಯ ಕೆಲಸದಾಕೆ ಅಥವಾ ಯಾವುದೇ ಮಹಿಳೆ ಅಥವಾ ಯುವತಿಗೆ ನೀಡಿ ನೀವು ಖುಷಿಯಾಗಿ, ಅವರಿಗೂ ಸಂತಸ ನೀಡಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:‘ನಾನು ನಕ್ಸಲ್ ಆಗಿದ್ದೆ’; ಕರಾಳ ಸತ್ಯ ಬಿಚ್ಚಿಟ್ಟ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಅಸಲಿಗೆ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತೆವಳುತ್ತಿದೆ. ಸೆಪ್ಟೆಂಬರ್ 28ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ದಿನ ಭಾರತದಲ್ಲಿ ಗಳಿಸಿದ್ದು ಕೇವಲ 85 ಲಕ್ಷ. ವಿಶ್ವದಾದ್ಯಂತ ಸುಮಾರು 1.30 ಕೋಟಿ ಹಣವನ್ನಷ್ಟೆ ಗಳಿಸಿತು. ಇದೀಗ ಬಿಡುಗಡೆ ಆದ ಮೂರು ದಿನಗಳಲ್ಲಿ ಸಿನಿಮಾವು ವಿಶ್ವದಾದ್ಯಂತ 3.25 ಕೋಟಿ ಹಣ ಗಳಿಸಿದೆ. ಸಿನಿಮಾದ ಒಟ್ಟು ಬಜೆಟ್ 10 ಕೋಟಿ ಆಗಿದ್ದು, ಹಾಕಿರುವ ಬಜೆಟ್ ಅನ್ನು ವಾಪಸ್ ಪಡೆಯುವುದು ಸಹ ಕಷ್ಟವಾಗಿ ಪರಿಣಮಿಸಿದೆ. ಹಾಗಾಗಿ ಈ ಉಚಿತ ಟಿಕೆಟ್ ಘೋಷಣೆ ಮಾಡಿ ಹೆಚ್ಚು ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಕ್ಕೂ ಇದೇ ರೀತಿಯ ಆಫರ್ ಅನ್ನು ನೀಡಲಾಗಿತ್ತು. ‘ಜವಾನ್’ ಸಿನಿಮಾವು 1000 ಕೋಟಿ ಕಲೆಕ್ಷನ್ ಮಾಡಿದ ಬೆನ್ನಲ್ಲೆ ಒಂದು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತ ಘೋಷಣೆ ಮಾಡಲಾಯ್ತು. ಈ ಯೋಜನೆ ‘ಜವಾನ್’ ಸಿನಿಮಾಕ್ಕೆ ವರ್ಕೌಟ್ ಆಯ್ತು. ಬೈ ಒನ್ ಗೆಟ್ ಒನ್ ಆಫರ್ನಲ್ಲಿ ಹಲವರು ‘ಜವಾನ್’ ಸಿನಿಮಾ ವೀಕ್ಷಿಸಿದ್ದರು. ಈಗ ಇದೇ ಆಫರ್ ಅನ್ನು ‘ದಿ ವ್ಯಾಕ್ಸಿನ್ ವಾರ್’ ತಂಡ ಬಿಡುಗಡೆ ಮಾಡಿದೆ ಆದರೆ ಇದು ವರ್ಕೌಟ್ ಆಗುತ್ತದೆಯೇ ಕಾದು ನೋಡಬೇಕಿದೆ.
ಇನ್ನು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವು ಭಾರತದ ವ್ಯಾಕ್ಸಿನ್ ನಿರ್ಮಾಣದ ಕತೆಯನ್ನು ಒಳಗೊಂಡಿದೆ. ಭಾರತದ ವಿಜ್ಞಾನಿಗಳ ತಂಡ ವ್ಯಾಕ್ಸಿನ್ ತಯಾರಿಗೆ ಎಷ್ಟೆಲ್ಲ ಕಷ್ಟಪಡಬೇಕಾಯ್ತು, ಭಾರತದ ಮಹಿಳಾ ವಿಜ್ಞಾನಿಗಳು ವ್ಯಾಕ್ಸಿನ್ ನಿರ್ಮಾಣದಲ್ಲಿ ವಹಿಸಿದ ಪಾತ್ರವೇನು? ವ್ಯಾಕ್ಸಿನ್ ತಯಾರಿಗೆ ವಿಲನ್ ಆಗಿ ನಿಂತಿದ್ದವರು ಯಾರು? ಇನ್ನೂ ಹಲವು ವಿಷಯಗಳನ್ನು ಈ ಸಿನಿಮಾದ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ನಾನಾ ಪಟೇಕರ್, ಪಲ್ಲವಿ ಜೋಶಿ, ಕನ್ನಡತಿ ಸಪ್ತಮಿ ಗೌಡ ಇನ್ನೂ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ